

ನವದೆಹಲಿ: ದೇಶದಲ್ಲಿ ಅತ್ಯುನ್ನತ ಸ್ಥಾನಗಳಲ್ಲಿ ಇರುವವರನ್ನು ಹತ್ತಿರ ಹೋಗಿ ಮಾತನಾಡಿಸುವುದು ಅಷ್ಟೇನೂ ಸುಲಭವಲ್ಲ. ಆದರೆ ಇಲ್ಲೊಬ್ಬ ಹಾಗೆ ಹತ್ತಿರದಲ್ಲೇ ಸಿಕ್ಕ ಫ್ರಾನ್ಸ್ ಅಧ್ಯಕ್ಷರಿಗೇ ಕಪಾಳಮೋಕ್ಷ ಮಾಡಿದ್ದಾನೆ. ಕೈಮುಗಿಯುತ್ತ ಹತ್ತಿರ ಬಂದರೂ ಅವರ ಕೆನ್ನೆಗೆ ಬಾರಿಸಿದ್ದಾನೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರಾನ್ ಇಂದು ಇದರಿಂದಾಗಿ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.
ಮ್ಯಾಕ್ರಾನ್ ಕೆನ್ನೆಗೆ ವ್ಯಕ್ತಿಯೊಬ್ಬ ಹೊಡೆದಿರುವ ವಿಡಿಯೋ ಹರಿದಾಡುತ್ತಿದ್ದು, ಅದು ನಿಜ ಎಂಬುದನ್ನು ಫ್ರಾನ್ಸ್ ಅಧ್ಯಕ್ಷರ ಕಾರ್ಯಾಲಯ ಸ್ಪಷ್ಟಪಡಿಸಿದೆ. ಆಗ್ನೇಯ ಫ್ರಾನ್ಸ್ನ ಸಣ್ಣ ಪಟ್ಟಣವೊಂದರಲ್ಲಿ ಇಂಥದ್ದೊಂದು ಘಟನೆ ಸಂಭವಿಸಿದೆ. ಟೈನ್ ಐಹೆರ್ಮಿಟೇಜ್ ಎಂಬಲ್ಲಿ ವಿದ್ಯಾರ್ಥಿಗಳನ್ನು ಹೋಟೆಲ್-ರೆಸ್ಟೋರೆಂಟ್ಗಳಲ್ಲಿ ಕೆಲಸ ಮಾಡುವಂತೆ ತರಬೇತಿ ನೀಡುತ್ತಿದ್ದ ಹೈಸ್ಕೂಲ್ಗೆ ಭೇಟಿ ನೀಡಿ, ಅಲ್ಲಿ ಬ್ಯಾರಿಕೇಡ್ ಆ ಕಡೆ ನಿಂತಿದ್ದ ಜನರ ಬಳಿಗೂ ತೆರಳಿ ವಿಷ್ ಮಾಡಲು ಕೈಮುಗಿಯುತ್ತ ಬಳಿಗೆ ಹೋಗಿದ್ದರು.
ಈ ಸಂದರ್ಭದಲ್ಲಿ ಒಬ್ಬ ಶೇಕ್ ಹ್ಯಾಂಡ್ ಮಾಡಲು ಮುಂದಾದ ಹಾಗೆ ಕಂಡರೂ, ಕೆಲವೇ ಕ್ಷಣಗಳಲ್ಲಿ ಅಲ್ಲಿನ ಸಂಪೂರ್ಣ ಬದಲಾಗಿದೆ. ಆ ವ್ಯಕ್ತಿ ಮ್ಯಾಕ್ರಾನ್ ಅವರ ಕೆನ್ನೆಗೆ ಬಾರಿಸಿದ್ದಾನೆ. ಕೂಡಲೇ ಅವರ ಗನ್ಮ್ಯಾನ್ಗಳು ಅಲ್ಲಿಂದ ಅವರನ್ನು ಬಚಾವ್ ಮಾಡಿ ಕರೆದೊಯ್ದಿದ್ದಾರೆ. ಈ ಸಂಬಂಧ ಇಬ್ಬರನ್ನು ವಶ ಪಡಿಸಿಕೊಳ್ಳಲಾಗಿದೆ ಎಂದಾಗಿದ್ದರೂ ಇನ್ನೂ ಖಚಿತ ವಿವರ ಬಹಿರಂಗಗೊಳ್ಳಬೇಕಿದೆ. ಮ್ಯಾಕ್ರಾನ್ ತಮ್ಮ ಭೇಟಿಯನ್ನು ಮುಂದುವರಿಸಿದ್ದರೂ, ಈ ಘಟನೆ ಕುರಿತು ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.