ಗಂಡನ ಕೊಂದು ಪ್ರಿಯಕರನ ಮನೆಯ ಹೋಮಕುಂಡದಲ್ಲಿ ಶವ ಸುಟ್ಟಿದ್ದ ಪತ್ನಿ: ಭಾಸ್ಕರ್​ ಶೆಟ್ಟಿ ಹಂತಕರಿಗೆ ಶಿಕ್ಷೆ ಪ್ರಕಟ

bhaskar shetty
Published on

ಉಡುಪಿ: 2016ರ ಜುಲೈ 28ರಂದು ಎನ್‌ಆರ್‌ಐ ಉದ್ಯಮಿ ಭಾಸ್ಕರ್ ಶೆಟ್ಟಿ(52)ಯನ್ನ ಪತ್ನಿಯೇ ತನ್ನ ಪ್ರಿಯಕರ ಮತ್ತು ಮಗನೊಂದಿಗೆ ಸೇರಿಕೊಂಡು ಕೊಂದು ಮೃತದೇಹವನ್ನ ಹೋಮಕುಂಡದಲ್ಲಿ ಹಾಕಿ ಸುಟ್ಟಿದ್ದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.

ಈ ಪ್ರಕರಣ ದೇಶ, ವಿದೇಶದಲ್ಲೂ ಸುದ್ದಿಯಾಗಿತ್ತು. ಅಂದು ಇಂದ್ರಾಳಿ ಮನೆಯಲ್ಲಿ ಭಾಸ್ಕರ ಶೆಟ್ಟಿ ಸ್ನಾನ ಮುಗಿಸಿ ಹೊರ ಬರುವಾಗ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ, ಈಕೆಯ ಪ್ರಿಯಕರ ನಂದಳಿಕೆ ನಿರಂಜನ ಭಟ್ಟ, ಭಾಸ್ಕರ್​ಶೆಟ್ಟಿ ಪುತ್ರ ನವನೀತ್ ಶೆಟ್ಟಿ ಈ ಮೂವರು ಸೇರಿಕೊಂಡು ಭಾಸ್ಕರ್​ ಶೆಟ್ಟಿಯ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ, ರಾಡಿನಿಂದ ತಲೆಗೆ ಹೊಡೆದು ಕೊಲೆಗೈದಿದ್ದರು. ಬಳಿಕ ಮೃತದೇಹವನ್ನು ಕಾರಿನಲ್ಲಿ ನಂದಳಿಕೆ ನಿರಂಜನ್ ಭಟ್ ಮನೆಗೆ ಸಾಗಿಸಿ, ಮೃತದೇಹ ಸುಡಲೆಂದೇ ನಿರ್ಮಿಸಲಾಗಿದ್ದ ಹೋಮಕುಂಡದಲ್ಲಿ ಮೃತದೇಹವನ್ನು ಸುಟ್ಟಿದ್ದರು. ಬಳಿಕ ಊರಿನ ಸಮೀಪವಿದ್ದ ನೀರಿನ ತೋಡಿಗೆ ಮೂಳೆ, ಬೂದಿಯನ್ನು ಬಿಸಾಡಿದ್ದರು. ಈ ಪ್ರಕರಣ ಸಂಬಂಧ ಉಡುಪಿ ಜಿಲ್ಲಾ ನ್ಯಾಯಾಲಯ ಇಂದು(ಸೋಮವಾರ) ಮಹತ್ವದ ತೀರ್ಪು ನೀಡಿದೆ. ‌

ಭಾಸ್ಕರ ಶೆಟ್ಟಿ ದುಬೈನಲ್ಲಿ ಬಹುಕೋಟಿ ರೂಪಾಯಿ ಉದ್ಯಮಿಯಾಗಿದ್ದರು. ಉಡುಪಿಯ ಇಂದ್ರಾಳಿಯಲ್ಲಿರುವ ತಮ್ಮ ಮನೆಗೆ ಒಂದು ದಿನ ಆಗಮಿಸಿದ್ದಾಗ ಅವರು ಪತ್ನಿಯ ಮೊಬೈಲ್​ನಲ್ಲಿ ಆಕೆ ಪ್ರಿಯಕರನೊಂದಿಗೆ ಅಶ್ಲೀಲ ಭಂಗಿಯಲ್ಲಿ ಇರುವುದನ್ನು ಗಮನಿಸಿದ್ದರು. ಹೀಗಾಗಿ ತಮ್ಮ ಎಲ್ಲ ಆಸ್ತಿಯನ್ನು ತಾಯಿಯ ಹೆಸರಿಗೆ ನೋಂದಣಿ ಮಾಡಿಸಲು ಭಾಸ್ಕರ ಶೆಟ್ಟಿ ಮುಂದಾಗಿದ್ದರು. ಇದಕ್ಕಾಗಿ ಪತಿ ವಕೀಲರ ಬಳಿ ಹೋಗಲಿರುವುದನ್ನು ತಿಳಿದ ಪತ್ನಿ ರಾಜೇಶ್ವರಿ ಪ್ರಿಯಕರನ ಜತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಳು. ಯೋಜನೆಯಂತೆ ಕೊಲೆ ಮಾಡಿದ್ದರು. 2016ರ ಜು.31ರಂದು ಭಾಸ್ಕರ್ ಶೆಟ್ಟಿ ತಾಯಿ ತನ್ನ ಮಗ ನಾಪತ್ತೆಯಾಗಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆಗ ಈ ಕೊಲೆ ಬೆಳಕಿಗೆ ಬಂದಿತ್ತು. ಬಳಿಕ ರಾಜೇಶ್ವರಿ, ಮಗ, ಪ್ರಿಯಕನರನ್ನು ಪೊಲೀಸರು ಬಂಧಿಸಿದ್ದರು.

ಈ ಪ್ರಕರಣ ಸಂಬಂಧ ವಾದ-ವಿವಾದ ಆಲಿಸಿದ್ದ ಕೋರ್ಟ್​, ಜೂ.8ರಂದು ಮಹತ್ವದ ತೀರ್ಪು ಪ್ರಕಟಿಸಿದೆ. ಸಾಕ್ಷ್ಯನಾಶ ಆರೋಪಿ ರಾಘವೇಂದ್ರನನ್ನು ಖುಲಾಸೆಗೊಳಿಸಿದ್ದು. ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ, ಜ್ಯೋತಿಷಿ ನಿರಂಜನ್ ಭಟ್ ಸಹಿತ ಮೂವರನ್ನೂ ದೋಷಿ ಎಂದು ಘೋಷಿಸಿದೆ. ಈ ಮೂವರು ಅಪರಾಧಿಗಳಿಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್. ಅವರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net