

ಬೆಂಗಳೂರು: ಇದೀಗವಷ್ಟೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೊನಾ ಕರ್ಫ್ಯೂ (ನೈಟ್ ಕರ್ಫ್ಯೂ) ಬಗ್ಗೆ ಇಂಗಿತ ವ್ಯಕ್ತಪಡಿಸಿ, ಅನಿವಾರ್ಯವಾದರೆ ಅಗತ್ಯವಿದ್ದಲ್ಲೆಲ್ಲ ಕರೊನಾ ಕರ್ಫ್ಯೂ ವಿಧಿಸುವ ಬಗ್ಗೆ ಚಿಂತನೆ ವ್ಯಕ್ತಪಡಿಸಿದ್ದರು. ಅದರ ಬೆನ್ನಿಗೇ ರಾಜ್ಯದಲ್ಲಿನ ನಿಯಂತ್ರಣ ಕ್ರಮವಾಗಿ ಮಾತುಕತೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಹಲವೆಡೆ ಹತ್ತು ದಿನಗಳ ಕಾಲ ಕರ್ಫ್ಯೂ ವಿಧಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರು, ಮೈಸೂರು, ಉಡುಪಿ, ಮಂಗಳೂರು, ಕಲಬುರಗಿ, ಬೀದರ್, ತುಮಕೂರು, ಮಣಿಪಾಲ ನಗರಗಳಿಗೆ ಸೀಮಿತವಾಗಿ ಹತ್ತು ದಿನಗಳ ಕಾಲ ಕರ್ಫ್ಯೂ ವಿಧಿಸಲಾಗವುದು. ಇದು ಏ.10ರಿಂದ ಏ. 20ರ ವರೆಗೆ ಪ್ರತಿದಿನ ರಾತ್ರಿ ಹತ್ತರಿಂದ ಬೆಳಗ್ಗಿನ 5 ಗಂಟೆಯವರೆಗೆ ಇರಲಿದೆ ಎಂದು ಅವರು ಸಿಎಂ ಘೋಷಿಸಿದ್ದಾರೆ. ಈ ಹತ್ತು ದಿನಗಳ ಕರೊನಾ ಕರ್ಫ್ಯೂಗೆ ಜನರು ಸಹಕರಿಸಬೇಕು. ಮುಂದೆ ಲಾಕ್ಡೌನ್ ಆಗಬಾರದು ಎಂದಿದ್ದರೆ ಈಗಿನ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದೂ ಸಿಎಂ ಎಚ್ಚರಿಕೆಯನ್ನು ನೀಡಿದ್ದಾರೆ.
ಮಾತ್ರವಲ್ಲ ಎಲ್ಲರೂ ಮಾಸ್ಕ್ ಧರಿಸಬೇಕು. ಮಾಸ್ಕ್ ಕಡ್ಡಾಯ ನಿಯಮವನ್ನು ಉಲ್ಲಂಘಿಸಿದರೆ ದಂಡ ಹಾಕುವ ಜತೆಗೆ ಸದ್ಯದಲ್ಲೇ ದಂಡದ ಮೊತ್ತವನ್ನೂ ಹೆಚ್ಚಿಸಬೇಕಾಗುತ್ತದೆ ಎಂಬುದಾಗಿಯೂ ಹೇಳಿದ್ದಾರೆ. ಕರೊನಾ ಕರ್ಫ್ಯೂ ಇದ್ದರೂ ರಾತ್ರಿ ವೇಳೆ ಪ್ರಯಾಣಿಸುವವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಅಗತ್ಯ ವಸ್ತುಗಳಿಗೆ ಯಾವುದೇ ಅಡ್ಡಿ ಇರುವುದಿಲ್ಲ. ರಾತ್ರಿ ಸಮಯದಲ್ಲಿ ಓಲಾ, ಉಬರ್ಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ನೈಟ್ ಪಾರ್ಟಿ, ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಇತ್ಯಾದಿಗಳಿಗೆ ರಾತ್ರಿ 10 ಗಂಟೆ ಡೆಡ್ಲೈನ್ ಆಗಿರುತ್ತದೆ ಎಂದು ಅವರು ಹೇಳಿದ್ದಾರೆ.