

ನವದೆಹಲಿ: 'ನಾವೆಲ್ಲ ಮತ್ತೊಮ್ಮೆ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ಆದರೆ ಈ ಸಲ ನಮ್ಮೊಂದಿಗೆ ಅನುಭವವಿದೆ, ಸಂಪನ್ಮೂಲಗಳಿವೆ ಜತೆಗೆ ಲಸಿಕೆಯೂ ಇದೆ..'
- ಹೀಗೆಂದವರು ಪ್ರಧಾನಮಂತ್ರಿ ನರೇಂದ್ರ ಮೋದಿ.
ದೇಶಾದ್ಯಂತ ಕರೊನಾ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಪ್ರಧಾನಿ ಮೋದಿ, ಈ ಮಾತನ್ನು ಹೇಳಿದರು.
ಈಗ ಸವಾಲಿನ ಪರಿಸ್ಥಿತಿ ಮತ್ತೊಮ್ಮೆ ಸೃಷ್ಟಿಯಾಗಿದೆ. ಇದನ್ನು ಎದುರಿಸಲು ತಾವೆಲ್ಲರೂ ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡಲಬೇಕು ಎಂಬುದಾಗಿಯೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಲ್ಲಿ ಪ್ರಧಾನಿಯವರು ಕೇಳಿದ್ದಾರೆ. ಇನ್ನು ಕೋವಿಡ್ ಸೋಂಕನ್ನು ನಿಯಂತ್ರಿಸುವ ಹಾಗೂ ತಡೆಯುವ ನಿಟ್ಟಿನಲ್ಲಿ ಎಲ್ಲರೂ ಕರೊನಾ ಟೆಸ್ಟ್ ಬಗ್ಗೆ ಹೆಚ್ಚಿನ ಒತ್ತು ಕೊಡಬೇಕು. ಅದರಲ್ಲೂ ಶೇ. 70 ಆರ್ಟಿ-ಪಿಸಿಆರ್ ಟೆಸ್ಟ್ ನಡೆಸಬೇಕು. ಇದರಿಂದ ಸೋಂಕಿನ ಪ್ರಕರಣಗಳು ಹೆಚ್ಚಿಗೆ ಕಂಡುಬರಬಹುದು. ಅದಾಗ್ಯೂ ಟೆಸ್ಟಿಂಗ್ ಪ್ರಮಾಣ ಹೆಚ್ಚೇ ನಡೆಯಲಿ. ಅಲ್ಲದೆ ಮಾದರಿ ಸಂಗ್ರಹ ಕೂಡ ಸಮರ್ಪಕ ರೀತಿಯಲ್ಲಿ ಆಗಬೇಕು, ಅದು ಸೂಕ್ತ ಉಸ್ತುವಾರಿಯಲ್ಲೇ ಪರೀಕ್ಷಿಸಲ್ಪಡಬೇಕು ಎಂಬುದಾಗಿ ಮೋದಿ ಸೂಚನೆ ನೀಡಿದ್ದಾರೆ.
ವ್ಯಾಪಾರಸ್ಥರಿಗೆ ಮತ್ತೆ ಆಘಾತ: ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಮತ್ತೆ ಕರ್ಫ್ಯೂ ವಿಧಿಸುವ ಕುರಿತು ಮೋದಿ ಇಂಗಿತ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ರಾತ್ರಿ ಕರ್ಫ್ಯೂ ವಿಧಿಸುವ ಬಗ್ಗೆ ಒಲವು ತೋರಿರುವ ಅವರು, ಅಂಥ ಕಡೆ ಅದನ್ನು ನೈಟ್ ಕರ್ಫ್ಯೂ ಎಂದು ಕರೆಯುವ ಬದಲು ಕರೊನಾ ಕರ್ಫ್ಯೂ ಎಂದು ಕರೆಯುವುದೇ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಅಗತ್ಯ ಇರುವ ಕಡೆಯಲ್ಲೆಲ್ಲ ರಾತ್ರಿ 9 ಅಥವಾ 10ರಿಂದ ಬೆಳಗ್ಗೆ 5 ಅಥವಾ 6 ಗಂಟೆಯವರೆಗೆ ಕರ್ಫ್ಯೂ ವಿಧಿಸಲು ಆರಂಭಿಸಬಹುದು ಎಂಬ ಚಿಂತನೆಯನ್ನೂ ಅವರು ಮುಂದಿಟ್ಟಿದ್ದಾರೆ. ಒಂದು ವೇಳೆ ಇದು ಗಂಭೀರವಾಗಿ ಅನುಷ್ಠಾನಗೊಂಡಲ್ಲಿ ವ್ಯಾಪಾರಸ್ಥರು ಮತ್ತೆ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆಗಳಿವೆ.‘