More

    ಅಂಪೈರ್ ಜತೆ ವಾಗ್ವಾದ ಪ್ರಕರಣ: ಸ್ಯಾಮ್ಸನ್‌ಗೆ ದಂಡ

    ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 20 ರನ್‌ಗಳ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಕೈಚೆಲ್ಲಿದ್ದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಪಂದ್ಯ ಸಂಭಾವನೆಯ ಶೇ.30 ದಂಡದ ಶಿಕ್ಷೆಗೆ ಗುರಿಯಾಗಿದ್ದಾರೆ.
    222 ರನ್ ಚೇಸಿಂಗ್‌ನಲ್ಲಿ 86 ರನ್‌ಗಳಿಸಿದ ಸ್ಯಾಮ್ಸನ್ ಮಾಡಿದ ತಪ್ಪನ್ನು ಬಿಸಿಸಿಐ ನಿರ್ದಿಷ್ಟವಾಗಿ ಪ್ರಕಟಣೆಯಲ್ಲಿ ತಿಳಿಸಿಲ್ಲ. ಆದರೆ 16ನೇ ಓವರ್‌ನಲ್ಲಿ ಸಂಜು ಸ್ಯಾಮ್ಸನ್ ಲಾಂಗ್ ಆನ್‌ನತ್ತ ಬಾರಿಸಿದ ಚೆಂಡನ್ನು ಬೌಂಡರಿ ಗೆರೆ ಬಳಿ ಶೈ ಹೋಪ್ ಕ್ಯಾಚ್ ಪಡೆದರು. ಕ್ಯಾಚ್ ತೆಗೆದುಕೊಳ್ಳುವಾಗ ಫೀಲ್ಡರ್ ಶೈ ಹೋಪ್ ಶೂಗಳು ಬೌಂಡರಿ ಗೆರೆ ಸ್ಪರ್ಶಿಸಿದೆಯೇ ಎಂಬುದು ಪ್ರಶ್ನೆಯಾಗಿತ್ತು. ಮೂರನೇ ಅಂಪೈರ್ ಪರಿಶೀಲಿಸಿ ಔಟ್ ಎಂದು ತೀರ್ಪು ನೀಡಿದರು.

    ಆರಂಭದಲ್ಲಿ ಡಗೌಟ್ ಕಡೆಗೆ ಸಾಗಿದ ಸ್ಯಾಮ್ಸನ್, ಅರ್ಧಕ್ಕೆ ಹಿಂದಿರುಗಿ ಬಂದು ಆನ್‌ಫೀಲ್ಡ್ ಅಂಪೈರ್‌ಗಳೊಂದಿಗೆ ತೀರ್ಪಿನ ಬಗ್ಗೆ ವಾಗ್ವಾದ ನಡೆಸಿದರು. ಇದು ಐಪಿಎಲ್‌ನ ನೀತಿ ಸಂಹಿತೆಯ ಆರ್ಟಿಕಲ್ 2.8ರ ಒಂದನೇ ಹಂತದ ನಿಯಮ ಉಲ್ಲಂಘನೆ ಎನಿಸಿದೆ. ಆರ್ಟಿಕಲ್ 2.8ರ ಅಡಿಯಲ್ಲಿ ಅಂಪೈರ್‌ನ ನಿರ್ಧಾರಕ್ಕೆ ಅತಿಯಾದ, ಸ್ಪಷ್ಟವಾದ ನಿರಾಸೆ ತೋರುವುದು, ಟಿವಿ ಅಂಪೈರ್ ನಿರ್ಧಾರಕ್ಕೆ ವಾದ ಮಾಡುವುದು ಅಥವಾ ಅಂಪೈರ್‌ನೊಂದಿಗೆ ಸುದೀರ್ಘ ಚರ್ಚೆ ನಡೆಸುವುದು ನಿಯಮದ ಉಲ್ಲಂಘನೆ ಎನಿಸಿದೆ. ಏ.10ರಂದು ಜೈಪುರದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್‌ಗಾಗಿ ಸ್ಯಾಮ್ಸನ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts