More

    ಮಳೆಯಿಂದ ಕಾವೇರಿಗೆ ಬಂತು ಮತ್ತೆ ಜೀವಕಳೆ

    ಸುನಿಲ್ ಪೊನ್ನೇಟಿ ಮಡಿಕೇರಿ
    ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಳೆ ತಂಪಾಗಿರುವುದು ಮಾತ್ರವಲ್ಲದೆ, ನದಿಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರಿನ ಹರಿವು ಪ್ರಾರಂಭವಾಗಿದೆ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದವರು ಸಣ್ಣದಾಗಿ ನಿಟ್ಟುಸಿರು ಬಿಡುವಂತಾಗಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ಮಾರ್ಚ್‌ನಲ್ಲೇ ನದಿಯಿಂದ ಸ್ಥಗಿತವಾಗಿದ್ದ ನೀರಿನ ನೀರಿನ ಪೂರೈಕೆ ಶುಕ್ರವಾರ(ಮೇ೧೭) ಪುನಾರಂಭವಾಗಲಿದೆ. ಮಡಿಕೇರಿಯಲ್ಲಿ ಕಳೆದ ವಾರದಿಂದ ಕಾಣಿಸಿಕೊಂಡಿದ್ದ ಸಮಸ್ಯೆಗೂ ಪರಿಹಾರ ಸಿಕ್ಕಂತಾಗಿದೆ.
    ಮೇ ೧೧ರಿಂದ ಕೃತಿಕಾ ಮಳೆ ಶುರುವಾಗುತ್ತಿದ್ದಂತೆಯೇ ಶುಭ ಸೂಚನೆ ನೀಡಿದ್ದು ಮುಂಗಾರಿಗೂ ಮುಂಚಿತವಾಗಿಯೇ ಜಿಲ್ಲೆಯಾದ್ಯಂತ ನಿಧಾನಕ್ಕೆ ಮಳೆಗಾಲದ ಲಕ್ಷಣಗಳು ಕಾಣಿಸಿಕೊಳ್ಳತೊಡಗಿದೆ. ಮೇ ಮೊದಲ ವಾರದಲ್ಲಿ ಭಾಗಮಂಡಲ, ನಾಪೋಕ್ಲು, ಮೂರ್ನಾಡು, ಮರಗೋಡು ಭಾಗದಲ್ಲಿ ಕಾಣಿಸಿಕೊಂಡಿದ್ದ ಮಳೆ ೨ನೇ ವಾರದಲ್ಲಿ ಜಿಲ್ಲೆಯ ಬಹುತೇಕ ಭಾಗಗಳಿಗೆ ವ್ಯಾಪಿಸಿದೆ. ಕಳೆದ ಮೂರು ದಿನಗಳಿಂದ ಸಂಜೆಯಾಗುತ್ತಿದ್ದಂತೆಯೇ ಮಳೆ ಸುರಿಯಲು ಆರಂಭವಾಗುತ್ತಿದ್ದು. ಗುಡುಗು, ಸಿಡಿಲು, ಗಾಳಿಯೊಂದಿಗೆ ಅಬ್ಬರಿಸುತ್ತಿದೆ. ಮಳೆಯ ಪರಿಣಾಮದಿಂದಾಗಿ ಒಂದು ವಾರದ ಹಿಂದೆ ಇದ್ದ ಸೆಖೆಯ ಅನುಭವ ಈಗಿಲ್ಲ. ವಾತಾವರಣ ಕೂಡ ತಂಪಾಗಿದ್ದು, ಆಹ್ಲಾದಕರವಾಗಿದೆ.
    ಮಳೆಯ ಮತ್ತೊಂದು ಪರಿಣಾಮವೆಂದರೆ ಬತ್ತಿದ ನದಿಗಳಿಗೆ ಸ್ವಲ್ಪ ಸ್ವಲ್ಪ ಜೀವ ಕಳೆ ಬರುತ್ತಿದೆ. ಏಪ್ರಿಲ್ ಕೊನೆಯ ವಾರದಲ್ಲಿ ಅಲ್ಲಲ್ಲಿ ಸುರಿದ ಮಳೆಯಿಂದಾಗಿ ಕಾಫಿ ತೋಟದ ನೀರಿನ ಬೇಡಿಕೆ ಕಡಿಮೆ ಆಯಿತು. ಹಾಗಾಗಿ ನದಿ ಪಾತ್ರದಲ್ಲಿ ನೀರಿದ್ದ ಕಡೆಗಳಲ್ಲಿ ಭಾರಿ ಸಾಮರ್ಥ್ಯದ ಪಂಪ್‌ಸೆಟ್ ಬಳಸಿ ನೀರು ಹಾಯಿಸುತ್ತಿದ್ದವರು ತಮ್ಮ ಪಂಪ್‌ಸೆಟ್‌ಗಳಿಗೆ ವಿಶ್ರಾಂತಿ ಕೊಟ್ಟರು. ಇದರಿಂದಾಗ ನದಿಯಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳಲು ಅನುಕೂಲ ಆಯಿತು. ಮಳೆಯ ಪ್ರಮಾಣ ಜಾಸ್ತಿ ಆಗುತ್ತಿದ್ದಂತೆಯೇ ಗುಂಡಿಗಳಲ್ಲಿ ನಿಂತಿದ್ದ ನೀರು ಹರಿಯಲು ಪ್ರಾರಂಭವಾಯಿತು. ಇದರಿಂದಾಗಿ ಕಾವೇರಿ ನದಿಯಲ್ಲಿ ದುಬಾರೆಯಿಂದ ಕೆಳಭಾಗದಲ್ಲಿ ನೀರು ಕಾಣಿಸಿಕೊಳ್ಳಲಾರಂಭಿಸಿತ್ತು. ನದಿಯಲ್ಲಿ ಮೇಲೆದ್ದೆದ್ದ ಬಂಡೆಗಳೆಲ್ಲಾ ಇದೀಗ ಮುಳುಗಲು ಶುರುವಾಗಿದ್ದು, ನೀರು ಕೆಳಪಾತ್ರಕ್ಕೆ ಹರಿಯುತ್ತಿದೆ.
    ಕಾವೇರಿ ಮಾತ್ರವಲ್ಲದೆ ಜಿಲ್ಲೆಯ ಇತರ ಪ್ರಮುಖ ನದಿಗಳಾದ ಲಕ್ಷ್ಮಣತೀರ್ಥ, ಹೇಮಾವತಿ, ಹಾರಂಗಿ ಹಾಗೂ ಇವುಗಳಿಗೆ ಸೇರುವ ಚಿಕ್ಕ ಪುಟ್ಟ ತೊರೆಗಳಲ್ಲೂ ಸಣ್ಣ ಪ್ರಮಾಣದಲ್ಲಿ ನೀರು ಹರಿಯಲಾರಂಭಿಸಿದೆ. ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಅಣೆಕಟ್ಟೆಗೂ ನೀರಿನ ಒಳಹರಿವು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಗುರುವಾರದ ಮಾಹಿತಿ ಪ್ರಕಾರ ೨೮೫೯ ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ೨೮೨೨.೯೨ ಅಡಿಗಳಷ್ಟು ನೀರಿದೆ. ಕಳೆದ ವರ್ಷ ಇದೇ ದಿನ ೨೮೧೯.೮೫ ಅಡಿಗಳಷ್ಟು ನೀರಿತ್ತು.
    ಜಲಾಶಯಕ್ಕೆ ೨೦೦ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಕಳೆದ ವರ್ಷ ಕೇವಲ ೬೦ ಕ್ಯೂಸೆಕ್ ಒಳಹರಿವು ಇತ್ತು. ಪ್ರಸ್ತುತ ನದಿಗೆ ೨೦೦ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಕಳೆದ ವರ್ಷ ನದಿಗೆ ೫೦, ಕಾಲುವೆಗೆ ೪೦ ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು. ೮.೫ ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ ೨.೧೮೪ ಟಿಎಂಸಿ ಬಳಕೆಯೋಗ್ಯ ನೀರಿದೆ. ಕಳೆದ ವರ್ಷ ಈ ಪ್ರಮಾಣ ೧.೯೦೬ ಕ್ಯೂಸೆಕ್ಸ್‌ಗಳಿಷ್ಟು ನೀರಿತ್ತು.
    ನದಿಗಳಲ್ಲಿ ನೀರಿನ ಹರಿವು ಶುರುವಾಗುತ್ತಿದ್ದಂತೆಯೇ ನಗರ ನೀರು ಸರಭರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲೆಯ ಪ್ರಮುಖ ವಾಣಿಜ್ಯ ನಗರ ಕುಶಾಲನಗರದಲ್ಲಿ ಈ ವರ್ಷ ದೊಡ್ಡ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿತ್ತು. ಮಾರ್ಚ್ ತಿಂಗಳಿನಲ್ಲೇ ಈ ಭಾಗದಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವು ಸ್ಥಗಿತವಾಗಿತ್ತು. ಹಾಗಾಗಿ ಮಾ. ೧೨ರಿಂದಲೇ ಪಟ್ಟಣಕ್ಕೆ ಕಾವೇರಿ ನೀರಿನ ಪೂರೈಕೆ ಸ್ಥಗಿತವಾಗಿತ್ತು. ಅಲ್ಲಿಂದ ಈಚೆಗೆ ಗುರುವಾರದ (ಮೇ ೧೬) ತನಕವೂ ಟ್ಯಾಂಕರ್‌ಗಳ ಮೂಲಕ ನೀರಿನ ಪೂರೈಕೆ ಮಾಡಲಾಗುತ್ತಿತ್ತು.
    ಪಟ್ಟಣದ ಎಲ್ಲಾ ಬಡಾವಣೆಗಳಿಗೂ ಕೊಳವೆ ಬಾವಿಗಳ ನೀರನ್ನು ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಲಾಗುತ್ತಿತ್ತು. ಆದರೆ ಕಳೆದ ೨ ವಾರಗಳಿಂದ ಕೊಳವೆಬಾವಿಗಳಲ್ಲೂ ನೀರಿನ ಮಟ್ಟ ಕುಸಿಯುತ್ತಾ ಬರುತ್ತಿದ್ದ ಕಾರಣ ಆತಂಕದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಅಷ್ಟರಲ್ಲಿ ಪ್ರಕೃತಿಯೇ ಸಮಸ್ಯೆಗೆ ಪರಿಹಾರ ನೀಡಿದ್ದು, ಜನತೆ ನಿರಾಳರಾಗುವಂತೆ ಮಾಡಿದೆ. ಕುಶಾಲನಗರಕ್ಕೆ ಕುಡಿಯುವ ನೀರಿನ ಪೂರೈಕೆ ಜವಾಬ್ದಾರಿ ಹೊತ್ತುಕೊಂಡಿರುವ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕುಶಾಲನಗರ ಪುರಸಭೆ ವ್ಯಾಪ್ತಿಗೆ ನೀರು ಪೂರೈಸಲು ಕಾವೇರಿ ನದಿಯನ್ನೇ ಪ್ರಮುಖ ಮೂಲವಾಗಿ ಬಳಸುತ್ತಿದ್ದು, ಶುಕ್ರವಾರದಿಂದ (ಮೇ ೧೭) ಕಾವೇರಿ ನೀರು ಮತ್ತೆ ಪಟ್ಟಣದ ಮನೆ ಮನೆಗಳಿಗೆ ಸರಬರಾಜು ಆಗಲಿದೆ.
    ಕುಶಾಲನಗರ ಪುರಸಭೆ ವ್ಯಾಪ್ತಿಯ ಅಂದಾಜು ೩೨ ಸಾವಿರ ಜನಸಂಖ್ಯೆಗೆ ಪ್ರತಿಯೊಬ್ಬರಿಗೂ ತಲಾ ೧೩೫ ಲೀಟರ್‌ನಂತೆ ದಿನಕ್ಕೆ ಸುಮಾರು ೪೦ ಲಕ್ಷ ಲೀಟರ್‌ಗಳಷ್ಟು ನೀರು ಬೇಕಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಸುಮಾರು ೩೦ ಲಕ್ಷ ಲೀಟರ್‌ಗಳಷ್ಟು ನೀರು ಪೂರೈಕೆ ಮಂಡಳಿಯಿಂದ ಸಾಧ್ಯವಾಗುತ್ತಿದೆ. ಇದೀಗ ಸುಮಾರು ೨ ತಿಂಗಳ ನಂತರ ಮತ್ತೆ ನದಿ ನೀರು ಸರಬರಾಜು ಹಿನ್ನೆಲೆಯಲ್ಲಿ ಮಂಡಳಿ ಭರದ ಸಿದ್ಧತೆ ನಡೆಸಿದ್ದು, ಪಂಪ್ ಹೌಸ್, ನೀರು ಶುದ್ಧೀಕರಣ ಘಟಕದಲ್ಲಿ ಸ್ವಚ್ಛತೆ ಮತ್ತು ಸಣ್ಣಪುಟ್ಟ ದುರಸ್ಥಿ ಕೆಲಸಗಳನ್ನು ಮಾಡಲಾಗುತ್ತಿದೆ.

    ಮಡಿಕೇರಿಯಲ್ಲೂ ನಗರಕ್ಕೆ ನೀರು ಪೂರೈಕೆಯ ಪ್ರಮುಖ ಮೂಲ ಕೂಟುಹೊಳೆಯಲ್ಲಿ ನೀರಿನ ಹರಿವು ಕ್ಷೀಣಿಸಿರುವುದು ಆತಂಕಕ್ಕೆ ಕಾರಣವಾಗಿತ್ತು. ೪೦ ಸಾವಿರದಷ್ಟು ಜನಸಂಖ್ಯೆಯ ಮಡಿಕೇರಿಯಲ್ಲಿ ತಲಾ ೧೩೫ ಲೀ.ನಂತೆ ದಿನಕ್ಕೆ ೫.೬೦ ದಶಲಕ್ಷ ಲೀಟರ್ ನೀರಿನ ಅಗತ್ಯವಿದ್ದು, ಸಾಮಾನ್ಯ ದಿನಗಳಲ್ಲಿ ೪ ದಶಲಕ್ಷ ಲೀ. ನೀರು ಪೂರೈಕೆ ಮಾಡಲಾಗುತ್ತಿದೆ. ಕೂಟುಹೊಳೆ, ರೋಷನಾರ ಕೆರೆ, ಕನ್ನಂಡಬಾಣೆ, ಕುಂಡಾ ಮೇಸ್ತ್ರಿ, ತೆರೆದ ಬಾವಿಗಳು ಹಾಗೂ ಕೊಳವೆ ಬಾವಿಗಳನ್ನು ಬಳಸಿಕೊಂಡು ನಗರದ ನೀರಿನ ಅಗತ್ಯತೆ ಪೂರೈಸಲಾಗುತ್ತದೆ. ಆದರೆ ನಗರಕ್ಕೆ ನೀರೊದಗಿಸುವ ಪ್ರಮುಖ ಮೂಲವಾಗಿರುವ ಕೂಟುಹೊಳೆಯಲ್ಲಿ ನೀರು ಕಡಿಮೆ ಆದ ಕಾರಣ ನೀರಿನ ಬಳಕೆ ಮೇಲೆ ನಿರ್ಬಂಧ ಹೇರಿ ಕಳೆದ ವಾರ ಮಡಿಕೇರಿ ನಗರಸಭೆ ಪೌರಾಯುಕ್ತರು ಆದೇಶ ಮಾಡಿದ್ದರು. ಇದೀಗ ಉತ್ತಮ ಮಳೆ ಆಗುತ್ತಿರುವ ಕಾರಣ ಮಡಿಕೇರಿಯಲ್ಲೂ ಆತಂಕ ದೂರವಾಗಿದೆ.

    ೨೦೧೮ರ ಆಗಸ್ಟ್‌ನಲ್ಲಿ ಕೊಡಗಿನಲ್ಲಿ ಕುಂಭದ್ರೋಣ ಮಳೆ ಸುರಿದಿದ್ದಲ್ಲದೆ ಭೂಕುಸಿತಗಳು ಸಂಭವಿಸಿ ದೊಡ್ಡ ಮಟ್ಟಿಗೆ ಹಾನಿ ಆಗಿತ್ತು. ಆದರೆ ಅದೇ ವರ್ಷ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಈಗಿನಂಥದ್ದೇ ಪರಿಸ್ಥಿತಿ ಇತ್ತು. ಕಾವೇರಿ ಸೇರಿದಂತೆ ಜಿಲ್ಲೆಯ ನದಿಗಳಲ್ಲಿ ನೀರಿನ ಹರಿವು ಸಂಪೂರ್ಣ ಸ್ಥಗಿತವಾಗಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿತ್ತು. ಆ ವರ್ಷವೂ ಟ್ಯಾಂಕರ್‌ಗಳ ಮೂಲಕ ಮನೆ ಮನೆಗಳಿಗೆ ನೀರು ಪೂರೈಕೆ ಮಾಡಲಾಗಿತ್ತು. ನಂತರ ಮೇ ತಿಂಗಳಿನಲ್ಲಿ ಮಳೆ ಬೀಳಲು ಆರಂಭವಾದ ಮೇಲೆ ಪರಿಸ್ಥಿತಿ ನಿಧಾನಕ್ಕೆ ಸುಧಾರಿಸಿಕೊಂಡಿತ್ತು. ಈ ವರ್ಷ ಪರಿಸ್ಥಿತಿ ೨೦೧೮ಕ್ಕಿಂತಲೂ ವಿಕೋಪಕ್ಕೆ ಹೋಗಿತ್ತು. ಇನ್ನು ಒಂದು ವಾರದಲ್ಲಿ ಮಳೆಯಾಗದಿದ್ದರೆ ಬಹುತೇಕ ಕೊಳವೆ ಬಾವಿಗಳೂ ಕೈಕೊಡುವ ಹಂತ ತಲುಪಿದ್ದವು. ಆದರೆ ಈಗ ಮಳೆ ಬಂದಿರುವುದರಿಂದ ಸಮಸ್ಯೆ ದೂರವಾದಂತಾಗಿದೆ.

    ಉತ್ತಮ ಮಳೆ ಆಗುತ್ತಿರುವುದರಿಂದ ನದಿಯಲ್ಲಿ ನೀರಿನ ಹರಿವಿನ ಮಟ್ಟ ಸುಧಾರಿಸಿದೆ. ಮನೆಗಳಿಗೆ ನೀರು ಪೂರೈಕೆ ಮಾಡಬಹುದಾದಷ್ಟು ನೀರು ನದಿಯಲ್ಲಿ ಬರುತ್ತಿದೆ. ಹಾಗಾಗಿ ಶುಕ್ರವಾರದಿಂದ (ಮೇ೧೭) ನೀರು ಪೂರೈಕೆ ಪುನಾರಂಭಿಸಲಾಗುವುದು. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪಂಪ್‌ಹೌಸ್, ನೀರು ಶುದ್ಧೀರಣ ಘಟಕವನ್ನು ಸ್ವಚ್ಛಗೊಳಿಸಲಾಗಿದ್ದು, ಸಣ್ಣ-ಪುಟ್ಟ ನಿರ್ವಹಣಾ ಕೆಲಸಗಳನ್ನು ಮಾಡಲಾಗುತ್ತಿದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಅನಾವಶ್ಯಕ ನೀರು ಪೋಲಾಗುವುದು ತಡೆಗಟ್ಟಬೇಕು.
    ಆನಂದ್, ಸಹಾಯಕ ಅಭಿಯಂತರ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

    ಮುಂದಿನ ೭ ದಿನಗಗಳ ಕಾಲ ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಭಾರೀ ಗಾಳಿಯೊಂದಿಗೆ ಗುಡುಗು ಸಹಿತ ಭಾರಿ ಮಳೆ ಆಗುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಮೇ ೧೫ರಿಂದ ಮೇ ೧೯ರ ತನಕ ಮೋಡ ಕವಿದ ವಾತಾವರಣ ಇದ್ದು, ಮಳೆಯಾಗಲಿದೆ. ಗರಿಷ್ಠ ಉಷ್ಣಾಂಶ ೩೨.೬-೩೩ ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ ೨೧.೨-೨೨ ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆಯಿದೆ.
    ಡಾ. ಸುಮಂತ್‌ಕುಮಾರ್ ಬಿ.ವಿ., ಸಹಸಂಶೋಧಕ, ಗ್ರಾಮೀಣ್ ಕೃಷಿ ಮೌಸುಮ್ ಸೇವಾ ಕೇಂದ್ರ, ನಾಗೇನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts