ಕೊಲೆ ಮಾಡುವವನು ಆತುರದಲ್ಲಿ ಮಾಡಿರ್ತಾನೆ … ಸ್ವಲ್ಪ ಸಮಯ ಕೊಡಬೇಕಿತ್ತು, ಏನೋ ಪರಿಹಾರ ಕಂಡು ಹಿಡಿಯಬಹುದಿತ್ತಲ್ಲ : ದರ್ಶನ್

darshan
Published on

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್​, ಪವಿತ್ರಾ ಗೌಡ ಸೇರಿದಂತೆ 19ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ದಿನ ಕಳೆದಂತೆ ಡಿ ಗ್ಯಾಂಗ್​ನ ಹೇಯ ಕೃತ್ಯ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಸ್ಟಾರ್​ ನಟನೊಬ್ಬ ತನ್ನ ಅಭಿಮಾನಿ ಮೇಲೆಯೇ ಇಂತಹ ಹೇಯ ಕೃತ್ಯ ಎಸಗಿದ್ದಾನೆ ಎಂಬ ವಿಚಾರ ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಮಾಜಕ್ಕೆ ಮಾದರಿಯಾಗಬೇಕಿದ್ದ ನಟನೇ ಇಂದು ತಲೆತಗ್ಗಿಸುವ ಕೆಲಸ ಮಾಡಿದ್ದು, ಈ ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ರೇಣುಕಸ್ವಾಮಿ ಕೊಲೆ ಪ್ರಕರಣ ಹೊರ ಬರುತ್ತಿದ್ದಂತೆಯೇ ನಟ ದರ್ಶನ್​ರ ವಿರುದ್ಧ ಹೊಸ ಹೊಸ ಆರೋಪಗಳು ಕೇಳಿ ಬರುತ್ತಿದ್ದು, ಅವರ ತೂಗುದೀಪ ಫಾರ್ಮ್​ಹೌಸ್​ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಎತ್ತಿನ ಕೊಂಬು ಚುಚ್ಚಿ ಗಾಯವಾದಾಗ ದರ್ಶನ್​ ಸಹಾಯ ಮಾಡಲಿಲ್ಲ ಎಂಬ ಆರೋಪ ಮೊನ್ನೆಯಷ್ಟೇ ಕೇಳಿಬಂತು. ಅಲ್ಲದೇ, ಸಹಾಯ ಕೇಳಲು ಹೋದಾಗ ನಾಯಿ ಛೂ ಬಿಟ್ಟಿದ್ದರು ಎಂದು ಸಂತ್ರಸ್ತನ ಸಂಬಂಧಿಕರು ಮಾಧ್ಯಮದ ಮುಂದೆ ಹೇಳಿದ್ದರು. ಇದೆಲ್ಲದರ ನಡುವೆ ಈ ಹಿಂದೆ ದರ್ಶನ್ ಅವರ ಮ್ಯಾನೇಜರ್​ ಆಗಿದ್ದ ಮಲ್ಲಿಕಾರ್ಜುನ್​ ನಾಪತ್ತೆ ಪ್ರಕರಣವೂ ಇದೀಗ ಹಲವು ಅನುಮಾನಗಳನ್ನ ಹುಟ್ಟಿ ಹಾಕಿದೆ.​ ಇದರ ನಡುವೆಯೆ ದರ್ಶನ್ ಮಾತನಾಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.

ನಟ ದರ್ಶನ್​ ಚಿತ್ರರಂಗದಲ್ಲಿ ಕಷ್ಟಪಟ್ಟು ಮೇಲೆ ಬಂದಿದ್ದು, ಅವರ ನಡೆದು ಬಂದ ಹಾದಿ ಇವತ್ತಿಗೂ ಅನೇಕರಿಗೆ ಸ್ಪೂರ್ತಿಯಾಗಿ ನಿಂತಿದೆ. ಅವರು ಸದಾ ತಮ್ಮ ಸಾಮಾಜಿಕ ಕಳಕಳಿ ಹಾಗೂ ಬುದ್ದಿಮಾತುಗಳನ್ನು ಹೇಳುತ್ತ ಅಭಿಮಾನಿಗಳಿಗೆ ಅಚ್ಚುಮೆಚ್ಚು ಎನ್ನಿಸಿಕೊಂಡಿದ್ದರು. ಇದೀಗ ಬುದ್ದಿಮಾತು ಹೇಳುತ್ತಿದ್ದ ನಟನೇ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ನಟ ದರ್ಶನ್​ ಈ ಬಗ್ಗೆ ಮಾತನಾಡಿರುವ ಹಳೆಯ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

ವಿಡಿಯೋನಲ್ಲಿ ಏನಿದೆ?

ನಾನು ಈ ಹಿಂದೆ ಪ್ರಕರಣ ಒಂದರಲ್ಲಿ 14ದಿನ ಜೈಲು ವಾಸ ಅನುಭವಿಸಿದ್ದೆ. ಆ ಸಮಯದಲ್ಲಿ ನಾನು ಸುಮಾರು ಜನರನ್ನು ಭೇಟಿ ಮಾಡಿದೆ. ಪಾಪ ಕೆಲವರು ತಾವು ಮಾಡದೇ ಇರುವ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದರು. ಇನ್ನೂ ಕೆಲವರು ಕೋಪದ ಕೈಗೆ ಬುದ್ದಿಯನ್ನು ಕೊಟ್ಟು ಜೈಲು ಪಾಲಾಗಿದ್ದರು. ಈ ಬಗ್ಗೆ ನಾನು ಅವತ್ತು ಯೋಚನೆ ಮಾಡಿದಾಗ ಕೊಲೆ ಮಾಡುವವನು ಆತುರದಲ್ಲಿ ಮಾಡಿರುತ್ತಾನೆ. ಈಗ ಆ ಬಗ್ಗೆ ಕೊರಗುತ್ತಾ ಇರುತ್ತಾನೆ. ಸ್ವಲ್ಪ ಸಮಯ ಕೊಡಬೇಕಿತ್ತು, ಏನೋ ಪರಿಹಾರ ಕಂಡು ಹಿಡಿಯಬಹುದಿತ್ತಲ್ಲ ಅನಿಸುತ್ತಿರುತ್ತದೆ. ಇದೆಲ್ಲ ನಾನು ಜೈಲಿನಲ್ಲಿದ್ದಾಗ ಜೀವನದಲ್ಲಿ ಕಲಿತುಕೊಂಡು ಬಂದ ಪಾಠ ಎಂದು ನಟ ದರ್ಶನ್​ ಹೇಳಿದ್ದಾರೆ.

ಇತ್ತ ದರ್ಶನ್​ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ದರ್ಶನ್​ ತಾವು ಕಲಿತ ಜೀವನದ ಪಾಠವನ್ನೇ ಮರೆತುಬಿಟ್ರಾ ಎಂದು ಅನೇಕರು ಪ್ರಶ್ನಿಸಿದ್ದಾರೆ. ಇದಲ್ಲದೆ ದರ್ಶನ್​ ಅವರು ಕಾರ್ಯಕ್ರಮಗಳಲ್ಲಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ತುಣುಕುಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಮಾಡಲಾಗುತ್ತಿದ್ದು, ಒಂದಲ್ಲ ಒಂದು ಕಾರಣಕ್ಕೆ ದರ್ಶನ್​ ಅವರು ಟ್ರೋಲ್​ಗೆ ಆಹಾರವಾಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net