ಸಮಯ ಪಕ್ವವಾಗಿದೆ, ನನ್ನ ರೀ ಎಂಟ್ರಿಗೆ ಇದು ಒಳ್ಳೆ ಟೈಮ್​: ವಿ.ಕೆ. ಶಶಿಕಲಾ

VK Sasikala
Published on

ಚೆನ್ನೈ: 2021ರ ರಾಜ್ಯ ವಿಧಾನಸಭೆ ಹಾಗೂ ಇತ್ತೀಚಿಗೆ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಎಐಎಡಿಎಂಕೆ ಪಕ್ಷವು ಹೀನಾಯ ಸೋಲು ಕಂಡಿದ್ದು, ತೀವ್ರ ಮುಖಭಂಗವನ್ನು ಅನುಭವಿಸಿದೆ. ಇದರ ನಡುವೆಯೇ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಆಪ್ತೆ ವಿ.ಕೆ. ಶಶಿಕಲಾ ರಾಜಕೀಯಕ್ಕೆ ಮರುಳುವುದಾಗಿ ಘೋಷಿಸಿದ್ದಾರೆ. ಈ ಹಿಂದೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪ್ರಭಾವಿ ಸ್ಥಾನವನ್ನು ಹೊಂದಿದ್ದ ಶಶಿಕಲಾ ದೀರ್ಘಾವಧಿಯ ಗೈರು ಬಳಿಕ ರಾಜಕೀಯಕ್ಕೆ ಮರುಪ್ರವೇಶಿಸುವುದಾಗಿ ಘೋಷಿಸಿರುವುದು ಎಐಎಡಿಎಂಕೆಯಲ್ಲಿ ಹೊಸ ಚೈತನ್ಯವನ್ನು ಮೂಡಿಸಿದೆ.

ವಿರೋಧ ಪಕ್ಷದ ನಾಯಕರಾದ ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಅವರು ಸರಿಯಾದ ಪ್ರಶ್ನೆಗಳನ್ನು ಕೇಳದೆ ಇರುವಾಗ ನಾನು ಸರ್ಕಾರವನ್ನು ಪ್ರಶ್ನಿಸುತ್ತೇನೆ. 2026ರಲ್ಲಿ ನಾನು ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಈ ಕುರಿತು ಮಾತನಾಡಿದ ಶಶಿಕಲಾ, ಸಮಯ ಪಕ್ವವಾಗಿದ್ದು, ನನ್ನ ರಾಜಕೀಯ ಮರುಪ್ರವೇಶಕ್ಕೆ ಇದು ಸೂಕ್ತ ಸಮಯವಾಗಿದೆ. ನಾವು 2026ರಲ್ಲಿ ಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತೇವೆ. ಈಚೆಗೆ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಕೃತ್ಯವೇ ನಮ್ಮ ಸೋಲಿಗೆ ಕಾರಣವಾಯ್ತು. ನಾನು ಇದನ್ನೆಲ್ಲಾ ತಾಳ್ಮೆಯಿಂದ ನೋಡುತ್ತಿದ್ದೇನೆ.

ಸಮಯ ಬಂದಿದೆ, ಚಿಂತಿಸಬೇಡಿ. ತಮಿಳುನಾಡಿನ ಜನರು ನಮ್ಮೊಂದಿಗಿದ್ದಾರೆ. ಈ ವಿಷಯದಲ್ಲಿ ನಾನು ತುಂಬಾ ಬಲಶಾಲಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಯಾತ್ರೆ ಹಾಗೂ ಸಾರ್ವಜನಿಕ ಸಮಾವೇಶಗಳನ್ನು ನಡೆಸುತ್ತೇನೆ. ತಮಿಳುನಾಡಿನ ಜನರು ನಮ್ಮ ಪರವಾಗಿದ್ದಾರೆ ಎಂದು ವಿ.ಕೆ. ಶಶಿಕಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿದ ಮಾಜಿ ಸಿಎಂ ಜಯಲಲಿತಾ ಸೇರಿದಂತೆ ಅವರ ಆಪ್ತರಾದ ಶಶಿಕಲಾ, ಇಳವರಸಿ ಹಾಗೂ ಜಯಲಲಿತಾ ಅವರ ದತ್ತು ಪುತ್ರ ಎಂದು ಕರೆಯಲ್ಪಡುತ್ತಿದ್ದ ದಿನಕರನ್​ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿ ಬಿಡುಗೊಂಡಿದ್ದರು. 2026ರಲ್ಲಿ ತಮಿಳುನಾಡು ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು, ಜನರು ಯಾವ ಪಕ್ಷಕ್ಕೆ ಮಣೆ ಹಾಕಲಿದ್ದಾರೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net