

| ದೇವರಾಜ್ ಕನಕಪುರ ಬೆಂಗಳೂರು
ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಬಗ್ಗೆ ತೋರುತ್ತಿರುವ ಕಾಳಜಿಯನ್ನು ಪಿಯುಸಿ ಉಪನ್ಯಾಸಕರ ವರ್ಗಾವಣೆ ವಿಚಾರದಲ್ಲಿ ತೋರದ ಸರ್ಕಾರದ ನಡೆಗೆ ಅಧ್ಯಾಪಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಶಿಕ್ಷಣ ಇಲಾಖೆ ಈ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಸುಗ್ರಿವಾಜ್ಞೆ ಮೂಲಕ ಶಾಲಾ ಶಿಕ್ಷಕರ ವರ್ಗಾವಣೆ ಕರಡು ಪ್ರತಿ ಅನುಮೋದನೆ ಪಡೆದು ಮಾರ್ಗಸೂಚಿ ಬಿಡುಗಡೆ ಮಾಡಲು ಮುಂದಾಗಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪಿಯು ಉಪನ್ಯಾಸಕರ ವಿಚಾರದಲ್ಲಿ ಮೀನಮೇಷ ಎಣಿಸುತ್ತಿರುವುದು 2-3 ವರ್ಷಗಳಿಂದ ವರ್ಗಾವಣೆಗೆ ಕಾಯುತ್ತಿರುವ ಸಾವಿರಾರು ಪಿಯು ಉಪನ್ಯಾಸಕರ ಆಕ್ರೋಶಕ್ಕೆ ಕಾರಣವಾಗಿದೆ. ಕರೊನಾ ಕಾಲದಲ್ಲೂ ಅಪ್ಪ-ಅಮ್ಮನ ಜತೆಗೆ ಇಲ್ಲವಲ್ಲ ಎಂಬ ಮಗನ ಗೋಳು, ಪತಿ ಜತೆಗೂಡಿ ಸಂಸಾರ ಮಾಡಲು ಸಾಧ್ಯವಾಗದೆ ಪತ್ನಿಯರು ಯಾತನೆ ಪಡುತ್ತಿರುವಂತಹ ನೂರಾರು ಕಥೆ-ವ್ಯಥೆಗಳು ಉಪನ್ಯಾಸಕರ ವಲಯದಲ್ಲಿದೆ. 2019ರಲ್ಲಿ ಕೊನೇ ಬಾರಿಗೆ ಪಿಯು ವರ್ಗಾವಣೆ ಆಗಿದೆ. ಉಪನ್ಯಾಸಕರು ಮನವಿ ಮಾಡಿದರೂ, ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ.
ಮಲತಾಯಿ ಧೋರಣೆ: ರಾಜ್ಯದಲ್ಲಿ 48,008 ಸರ್ಕಾರಿ ಶಾಲೆಗಳಿದ್ದು, 2 ಲಕ್ಷ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1,232 ಸರ್ಕಾರಿ ಪಿಯು ಕಾಲೇಜುಗಳಿದ್ದು, ಇಲ್ಲಿ 12,853 ಉಪನ್ಯಾಸಕರಿದ್ದಾರೆ. ಸಂಖ್ಯಾಬಲದಲ್ಲಿ ಶಾಲೆಗಳೇ ಹೆಚ್ಚಾಗಿವೆ. ಇದರಿಂದ ಇವರ ಒತ್ತಾಯ ಕೂಡ ದೊಡ್ಡ ಪ್ರಮಾಣದಲ್ಲೇ ಇರುತ್ತದೆ. ಪಿಯು ಉಪನ್ಯಾಸಕರ ಸಂಖ್ಯಾಬಲ ಕಡಿಮೆ ಇರುವುದರಿಂದ ಉಪನ್ಯಾಸಕರ ಬೇಡಿಕೆಗೆ ಹೆಚ್ಚು ಮನ್ನಣೆ ನೀಡುತ್ತಿಲ್ಲ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಅಧೀನದಲ್ಲೇ ಪಿಯು ಇಲಾಖೆಯು ಬಂದರೂ ಶಿಕ್ಷಣ ಸಚಿವರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬುದು ಉಪನ್ಯಾಸಕರ ಆರೋಪವಾಗಿದೆ.
ಏಕೆ ವಿಳಂಬ?: ಪ್ರತಿ ಬಾರಿ ಶಿಕ್ಷಣ ಇಲಾಖೆ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತಂದು ವರ್ಗಾವಣೆ ಮಾಡುತ್ತಿದೆ. ಕಳೆದ ವರ್ಷ 2019 ಜುಲೈನಲ್ಲಿ ವರ್ಗಾವಣೆ ಮಾಡಲಾಗಿತ್ತು. ಇದಾದ ನಂತರ ವರ್ಗಾವಣೆ ಮಿತಿ ಹೆಚ್ಚಳ ಮಾಡುವಂತೆ ಉಪನ್ಯಾಸಕರು ಬೇಡಿಕೆ ಮುಂದಿಟ್ಟಿದ್ದು, ಹೊಸ ವರ್ಗಾವಣೆ ಕಾಯ್ದೆ ಜಾರಿಗೆ ತರುವುದಾಗಿ ಕರಡು ಪ್ರತಿ ರೂಪಿಸಿದೆ. ಇದರ ಬಗ್ಗೆ ವಿಧಾನ ಪರಿಷತ್ತಿನ ಸದಸ್ಯರು ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಜತೆಗೆ ಚರ್ಚೆ ಮಾಡಿದೆ. ಆದರೆ, ಇನ್ನೂ ಕರಡು ಪ್ರತಿ ಪಿಯು ಇಲಾಖೆಯಿಂದ ಪ್ರಧಾನ ಕಾರ್ಯದರ್ಶಿಗಳ ಬಳಿ ಹೋಗಿಲ್ಲ ಎಂಬ ಮಾಹಿತಿ ಇದೆ. ಇಲ್ಲಿಗೆ ಹೋದ ಮೇಲೆ ಅದರ ಬಗ್ಗೆ ಕಾನೂನು ಅಭಿಪ್ರಾಯ ಸಂಗ್ರಹಿಸಲು ಕಾನೂನು ಇಲಾಖೆಗೆ ಕಳುಹಿಸಬೇಕು. ಅಲ್ಲಿಂದ ಸಚಿವ ಸಂಪುಟದಲ್ಲಿಟ್ಟು, ಸುಗ್ರೀವಾಜ್ಞೆ ಮೂಲಕ ರಾಜ್ಯಪಾಲರ ಅನುಮೋದನೆಗೆ ಕಳುಹಿಸಬೇಕು. ಇದಾದ ಬಳಿಕ ರಾಜ್ಯಪತ್ರದಲ್ಲಿ ಪ್ರಕಟಿಸಬೇಕು. ಆಕ್ಷೇಪಣೆಗೆ ಅರ್ಜಿ ಆಹ್ವಾನಿಸಿ ಆನಂತರದಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಬೇಕು. ಇದೆಲ್ಲ ಮಾಡುವ ಮಧ್ಯೆಯೇ ಕಾಲೇಜು ಆರಂಭವಾಗಲಿವೆ. ಭೌತಿಕ ತರಗತಿ ಶುರುವಾದರೆ ಮತ್ತೆ ವರ್ಗಾವಣೆ ಹಳ್ಳ ಹಿಡಿಯುವ ಸಾಧ್ಯತೆ ಹೆಚ್ಚಿದೆ.
ಕರಡು ಮಂಡನೆಗೆ ಸೂಚನೆ: ಉಪನ್ಯಾಸಕರ ವರ್ಗಾವಣೆ ವಿಳಂಬಕ್ಕೆ ಅವಕಾಶ ನೀಡದೆ, ಕೂಡಲೇ ವರ್ಗಾವಣೆ ಸುಗ್ರಿವಾಜ್ಞೆ ಕರಡನ್ನು ಮಂಡಿಸಿ ಉಳಿದ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ವರ್ಗಾವಣೆ ಸಿಗುವುದು 600 ಮಂದಿಗೆ ಮಾತ್ರ: ಸದ್ಯದ ವರ್ಗಾವಣೆಯಲ್ಲಿ ಶೇ.5 ಮಿತಿ ನಿಗದಿಪಡಿಸಲಾಗಿದೆ. ಇದನ್ನು ಶೇ.15ಕ್ಕೆ ಹೆಚ್ಚಿಸುವಂತೆ ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಮನವಿ ಮಾಡಿದರೂ ಸರ್ಕಾರ ಗಮನಹರಿಸಿಲ್ಲ. ವರ್ಗಾವಣೆಯಲ್ಲಿ ವಿಧವೆ, ಅನಾರೋಗ್ಯ, ಪತಿಪತ್ನಿ ಪ್ರಕರಣ ಸೇರಿ ಹಲವು ಆದ್ಯತೆಗಳಿವೆ. ಇದೆಲ್ಲ ಸೇರಿಯೂ 12,853 ಉಪನ್ಯಾಸಕರ ಪೈಕಿ ವರ್ಗಾವಣೆ ಸಿಗುವುದು 600 ಉಪನ್ಯಾಸಕರಿಗೆ ಮಾತ್ರ.
ವರ್ಗಾವಣೆಗಾಗಿ ಉಪನ್ಯಾಸಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಶಿಕ್ಷಣ ಸಚಿವರು ಸಮಸ್ಯೆಯ ಗಂಭೀರತೆ ಅರಿತು ವರ್ಗಾವಣೆ ಕರಡು ಪ್ರತಿಗೆ ಶೀಘ್ರ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಸುಗ್ರೀವಾಜ್ಞೆ ಮೂಲಕ ತುರ್ತಕ್ರಮ ವಹಿಸಬೇಕು.
|ಎ.ಎಚ್. ನಿಂಗೇಗೌಡ ರಾಜ್ಯಾಧ್ಯಕ್ಷ, ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ
1242 ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿ ಕೆಇಎಗೆ ಜವಾಬ್ದಾರಿ: ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ನೀಡಿ ಆದೇಶ ಹೊರಡಿಸಿದೆ. 1242 ಸಹಾಯಕ ಪ್ರಾಧ್ಯಾಪಕರ ಹುದ್ದೆ ಘಗಳನ್ನು ನಿಯಮಾನುಸಾರ ಭರ್ತಿ ಮಾಡುವ ಸಲುವಾಗಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲು ಕೆಇಎಯನ್ನು ಆಯ್ಕೆ ಪ್ರಾಧಿಕಾರವಾಗಿ ನಿಗದಿ ಪಡಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 2015ರಲ್ಲಿ 1200 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಭರ್ತಿಗೂ ಕೆಇಎ ಮೂಲಕವೇ ಆಯ್ಕೆ ನಡೆದಿತ್ತು.