ನೆಚ್ಚಿನ ಶಿಕ್ಷಕಿಗೆ ಮರೆಯಲಾಗದ ಗಿಫ್ಟ್​ ಕೊಟ್ಟ ವಿದ್ಯಾರ್ಥಿಗಳು; ವಿಡಿಯೋ ನೋಡಿದ್ರೆ ಖಂಡಿತ ಭಾವುಕರಾಗ್ತೀರಿ

WhatsApp Image 2024-03-15 at 8.19.43 PM
Published on

ಅಮೆರಿಕಾ: ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಬಾಂಧವ್ಯ ಎಂದೆಂದಿಗೂ ವಿಶೇಷವೇ. ಅದನ್ನು ವಿವರಿಸುವುದೇ ಆಗಲಿ, ವಿಶ್ಲೇಷಿಸುವುದೇ ಆಗಲಿ ನಿಜಕ್ಕೂ ಕಷ್ಟವೆ. ಶಿಕ್ಷಕರಿಲ್ಲದ ಶಾಲೆಯಿಲ್ಲ, ವಿದ್ಯಾರ್ಥಿಗಳಿಲ್ಲದೆ ಶಿಕ್ಷಕರಿಲ್ಲ ಎಂಬುದು ಸತ್ಯದ ಮಾತು. ಮನೆಯನ್ನು ಬಿಟ್ಟರೆ ಸ್ಕೂಲ್​ನಲ್ಲೇ ಬಹುಪಾಲು ಸಮಯ ಕಳೆಯುವ ಸ್ಟೂಡೆಂಟ್ಸ್​, ತಮಗೆ ಪಾಠದ ಮುಖೇನ ಜೀವನ ರೂಪಿಸುವ ಗುರುಗಳೊಂದಿಗೆ ಉತ್ತಮ ಸಂಬಂಧ ಹೊಂದುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಾರೆ.

ಶಾಲೆಯಲ್ಲಿ ಪಾಠ ಹೇಳಿಕೊಡುವ ಶಿಕ್ಷಕರ ಪೈಕಿ ಎಲ್ಲಾ ಶಿಕ್ಷಕರು ಕೂಡ ವಿದ್ಯಾರ್ಥಿಗಳಿಗೆ ಸುಲಭವಾಗಿ ಹತ್ತಿರವಾಗುವುದಿಲ್ಲ. ಕೆಲವೇ ಕೆಲವರು ಮಾತ್ರ ಮಕ್ಕಳ ಹೃದಯದಲ್ಲಿ ಸ್ಥಾನ ಪಡೆಯುತ್ತಾರೆ. ಅದರಲ್ಲೂ ಎಲ್ಲಾ ವಿದ್ಯಾರ್ಥಿಗಳ ಮನದಲ್ಲಿ ಉಳಿಯುವುದು ಬಹಳ ಕಷ್ಟ. ಆದ್ರೆ, ಇಲ್ಲೊಬ್ಬ ಶಿಕ್ಷಕಿ ತನ್ನ ತರಗತಿಯಲ್ಲಿರುವ ಅಷ್ಟು ಮಕ್ಕಳ ಪ್ರೀತಿ, ವಾತ್ಸಲ್ಯಕ್ಕೆ ಪಾತ್ರರಾಗಿದ್ದು, ವಿದ್ಯಾರ್ಥಿಗಳು ಕೊಟ್ಟ ಉಡುಗೊರೆ ಕಂಡು ಕಣ್ಣೀರಾಕಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡಿದ ಈ ವಿಡಿಯೋ ಸದ್ಯ ನೆಟ್ಟಿಗರ ಮನವನ್ನು ಕರಗಿಸಿದ್ದು, ಒಮ್ಮೆ ಭಾವುಕರಾಗುವಂತೆ ಮಾಡಿದೆ. ಹಂಚಿಕೊಂಡಿರುವ ವೀಡಿಯೋ ಪ್ರಕಾರ, ಶಿಕ್ಷಕಿಯ ಪುತ್ರ ವಿಲ್ಸನ್​ ಮೃತಪಟ್ಟಿದ್ದರು. ಮಗನ ನೆನಪಿನಲ್ಲಿದ್ದ ತಾಯಿಗೆ ಸರ್ಪ್ರೈಸ್​ ಕೊಡಲು ಯೋಜಿಸಿದ ವಿದ್ಯಾರ್ಥಿಗಳು, ಕತ್ತಲೆ ಕೋಣೆಯಲ್ಲಿ ಅವರ ಮಗನ ಹೆಸರನ್ನು ಕ್ಯಾಂಡಲ್​ನಿಂದ ಹತ್ತಿಸಿ, ಶಿಕ್ಷಕಿಗೆ ಹೂಗುಚ್ಚ ಸೇರಿದಂತೆ ಇತರೆ ಗಿಫ್ಟ್​ಗಳನ್ನು ಕೊಟ್ಟಿದ್ದಾರೆ.

ಇದರೊಟ್ಟಿಗೆ ವಿದ್ಯಾರ್ಥಿಗಳ 'ಸ್ಟಾಂಡ್ ಬೈ ಮಿ' ಎಂಬ ಹಾಡು ಶಿಕ್ಷಕಿಯ ಹೃದಯದ ಕಟ್ಟೆಯನ್ನು ಹೊಡೆದಿದ್ದು, ಭಾವನೆಗಳು ಆಕೆಯ ಕಣ್ಣಂಚಲಿ ತುಂಬಿರುವುದು ವಿಡಿಯೋದಲ್ಲಿ ಕಾಣಬಹುದು. ಮಕ್ಕಳ ಉಡುಗೊರೆ ಕಂಡು ಶಿಕ್ಷಕಿ ಕಣ್ಣೀರಿಟ್ಟ ಈ ವಿಡಿಯೋ 6,000ಕ್ಕೂ ಅಧಿಕ ಲೈಕ್​ಗಳನ್ನು ಪಡೆದಿದ್ದು, ನೆಟ್ಟಿಗರಿಂದ ವ್ಯಾಪಕ ಕಮೆಂಟ್​ಗಳನ್ನು ಗಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net