35 ದಿನ ಗಡುವು, ನೇಮಕಾತಿ... 12200 ಉದ್ಯೋಗಿಗಳ ವಜಾ ಮಾತ್ರವಲ್ಲ! ಪ್ರಮುಖ ನಿರ್ಧಾರ ಕೈಗೊಂಡ TCS

ವಿಜಯವಾಣಿ - 2025-07-29T125848.092
Published on

TCS Layoffs: ಇತ್ತೀಚೆಗಷ್ಟೇ ಭಾರತದ ಅತಿದೊಡ್ಡ ಐಟಿ ಸೇವೆಗಳ ಪೂರೈಕೆದಾರ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ತನ್ನ ಸಂಸ್ಥೆಯ 12,200ಕ್ಕೂ ಅಧಿಕ ಉದ್ಯೋಗಿಗಳಿಗೆ ಗೇಟ್​ಪಾಸ್​ ಕೊಡಲು ನಿರ್ಧರಿಸಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕೃತ ಹೇಳಿಕೆಯನ್ನು ಬಿಡುಗಡೆಗೊಳಿಸಿತು. ಆದರೀಗ, ಕೇವಲ ವಜಾಗೊಳಿಸುವ ಪ್ರಕ್ರಿಯೆ ಮಾತ್ರವಲ್ಲದೆ ಸಂಸ್ಥೆಯಲ್ಲಿ ಹಲವು ಮಹತ್ವದ ಬದಲಾವಣೆಗಳು ಜಾರಿಗೊಳಿಸಿದೆ.

ತನ್ನ ಕಂಪನಿಯಿಂದ 12,200 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದ ಟಿಸಿಎಸ್​, ಮತ್ತೊಂದು ಆಘಾತಕಾರಿ ನಿರ್ಧಾರವನ್ನು ತೆಗೆದುಕೊಂಡಿದೆ. ಸದ್ಯ ಇದು ಉದ್ಯೋಗಿಗಳಿಗೆ ದೊಡ್ಡ ತಲೆಬಿಸಿಯನ್ನೇ ತಂದೊಡ್ಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಅನುಭವಿ ವೃತ್ತಿಪರರನ್ನು ನೇಮಕ ಮಾಡಿಕೊಳ್ಳುವುದು ಮತ್ತು ವಿಶ್ವಾದ್ಯಂತ ತನ್ನ ಉದ್ಯೋಗಿಗಳ ವಾರ್ಷಿಕ ವೇತನವನ್ನು ಹೆಚ್ಚಿಸುವುದನ್ನು ಸಂಸ್ಥೆ ತಡೆ ಹಿಡಿದಿದೆ.

ತಮ್ಮ ಕ್ಲೈಂಟ್​​ಗಳೊಂದಿಗೆ ಯಾರೆಲ್ಲ ಇನ್ನೂ ಪ್ರಾಜೆಕ್ಟ್​ಗಳನ್ನು ಹೊಂದಿಲ್ಲವೋ, ಅಂತಹ ಉದ್ಯೋಗಿಗಳನ್ನು ಕೈಬಿಡಲು ಸಂಸ್ಥೆ ನಿರ್ಧರಿಸಿದೆ. ಈ ನಿಟ್ಟಿನಲ್ಲಿ, ಅವರಿಗೆ ಕಂಪನಿಯನ್ನು ತೊರೆಯಲು 35 ದಿನಗಳು ಬಾಕಿ ಉಳಿದಿದೆ ಎಂದು ವರದಿ ಹೇಳಿದೆ. ಹೈದರಾಬಾದ್, ಪುಣೆ, ಚೆನ್ನೈ ಮತ್ತು ಕೋಲ್ಕತ ಸೇರಿದಂತೆ ಹಲವಾರು ನಗರಗಳಲ್ಲಿ ಕೆಲಸ ಮಾಡುತ್ತಿರುವ ತನ್ನ ಸಿಬ್ಬಂದಿಯನ್ನು ತೆಗೆದುಹಾಕುವುದಾಗಿ ಟಿಸಿಎಸ್​ ಈಗಾಗಲೇ ಸ್ಪಷ್ಟಪಡಿಸಿದೆ.

ಹೊಡೆತದ ಮೇಲೆ ಮತ್ತೊಂದು ಹೊಡೆತ!

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನಲ್ಲಿ ಹಿರಿಯ ಉದ್ಯೋಗಿಗಳನ್ನು ಕಡಿತಗೊಳಿಸುವುದು ಸಂಸ್ಥೆಯ ಮುಖ್ಯ ಗುರಿಯಾಗಿದೆ. ಹೀಗೆ ಮಾಡುವುದರಿಂದ ವರ್ಷಕ್ಕೆ 2,400ದಿಂದ 3,600 ಕೋಟಿ ರೂ. ಹಣವನ್ನು ಉಳಿಸಿಕೊಳ್ಳಬಹುದು ಎಂದು ಹಿರಿಯ ಐಟಿ ವಿಶ್ಲೇಷಕರೊಬ್ಬರು ಅಂದಾಜಿಸಿದ್ದಾರೆ. ವೆಚ್ಚ ಕಡಿತ ಒಪ್ಪಂದಗಳು ಮತ್ತು ಎಐ ಉತ್ಪಾದಕತೆಯ ಹೆಚ್ಚಳವೇ ಉದ್ಯೋಗಿಗಳ ಕಡಿತಕ್ಕೆ ದೊಡ್ಡ ಕಾರಣ ಎಂದು ಬ್ರೋಕರೇಜ್ ಸಂಸ್ಥೆ ಜೆಫರೀಸ್ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net