ಪಹಲ್ಗಾಮ್ ದಾಳಿಗೆ ಪ್ರತೀಕಾರ: ಮೂವರು ಉಗ್ರರನ್ನು ಬಲಿ ಪಡೆದ ಸೇನೆ, ಸಂಸತ್ತಿನಲ್ಲಿ ಅಮಿತ್​ ಷಾ ಹೇಳಿಕೆ! Pahalgam attack

Pahalgam attack
Published on

Pahalgam attack : ಕಾಶ್ಮೀರದ ಪಹಲ್ಗಾಮ್​ನಲ್ಲಿ ದಾಳಿ ನಡೆಸಿ, 26 ಅಮಾಯಕರ ಪ್ರಾಣ ತೆಗೆದ ಮೂವರು ಲಷ್ಕರ್ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಆಪರೇಷನ್ ಮಹಾದೇವ್‌ ವೇಳೆ ಹೊಡೆದುರುಳಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳವಾರ (ಜುಲೈ 29) ದೃಢಪಡಿಸಿದ್ದಾರೆ.

ಪಹಲ್ಗಾಮ್​ನ ಬೈಸರನ್ ಕಣಿವೆಯಲ್ಲಿ ಅವರ ಕುಟುಂಬಗಳ ಮುಂದೆಯೇ ಧರ್ಮವನ್ನು ಕೇಳಿ ಅಮಾಯಕ ನಾಗರಿಕರನ್ನು ಕೊಲ್ಲಲಾಯಿತು. ಆಪರೇಷನ್​ ಮಹಾದೇವ್​ ಹೆಸರಿನಲ್ಲಿ ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಅಮಿತ್​ ಷಾ ಹೇಳಿದರು.

ಹತ್ಯೆಯಾದ ಉಗ್ರರನ್ನು ಲಷ್ಕರ್​ ಸಂಘಟನೆಯ ಉನ್ನತ ಕಮಾಂಡರ್ ಸುಲೇಮಾನ್ ಶಾ, ಅಫ್ಘಾನ್ ಮತ್ತು ಜಿಬ್ರಾನ್ ಎಂದು ಗುರುತಿಸಲಾಗಿದೆ. ಏಪ್ರಿಲ್ 22ರ ಭೀಕರ ದಾಳಿಯ ಬಳಿಕ ಅವರಿಗೆ ಆಶ್ರಯ ನೀಡಿದವರೇ ಗುರುತನ್ನು ಪತ್ತೆಹಚ್ಚಿದ್ದಾರೆ ಎಂದು ಅಮಿತ್​ ಷಾ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಕಳೆದ ತಿಂಗಳು, ದಾಳಿಕೋರರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಇಬ್ಬರು ಸ್ಥಳೀಯರಾದ ಪರ್ವೈಜ್ ಅಹ್ಮದ್ ಜೋಥರ್ ಮತ್ತು ಬಶೀರ್ ಅಹ್ಮದ್ ಅವರನ್ನು NIA ಬಂಧಿಸಿತ್ತು. ಭಯೋತ್ಪಾದಕರಿಗೆ ಆಹಾರ ಪೂರೈಸುತ್ತಿದ್ದ ಆರೋಪ ಈ ಇಬ್ಬರ ಮೇಲಿದೆ. ಭಯೋತ್ಪಾದಕರ ಶವಗಳನ್ನು ಶ್ರೀನಗರಕ್ಕೆ ತಂದ ನಂತರ, ನಮ್ಮ ತನಿಖಾ ಏಜೆನ್ಸಿಗಳ ಬಂಧನದಲ್ಲಿದ್ದವರು ಭಯೋತ್ಪಾದಕರನ್ನು ಗುರುತಿಸಿದರು ಎಂದು ಷಾ ಹೇಳಿದರು.

ಲೋಕಸಭೆಯಲ್ಲಿ ನಿರಂತರ ಘೋಷಣೆಗಳ ನಡುವೆಯೇ, ಅಮಿತ್​ ಷಾ ಅವರು ವಿಪಕ್ಷದ ಮೇಲೆ ವಾಗ್ದಾಳಿ ನಡೆಸಿದರು. ಪಹಲ್ಗಾಮ್ ಭಯೋತ್ಪಾದಕರ ಹತ್ಯೆಯ ಸುದ್ದಿ ಕೇಳಿದಾಗ ಸಂತೋಷಪಡುತ್ತಾರೆಂದು ನಾನು ನಿರೀಕ್ಷಿಸಿದ್ದೆ. ಆದರೆ, ಅವರು ಅದರ ಬಗ್ಗೆ ಸಂತೋಷಪಟ್ಟಂತೆ ಕಾಣುತ್ತಿಲ್ಲ ಎಂದರು. ಇದೇ ವೇಳೆ ಕಾರ್ಯಾಚರಣೆಯ ವಿವರಗಳನ್ನು ನೀಡಿದ ಷಾ, ಭಯೋತ್ಪಾದಕರು ದೇಶವನ್ನು ತೊರೆಯಲು ಬಿಡದಂತೆ ಭದ್ರತಾ ಪಡೆಗಳಿಗೆ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net