

ಚೆನ್ನೈ: ಪಾರ್ಟಿಗಾಗಿ ದಂಪತಿಗಳಿಬ್ಬರು (Couples) 19 ಕಾಗೆಗಳನ್ನು ಕೊಂದು ಅದರ ಮಾಂಸ ಸಂಗ್ರಹಿಸಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ ನಡೆದಿದೆ. ಘಟನೆ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿಗಳು ರಮೇಶ್ ಮತ್ತು ಪೂಚಮ್ಮ ಎಂಬುವವರನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರುವ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ರಮೇಶ್ ಹಾಗೂ ಪೂಚಮ್ಮ ಈ ಹಿಂದೆ ಕಾಗೆಗಳನ್ನು ಭೇಟೆಯಾಡುತ್ತಿರುವ ಬಗ್ಗೆ ನಮಗೆ ಮಾಹಿತಿ ಲಭಿಸಿತ್ತು. ಖಚಿತ ಮಾಹಿತಿ ಆಧರಿಸಿ ಇವರ ಮನೆ ಮೇಲೆ ದಾಳಿ ನಡೆಸಿದಾಗ 19 ಕಾಗೆಗಳ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ಹಬ್ಬಕ್ಕಾಗಿ ಕಾಗೆಗಳನ್ನು ಭೇಟಿಯಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಇದಲ್ಲದೆ ಈ ಜೋಡಿ ನಾಯಿ, ಬೆಕ್ಕು ಸೇರಿದಂತೆ ಅನೇಕ ಪ್ರಾಣಿಗಳನ್ನು ಬೇಟೆಯಾಡಿರುವ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿದ್ದು, ಮಾಂಸ ಮಾರಾಟ ದಂಧೆಯಲ್ಲಿ ಶಾಮೀಲಾಗಿರುವ ಸಾಧ್ಯತೆ ಇದೆ. ಸ್ಥಳೀಯ ಅಂಗಡಿಗಳಲ್ಲಿ ಕೀಟನಾಶಕಗಳನ್ನು ಖರೀದಿಸಿ ಆಹಾರಕ್ಕೆ ಸೇರಿಸಿ ಈ ಕಾಗೆಗಳನ್ನು ಕೊಂದು ಹಾಕಿದ್ದಾರೆ ಎಂದು ಮಾಹಿತಿ ಲಭ್ಯವಾಗಿದ್ದು, ಸ್ಥಳೀಯ ಕೀಟನಾಶಕ ಅಂಗಡಿಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ದಂಪತಿಗೆ ನಾಲ್ವರು ಪುತ್ರಿಯರು ಓರ್ವ ಪುತ್ರನಿದ್ದು, ಒಂದೇ ಮನೆಯಲ್ಲಿ ಏಳು ಮಂದಿ ವಾಸಿಸುತ್ತಿದ್ದಾರೆ. ಕುಟುಂಬವು ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಬಡತನದಿಂದ ಈ ಕೃತ್ಯದಲ್ಲಿ ಭಾಗಿಯಾಗಿರಬಹುದು. ಘಟನೆ ಸಂಬಂಧ ಐದು ಸಾವಿರ ರೂಪಾಯಿ ದಂಡ ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.