

ಬೆಂಗಳೂರು: ನಟ ಶಿವರಾಜ್ಕುಮಾರ್ (Shivarajkumar) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಸರ್ಜರಿಯ ಸಲುವಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಡಿಸೆಂಬರ್ 24ರಂದು ಅವರಿಗೆ ಸರ್ಜರಿ ನಡೆಯಲಿದ್ದು, ಇಂದು (ಡಿಸೆಂಬರ್ 18) ಪ್ರಯಾಣ ಬೆಳೆಸಿದ್ದಾರೆ. ಶಿವರಾಜ್ಕುಮಾರ್ (Shivarajkumar) ಅವರು ವಿದೇಶಕ್ಕೆ ಪ್ರಯಾಣ ಬೆಳೆಸುವ ಮೊದಲು ಅನೇಕ ಗಣ್ಯರು, ಗೆಳೆಯರು, ಕುಟುಂಬದವರು ಭೇಟಿ ಮಾಡಿ ಶುಭ ಹಾರೈಸುತ್ತಿದ್ದಾರೆ.
ಇನ್ನೂ ಶಿವರಾಜ್ಕುಮಾರ್ ಅವರ ಮನೆಗೆ ಸುದೀಪ್, ವಿನೋದ್ ರಾಜ್, ಬಿಸಿ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡುತ್ತಿದ್ದು, ಶೀಘ್ರ ಚೇತರಿಕೆ ಕಾಣಲಿ ಎಂದು ಹಾರೈಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ನೆಚ್ಚಿನ ನಟ ಶೀಘ್ರ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಇನ್ನೂ ಈ ಬಗ್ಗೆ ಮಾತನಾಡಿರುವ ನಟ ಶಿವರಾಜ್ಕುಮಾರ್, ತುಂಬಾ ಎಮೋಷನಲ್ ಆಗಿದ್ದೇನೆ. ಆಪರೇಷನ್ ವಿಚಾರವಾಗಿ ಎಲ್ಲರಲ್ಲೂ ಆತಂಕ ಇದೆ. ಮನೆಯಿಂದ ಹೋಗುತ್ತಿರುವುದರಿಂದ ಕುಟುಂಬ, ಅಭಿಮಾನಿಗಳು ಸೇರಿದಂತೆ ಎಲ್ಲರನ್ನೂ ನೋಡಿ ದುಃಖ ಆಯಿತು. ಡಿಸೆಂಬರ್ 24ರಂದು ಸರ್ಜರಿ ನಡೆಯಲಿದ್ದು, ನಾನು ಕಾನ್ಫಿಡೆಂಟ್ ಆಗಿದ್ದೇನೆ. ಅದರ ಬಗ್ಗೆ ಏನು ಯೋಚನೆ ಇಲ್ಲ. 35 ದಿನಕ್ಕೂ ಹೆಚ್ಚಿನ ಕಾಲ ಮನೆಯಿಂದ ದೂರ ಇರುವುದು ತುಂಬಾ ನೋವಾಗುತ್ತಿದೆ. ಅಭಿಮಾನಿಗಳು ಸೇರಿದಂತೆ ಎಲ್ಲರೂ ವಿಶ್ ಮಾಡಿದ್ದಾರೆ. ಮಾಧ್ಯಮಗಳು ನನಗೆ ಈ ರೀತಿಯಾಗಿರುವುದನ್ನ ವೈಭವೀಕರಿಸದೆ ತೋರಿಸಿರುವುದು ತುಂಬಾ ಖುಷಿ ನೀಡಿದೆ ಎಂದು ನಟ ಶಿವರಾಜ್ಕುಮಾರ್ ಹೇಳಿದ್ದಾರೆ.
ಇನ್ನೂ ನಟ ಶಿವರಾಜ್ಕುಮಾರ್ ಅವರೊಂದಿಗೆ ಪತ್ನಿ ಗೀತಾ ಹಾಗೂ ಪುತ್ರಿ ನಿವೇದಿತಾ ತೆರಳುತ್ತಿದ್ದು, ಜನವರಿ 26ಕ್ಕೆ ನಟ ಶಿವರಾಜ್ಕುಮಾರ್ ಅಮೆರಿಕದಿಂದ ವಾಪಸ್ ಬರುವ ಸಾಧ್ಯತೆ ಇದೆ. ಮಿಯಾಮಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ನಟ ಶಿವರಾಜ್ಕುಮಾರ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಯಲಿದೆ.