ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನವನ್ನು ದೇಶ ಸಹಿಸುವುದಿಲ್ಲ, ಅಮಿತ್ ಷಾ ಕೂಡಲೇ ಕ್ಷಮೆಯಾಚಿಸಬೇಕು: Rahul Gandhi

Rahul Gandhi
Published on

ನವದೆಹಲಿ: ಕೇಂದ್ರ ಗೃಹ ಸಚಿವರಾದ ಅಮಿತ್​ ಷಾ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್​ ಅವರಿಗೆ ಮಾಡಿರುವ ಅವಮಾನವನ್ನು ದೇಶ ಸಹಿಸುವುದಿಲ್ಲ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ. 

ಅಂಬೇಡ್ಕರ್​ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್​ ಷಾ ಹೇಳಿಕೆ ಖಂಡಿಸಿ ವಿಪಕ್ಷಗಳು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್​ ಗಾಂಧಿ, ಅಮಿತ್​ ಷಾ ಅವರು ನೀಡಿರುವ ಹೇಳಿಕೆ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಅವರು ಮೊದಲಿನಿಂದಲೂ ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡುತ್ತಿದ್ದರು. ಅಮಿತ್ ಷಾ ಅವರ ಹೇಳಿಕೆ ನೋಡಿದರೆ ಅಂಬೇಡ್ಕರ್​ ಹಾಗೂ ಅವರ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿರುವುದಾಗಿ ಸಾಬೀತಾಗಿದೆ. ಅಂಬೇಡ್ಕರ್​ ಅವರ ಬರೆದಿರುವ ಸಂವಿಧಾನವನ್ನ ಮುಗಿಸುವುದೇ ಬಿಜೆಪಿಯವರ ಪರಮ ಗುರಿಯಾಗಿದೆ ಎಂದು ರಾಹುಲ್​ ಗಾಂಧಿ ಕಿಡಿಕಾರಿದ್ದಾರೆ.

ಅಮಿತ್​ ಷಾ ಹೇಳಿದ್ದೇನು? 

ವಿಪಕ್ಷದವರಿಗೆ ಈಗ ಅಂಬೇಡ್ಕರ್.. ಅಂಬೇಡ್ಕರ್.. ಅಂಬೇಡ್ಕರ್ ಎಂದು ಹೇಳುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಇಷ್ಟು ದೇವರ ಹೆಸರನ್ನು ಹೇಳಿದ್ದರೆ ಸ್ವರ್ಗಕ್ಕೆ ಹೋಗಬಹುದಾಗಿತ್ತು. ಅಂಬೇಡ್ಕರ್ ಅವರ ಹೆಸರನ್ನು ಹೇಳಿದರೆ, ನಮಗೂ ಆನಂದವೇ. ಅಂಬೇಡ್ಕರ್ ವಿಚಾರದಲ್ಲಿ ಕಾಂಗ್ರೆಸ್ಸಿಗರ ನಿಲುವು ಏನು ಎನ್ನುವುದನ್ನು ನಾನು ಹೇಳುತ್ತೇನೆ. ಅಂಬೇಡ್ಕರ್ ಅವರು ದೇಶದ ಮೊದಲ ಕ್ಯಾಬಿನೆಟ್ ನಿಂದ ರಾಜೀನಾಮೆ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಚಾರ ಮತ್ತು ದೇಶದ ವಿದೇಶಾಂಗ ನೀತಿಯ ಬಗ್ಗೆ ನನಗೆ ಅಸಮಾಧಾನವಿದೆ ಎಂದು ಅಂಬೇಡ್ಕರ್ ಹೇಳಿದ್ದರು. ಬಿ.ಸಿ.ರಾಯ್ ಎನ್ನುವವರು ಪತ್ರವನ್ನು ಬರೆದು, ರಾಜಾಜಿ ಮತ್ತು ಅಂಬೇಡ್ಕರ್ ಅವರು ಕ್ಯಾಬಿನೆಟ್​​ನಿಂದ ಹೊರಬಂದರೆ ತೊಂದರೆ ಆಗುವುದಿಲ್ಲವೇ ಎಂದು ಕೇಳಿದ್ದರು. ರಾಜಾಜಿ ಅವರಿಂದ ಸ್ವಲ್ಪ ತೊಂದರೆ ಆಗಬಹುದು, ಅಂಬೇಡ್ಕರ್ ಅವರಿಂದ ಏನೂ ತೊಂದರೆಯಾಗುವುದಿಲ್ಲ ಎಂದು ನೆಹರೂ, ಬಿ. ಸಿ. ರಾಯ್​​ಗೆ ಹೇಳಿದ್ದರು ಎಂದು ಅಮಿತ್ ಷಾ, ರಾಜ್ಯಸಭೆಯಲ್ಲಿ ಸ್ಮರಿಸಿದ್ದರು. ಈ ಹೇಳಿಕೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net