ಅಧಿಕಾರಿಗಳಿಗೆ ತಾಲೂಕು ಹೊಣೆ: ಜನವರಿಯಿಂದ ಕೆಎಎಸ್​ಗಳಿಗೆ ಉಸ್ತುವಾರಿ; 23 ಕರ್ತವ್ಯಗಳನ್ನು ಗುರುತಿಸಿದ ಸರ್ಕಾರ

Vidhanasoudha (4)
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು 
ಆಡಳಿತವನ್ನು ತಳಮಟ್ಟದಲ್ಲಿ ಚುರುಕುಗೊಳಿಸುವ ಉದ್ದೇಶ ದಿಂದ ಇದೇ ಮೊದಲ ಬಾರಿಗೆ ತಾಲೂಕು ಉಸ್ತುವಾರಿ ಅಧಿಕಾರಿಗಳನ್ನು ನೇಮಕ ಮಾಡಲು ನಿರ್ಧರಿಸಿದ್ದ ಸರ್ಕಾರ, ಆ ಅಧಿಕಾರಿಗಳಿಗೆ 23 ಜವಾಬ್ದಾರಿಗಳ ಚೌಕಟ್ಟು ರೂಪಿಸಿದೆ.

170 ತಾಲೂಕುಗಳಿಗೆ ಹಿರಿಯ ಅಧಿಕಾರಿಗಳ ಪಟ್ಟಿಯನ್ನು ಈಗಾಗಲೆ ಸಿದ್ಧಪಡಿಸಲಾಗಿದೆ. ಉಳಿದ 66 ತಾಲೂಕುಗಳಿಗೆ ಕಿರಿಯ ದರ್ಜೆ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಅಧಿಕಾರಿಗಳ ಜವಾಬ್ದಾರಿ ನಿರ್ವಹಣೆಗೆ ಬಹುತೇಕ ಹೊಸ ವರ್ಷ ಜನವರಿಯಿಂದ ಆರಂಭ ಆಗಲಿದೆ. ಅಧಿಕಾರಿಗಳಲ್ಲಿ ಬಹುತೇಕರು ಉತ್ಸಾಹ ತೋರಿಸಿರುವುದು ವಿಶೇಷ.

ಸರ್ಕಾರ ರೂಪಿಸುವ ಯೋಜನೆಗಳು ತಾಲೂಕು ಮಟ್ಟದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜಾರಿಯಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗಳಾಗಿರುವ ಐಎಎಸ್ ಅಧಿಕಾರಿಗಳಲ್ಲಿ ಬಹುತೇಕರು ತಾಲೂಕಿಗೆ ಹೋಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕುಗಳಲ್ಲಿ ಪ್ರವಾಸ ಮಾಡುತ್ತಿಲ್ಲ. ಆದ್ದರಿಂದಲೇ ಸರ್ಕಾರ ಪರ್ಯಾಯ ಮಾರ್ಗ ಕಂಡುಕೊಂಡಿದೆ. ಕೆಎಎಸ್ ಅಧಿಕಾರಿಗಳಾದರೆ ರಾಜ್ಯದವರೇ ಆಗಿರುತ್ತಾರೆ. ರಾಜ್ಯದ ಅಭಿವೃದ್ಧಿಯ ಬಗ್ಗೆ ಅವರಿಗೂ ಕಾಳಜಿ ಇರುತ್ತದೆ. ಆದ್ದರಿಂದ ಕೆಎಎಸ್ ಅಧಿಕಾರಿಗಳಿಗೆ ಹೊಸ ಜವಾಬ್ದಾರಿಯನ್ನು ನೀಡಲಾಗುತ್ತಿದೆ. ತಾಲೂಕುಗಳ ಪ್ರಗತಿ ಕಾಣಬೇಕೆಂದರೆ ಪ್ರಮುಖವಾಗಿ ಆರೋಗ್ಯ, ಶಿಕ್ಷಣ ಮತ್ತು ಅಭಿವೃದ್ಧಿ ಸೂಚ್ಯಂಕ ಹೆಚ್ಚಾಗಬೇಕು. ಆ ರೀತಿಯಾಗಲು ಇಡೀ ತಾಲೂಕು ಆಡಳಿತ ಒಟ್ಟಾಗಿ ದುಡಿಯಬೇಕು. ಅದಕ್ಕೊಬ್ಬರ ನೇತೃತ್ವ ಬೇಕಾಗುತ್ತದೆ. ಆ ಕೆಲಸ ಉಸ್ತುವಾರಿ ಅಧಿಕಾರಿಗಳ ಮೂಲಕ ಮಾಡಲು ಸರ್ಕಾರ ಮುಂದಾಗಿದೆ.

ಜನಸ್ನೇಹಿ ಆಡಳಿತ: ತಳಮಟ್ಟದಲ್ಲಿ ಅಧಿಕಾರ ಸುಧಾರಣೆಯಾದರೆ ಮಾತ್ರ ಜನಸ್ನೇಹಿ ಆಡಳಿತ ನೀಡಲು ಸಾಧ್ಯವಾಗುತ್ತದೆ. ಬಹುತೇಕ ತಾಲೂಕುಗಳಲ್ಲಿ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇದೆ. ಎಲ್ಲ ಇಲಾಖೆಗಳ ಮುಖ್ಯಸ್ಥರನ್ನು ಒಟ್ಟಾಗಿ ಸೇರಿಸಿದರೆ ಮಾತ್ರ ಯಾವುದೇ ಯೋಜನೆ ಪುನಾರಾವರ್ತನೆಯಾಗದಂತೆ, ಸರ್ಕಾರದ ಹಣ ಪೋಲಾಗದಂತೆ ತಡೆಯಲು ಸಾಧ್ಯವಾಗುತ್ತದೆ. ಆದ್ದರಿಂದಲೇ ಕೆಎಎಸ್ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗುತ್ತಿದೆ.

ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳ ಆದ್ಯತೆ: ರಾಜ್ಯದಲ್ಲಿ 100 ಅಧಿಕ ಆಕಾಂಕ್ಷಿ ತಾಲೂಕುಗಳಿವೆ. ಸರಾಸರಿ ಪ್ರಗತಿಗಿಂತ ಕಡಿಮೆ ಪ್ರಗತಿ ಸಾಧನೆ ಮಾಡಿವೆ. ಈ ತಾಲೂಕುಗಳಲ್ಲಿ ಶಿಕ್ಷಣ, ಆರೋಗ್ಯ, ಪೌಷ್ಟಿಕತೆ, ಲಿಂಗ ಸಮಾನತೆ, ಬಡತನ ನಿವಾರಣೆ ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿ ಆಯಾಮಗಳನ್ನು ವೃದ್ಧಿಸಬೇಕಾಗಿದೆ. ಉಳಿದ ತಾಲೂಕುಗಳಲ್ಲಿ ಪ್ರಗತಿಯ ವೇಗ ಇನ್ನಷ್ಟು ಹೆಚ್ಚಾಗಬೇಕಾಗಿದೆ. ಆ ಕಾರ್ಯವನ್ನು ಉಸ್ತುವಾರಿ ಅಧಿಕಾರಿಗಳ ಮೂಲಕ ನಿರೀಕ್ಷೆ ಮಾಡಲಾಗುತ್ತಿದೆ.

ನಿಗದಿಯಾಗಿರುವ ಜವಾಬ್ದಾರಿಗಳು

  • ಅಧಿಕಾರಿ ಪ್ರತಿ ತಿಂಗಳು ಎರಡು ಬಾರಿ ತಾಲೂಕು ಭೇಟಿ, ಇಲಾಖೆ ಕಾರ್ಯಕ್ರಮಗಳ ಪರಿಶಿಲನೆ. ಸ್ಥಳ ಪರಿಶೀಲನೆ, ಸ್ಥಳೀಯ ಸಂಸ್ಥೆಗಳ ಕ್ರಿಯಾ ಯೋಜನೆ ಪರಿಶೀಲನೆ, ಆಡಳಿತವನ್ನು ನಾಗರಿಕ ಸ್ನೇಹಿಯಾಗಿಸುವುದು
  • ತಾಲೂಕಿನ ಶೈಕ್ಷಣಿಕ, ಆರೋಗ್ಯ ಹಾಗೂ ಅಭಿವೃದ್ದಿ ಸೂಚ್ಯಂಕ ಉತ್ತಮ ಪಡಿಸುವುದು.
  • ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನದ ಉಸ್ತುವಾರಿ
  • ತಾಲೂಕು ಭೇಟಿಯ ವೇಳೆ ಎಸ್​ಸಿ, ಎಸ್​ಟಿ, ಒಬಿಸಿ, ಅಲ್ಪಸಂಖ್ಯಾತರ ಹಾಸ್ಟೆಲ್, ವಸತಿ ಶಾಲೆಗಳಿಗೆ ಅನಿರೀಕ್ಷಿತ ಭೇಟಿ. ಪರಿಶೀಲನೆ. ಲೋಪಗಳಿದ್ದರೆ ಸ್ಥಳದಲ್ಲಿಯೇ ಪರಿಹಾರ
  • ಆರೋಗ್ಯ ಸೇವೆಗಳ ಗುಣಮಟ್ಟ ವೃದ್ಧಿಸುವುದು. ತಾಲೂಕು ಆಸ್ಪತ್ರೆ, ಪಿಎಚ್​ಸಿಗಳಿಗೆ ಭೇಟಿ ನೀಡುವುದು. ವೈದ್ಯರು ಹಾಗೂ ಸಿಬ್ಬಂದಿಯ ಕೊರತೆ ಇದ್ದಲ್ಲಿ ಸರಿಪಡಿಸಲು ಕ್ರಮ
  • ಶಿಕ್ಷಣ ಗುಣಮಟ್ಟ ಸುಧಾರಣೆಗೆ ಶಾಲೆ, ಕಾಲೇಜು, ಐಟಿಐಗಳಿಗೆ ಭೇಟಿ ನೀಡುವುದು. ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವುದು
  • ಶಾಲಾ ಕಟ್ಟಡಗಳ ದುರಸ್ಥಿ ಹಾಗೂ ಹೊಸ ಕಾಮಗಾರಿಗಳ ಪರಿಶೀಲನೆ
  • ಸ್ವಂತ ಕಟ್ಟಡಗಳಿಲ್ಲದ ಅಂಗನವಾಡಿಗಳಿಗೆ ನಿವೇಶನ ಕೊಡಿಸುವುದು. ಅಲ್ಲಿನ ಸಮಸ್ಯೆಗಳ ನಿವಾರಣೆ
  • ವರ್ಷಕ್ಕೆ ಕನಿಷ್ಠ 2 ಗ್ರಾಮಸಭೆಗಳಿಗೆ ಭೇಟಿ
  • ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಇಂಧನ, ಜಲ ಸಂಪನ್ಮೂಲ, ಲೋಕೋಪಯೋಗಿ, ಕೃಷಿ, ತೋಟಗಾರಿಕೆ ಇಲಾಖೆಗಳ ಪ್ರಮುಖ ಕಾರ್ಯಕ್ರಮಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್, ಮೇವು, ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು, ಮಧ್ಯಾಹ್ನದ ಬಿಸಿಯೂಟ, ನರೇಗಾ, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಆರ್ಥಿಕ, ಬೌದ್ಧಿಕ ಪ್ರಗತಿ ಪರಿಶೀಲನೆ
  • ತಾಲೂಕಿನ ಘನ ಹಾಗೂ ದ್ರವ್ಯ ತ್ಯಾಜ್ಯ ನಿರ್ವಹಣೆ
  • ಮೋಜಿನಿ, ಭೂ ದಾಖಲೆ ಸಂಬಂಧಿಸಿದ ಪ್ರಕರಣಗಳ ತ್ವರಿತ ಇತ್ಯರ್ಥ. ತಾಲೂಕಿನಲ್ಲಿ ಇ-ಆಧಾರಿತ ಸೇವೆ ಜನರಿಗೆ ಸುಲಭವಾಗಿ ಸಿಗುವಂತೆ ನೋಡಿಕೊಳ್ಳುವುದು
  • ತಾಲೂಕಿನ ವಿವಿಧ ಇಲಾಖೆಗಳಿಗೆ ಭೇಟಿ, ತಪಾಸಣೆ, ಲೋಪಗಳಿದ್ದರೆ ಶಿಸ್ತುಕ್ರಮಕ್ಕೆ ಸರ್ಕಾ ರಕ್ಕೆ ಶಿಫಾರಸು. ಸಮಸ್ಯೆಗಳಿಗೆ ಸೂಕ್ತ ಪರಿಹಾರ
  • ಎಸ್​ಸಿಎಸ್​ಪಿ, ಟಿಎಸ್​ಪಿ ಅನುದಾನಿತ ಕಾಮಗಾರಿಗಳ ಪರಿಶೀಲನೆ
  • ತಾಲೂಕಿನ ಯುವ ಸಮುದಾಯಕ್ಕೆ ಉದ್ಯೋಗಾ ಧಾರಿತ ತರಬೇತಿ ಕುರಿತು ಸಮನ್ವಯ, ಸಾಲ ಮಂಜೂರಾತಿಗೆ ಬೇಕಾದ ಅವಶ್ಯ ಸಲಹೆ
  • ತಾಲೂಕಿನ ಅಪೌಷ್ಟಿಕ ಮಕ್ಕಳ ವಿವರ ಪಡೆದು ನಿರಂತರವಾಗಿ ಸರ್ಕಾರದ ಅಪೌಷ್ಟಿಕತೆ ನಿವಾರಣೆ ಕಾರ್ಯಕ್ರಮಗಳ ಅನುಷ್ಠಾನ
  • ತಾಲೂಕಿನ ಯುವಕ, ಯುವತಿಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಿಗೆ ಅನುಗುಣವಾಗಿ ವೃತ್ತಿ ನೈಪುಣ್ಯತೆ ಹೆಚ್ಚಿಸಿ ಜೀವನೋಪಾಯ ಸದೃಢಗೊಳಿಸುವುದು
  • ಗೃಹ ಕೈಗಾರಿಕೆ, ಸಣ್ಣ ಕೈಗಾರಿಕೆಗಳನ್ನು ಗುರುತಿಸಿ ಅವುಗಳಿಗೆ ಸರ್ಕಾರದ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದು, ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕ್ರಮ ವಹಿಸುವುದು
  • ಖಾಸಗಿ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯಲ್ಲಿ ಹೆಚ್ಚಿನ ಆರ್ಥಿಕ ಸಹಾಯ ಪಡೆದು ಆರೋಗ್ಯ, ಶೈಕ್ಷಣಿಕ, ಸ್ವಚ್ಛತೆ, ನೈಸರ್ಗಿಕ ಕಾರ್ಯಗಳ ಕಡೆ ಗಮನ ಹರಿಸುವುದು
  • ಅಭಿವೃದ್ಧಿ ಕಾರ್ಯಗಳು ಪುನಾರಾವರ್ತನೆಯಾಗದಂತೆ ಹಾಗೂ ಸಾರ್ವಜನಿಕ ಹಣ ಪೋಲಾಗದಂತೆ ತಡೆಯುವುದು, ಸೂಕ್ತ ತಂತ್ರಜ್ಞಾನ ಬಳಕೆ
  • ತಾಲೂಕಿನ ಪ್ರತಿಯೊಬ್ಬ ಜನಪ್ರತಿನಿಧಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಸಾಧಿಸುವುದು
  • ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರು ಪೂರೈಕೆ, ಓವರ್​ಹೆಡ್ ಟ್ಯಾಂಕ್​ಗಳ ಸ್ವಚ್ಛತೆ, ಜಲಾಶಯಗಳ ಪರಿಶೀಲನೆ
  • ಪ್ರತಿ ತಿಂಗಳ ವರದಿಯನ್ನು ಜಿಲ್ಲಾಧಿಕಾರಿ ಮತ್ತು ಸರ್ಕಾರಕ್ಕೆ ಸಲ್ಲಿಕೆ

ಗ್ಯಾರಂಟಿಗಳ ಪ್ರಚಾರ: ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿಯೇ ಸುಮಾರು 40 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡುವ ಗ್ಯಾರಂಟಿಗಳನ್ನು ಜಾರಿಗೆ ಕೊಟ್ಟಿದೆ. ಆದರೆ ತಳ ಮಟ್ಟದಲ್ಲಿ ಸಿಗಬೇಕಾದ ರೀತಿಯಲ್ಲಿ ಪ್ರಚಾರ ಸಿಗುತ್ತಿಲ್ಲ. ಅಧಿಕಾರಿ ವೃಂದ ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿಲ್ಲ. ತಾಲೂಕಿಗೆ ನೇಮಕವಾಗುವ ಉಸ್ತುವಾರಿ ಅಧಿಕಾರಿಗಳ ಮೂಲಕ ಗ್ಯಾರಂಟಿಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುವ ಉದ್ದೇಶ ಇದ್ದರೂ ಅದನ್ನು ಬಹಿರಂಗವಾಗಿ ಹೇಳುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net