

ಜೈಪುರ: ಲೋಕಸಭಾ ಚುನಾವಣೆ 2024ರ ಫಲಿತಾಂಶ ಜೂನ್. 04ರಂದು ಅಧಿಕೃತವಾಗಿ ಹೊರಬೀಳಲಿದ್ದು, ಕೇಂದ್ರ ಸರ್ಕಾರದಲ್ಲಿ ಯಾರಿಗೆ ದೊರೆಯಲಿದೆ ಅಧಿಕಾರದ ಚುಕ್ಕಾಣಿ ಎಂಬುದೇ ಇದೀಗ ಜನಸಾಮಾನ್ಯರ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಇತ್ತೀಚೆಗಷ್ಟೇ ಹೊರಬಿದ್ದ ಚುನಾವಣೋತ್ತರ ಸಮೀಕ್ಷಾ ವರದಿ ಗೆಲುವಿನ ಪತಾಕೆ ಯಾರು ಹಾರಿಸಲಿದ್ದಾರೆ ಎಂಬುದರ ಮುನ್ನೋಟವನ್ನು ನೀಡಿದ್ದೇ ಆದರೂ ಅಧಿಕೃತ ಘೋಷಣೆ ಏನಿದೆ? ಎಂಬುದನ್ನು ನಾಳೆಯವರೆಗೂ ಕಾದು ತಿಳಿಯಬೇಕಿದೆ.
ಒಂದೆಡೆ ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಅಧಿಕಾರ ವಹಿಸಲಿದೆ ಎಂದು ಹೇಳಿದರೆ, ಮತ್ತೊಂದೆಡೆ ಕಾಂಗ್ರೆಸ್ ಈ ಬಾರಿ ಮೋದಿ ಸರ್ಕಾರವನ್ನು ಕೆಳಗಿಳಿಸಲಿದೆ ಎಂದು ಹೇಳಲಾಗಿದೆ. ಆದ್ರೆ, ಚುನಾವಣೋತ್ತರ ಸಮೀಕ್ಷೆ ವರದಿ ಪ್ರಕಾರ ನೋಡುವುದಾದರೆ, ದೇಶದಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸೀಟ್ಗಳನ್ನು ಗೆಲ್ಲಲಿದೆ ಎಂಬುದು ಬಹುತೇಕ ಖಚಿತವಾಗಿದೆ.
ಇನ್ನು ಈ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ನಾಯಕರಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದು, ಈಗಾಗಲೇ ಆಯಾ ರಾಜ್ಯಗಳ ಪ್ರಧಾನ ಕಛೇರಿಗಳಲ್ಲಿ ಸಡಗರಕ್ಕೆ ಸಕಲ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗಿದೆ. ಇದೇ ಖುಷಿಯಲ್ಲಿ ರಾಜಸ್ಥಾನದ ಜೈಪುರದಲ್ಲಿರುವ ಬಿಜೆಪಿ ಕಛೇರಿಯಲ್ಲಿ ಸಿಹಿ ತಯಾರಿಸಲಾಗುತ್ತಿದ್ದು, ಇದರ ವಿಡಿಯೋ ತುಣುಕು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ,(ಏಜೆನ್ಸೀಸ್).