

ಚೆನ್ನೈ: ತಮ್ಮ ಅಭಿನಯದ ಮೂಲಕ ದಕ್ಷಿಣ ಭಾರತದ ಚಲನ ಚಿತ್ರ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ನಟಿ ರಾಧಿಕಾ ಶರತ್ ಕುಮಾರ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ಗೊತ್ತೇ ಇದೆ. ತಮಿಳುನಾಡಿನ ವಿರುದುನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ರಾಧಿಕಾ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಯಶಸ್ಸು ಸಾಧಿಸಿ ಸಂಸತ್ ಪ್ರವೇಶಿಸಲಿ ಎಂದು ರಾಧಿಕಾ ಪತಿ, ಹಿರಿಯ ನಟ ಶರತ್ ಕುಮಾರ್ ಉರುಳು ಸೇವೆ ಮಾಡಿ ಶುಭ ಹಾರೈಸಿದ್ದಾರೆ.
ರಾಧಿಕಾ ದಂಪತಿ ಭಾನುವಾರ ರಾತ್ರಿ ವಿರುದ್‌ನಗರದ ಶ್ರೀ ಪರಾಶಕ್ತಿ ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಶರತ್ ಕುಮಾರ್ ದೇವಸ್ಥಾನದ ಆವರಣದಲ್ಲಿ ಅಮ್ಮನವರಿಗೆ ಪ್ರದಕ್ಷಿಣೆ ಹಾಕಿದ ಬಳಿಕ ಉರುಳುಸೇವೆ ಮಾಡಿದರು.
ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ವೈರಲ್ ಆಗಿವೆ. ನಟ ರಾಧಿಕಾ ಪರವಾಗಿ ಚುನಾವಣಾ ಪ್ರಚಾರದಲ್ಲೂ ಈ ಹಿರಿಯ ನಟ ಸಕ್ರಿಯವಾಗಿ ಭಾಗವಹಿಸಿದ್ದರು.
2006 ರಲ್ಲಿ ರಾಧಿಕಾ ಶರತ್‌ಕುಮಾರ್ ಅವರ ರಾಜಕೀಯ ಜೀವನ ಪ್ರಾರಂಭವಾಯಿತು. ಪತಿ ಶರತ್‌ಕುಮಾರ್ ಜೊತೆ ಎಐಎಡಿಎಂಕೆ ಸೇರಿದರು. ಅದೇ ವರ್ಷದಲ್ಲಿ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಅವರನ್ನು ವಜಾಗೊಳಿಸಲಾಯಿತು. 2007 ರಲ್ಲಿ ಅವರು ಅಖಿಲ ಭಾರತ ಸಮತುವ ಮಕ್ಕಳ್ ಕಚ್ಚಿ (ಎಐಎಸ್‌ಎಂಕೆ) ಪಕ್ಷವನ್ನು ಸ್ಥಾಪಿಸಿ, ಅವರು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಆದರೆ ಕೆಲ ದಿನಗಳ ಹಿಂದೆ ಎಐಎಸ್‌ಎಂಕೆ ಬಿಜೆಪಿಯೊಂದಿಗೆ ವಿಲೀನಗೊಂಡಿತು. ಬಳಿಕ ಅವರು ಬಿಜೆಪಿ ಟಿಕೆಟ್ ಪಡೆದರು.
ನಟ ದಿವಂಗತ ಕ್ಯಾಪ್ಟನ್ ವಿಜಯಕಾಂತ್ ಅವರ ಪುತ್ರ ವಿಜಯ ಪ್ರಭಾಕರನ್ ಎಐಡಿಎಂಕೆ ಯಿಂದ ಇದೇ ವಿರುದ್‌ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಹಾಲಿ ಸಂಸದ ಮಾಣಿಕ್ಕಂ ಟ್ಯಾಗೋರ್ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಇದು ತ್ರಿಕೋನ ಹೋರಾಟ. ಮತ್ತು ಈ ಕುತೂಹಲಕಾರಿ ಕದನದಲ್ಲಿ ರಾಧಿಕಾ ಗೆಲ್ಲುತ್ತಾರೋ ಇಲ್ಲವೋ ತಿಳಿಯಬೇಕಾದರೆ ಮಂಗಳವಾರದವರೆಗೆ ಕಾಯಲೇಬೇಕು.