

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಅನೇಕ ಆಹಾರ ಪದಾರ್ಥಗಳ ಬೆಲೆ ಸಾಕಷ್ಟು ಏರಿಕೆ ಕಂಡಿದೆ. ಆದರೆ, ಚಪಾತಿ ತಿನ್ನುವವರಿಗೆ ಸಿಹಿ ಸುದ್ದಿ ಬರಬಹುದಾಗಿದೆ. ಮುಂಬರುವ ದಿನಗಳಲ್ಲಿ ಗೋಧಿ ಬೆಲೆ ಕಡಿಮೆಯಾಗುವ ನಿರೀಕ್ಷೆ ಇದೆ.
ಭಾರತದ ಗೋಧಿ ಉತ್ಪಾದನೆಯು 2023-24ರ ಬೆಳೆ ವರ್ಷದಲ್ಲಿ 11.4 ಕೋಟಿ ಟನ್‌ಗಳ ಹೊಸ ದಾಖಲೆಯನ್ನು ಮುಟ್ಟಬಹುದಾಗಿದೆ. ಇದರಿಂದಾಗಿ ಬೆಲೆಯೂ ನಿಯಂತ್ರಣಕ್ಕೆ ಬರಬಹುದಾಗಿದೆ.
2023-24 ರ ಬೆಳೆ ವರ್ಷದಲ್ಲಿ ಗೋಧಿ ಉತ್ಪಾದನೆಯು 11.4 ಕೋಟಿ ಟನ್‌ಗಳ ಹೊಸ ದಾಖಲೆಯನ್ನು ತಲುಪುವ ನಿರೀಕ್ಷೆಯಿದೆ. ಹವಾಮಾನ ಪರಿಸ್ಥಿತಿಗಳು ಸಾಮಾನ್ಯವಾಗಿದ್ದರೆ ಇದು ವಾಸ್ತವ ರೂಪಕ್ಕೆ ಬರಲಿದೆ ಎಂದು ಆಹಾರ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಖ್ಯವಾಗಿ ಚಳಿಗಾಲದ ಬೆಳೆಯಾದ ಗೋಧಿಯ ಕೊನೆಯ ಹಂತದ ಬಿತ್ತನೆ ಕಾರ್ಯ ನಡೆಯುತ್ತಿದ್ದು, ಮುಂದಿನ ವಾರದವರೆಗೆ ಮುಂದುವರಿಯಲಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಕಳೆದ ವಾರದವರೆಗೆ 320.54 ಲಕ್ಷ ಹೆಕ್ಟೇರ್‌ನಲ್ಲಿ ಗೋಧಿ ಬಿತ್ತನೆ ಕೈಗೊಳ್ಳಲಾಗಿದೆ.
2022-23 ಬೆಳೆ ವರ್ಷದಲ್ಲಿ (ಜುಲೈ-ಜೂನ್) ಗೋಧಿ ಉತ್ಪಾದನೆಯು ದಾಖಲೆಯ 11.055 ಕೋಟಿ ಟನ್‌ಗಳಷ್ಟಿತ್ತು, ಹಿಂದಿನ ವರ್ಷದಲ್ಲಿ ಇದು 10.77 ಕೋಟಿ ಟನ್ ಇತ್ತು
"ಈ ವರ್ಷ ಗೋಧಿ ಬೆಳೆಯುವ ಒಟ್ಟು ಪ್ರದೇಶವು ಹೆಚ್ಚಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಹವಾಮಾನವು ಸರಿಯಾಗಿದ್ದರೆ, 11.4 ಕೋಟಿ ಟನ್ಳಷ್ಟು ಉತ್ಪಾದನೆಯಾಗಲಿದೆ ಎಂದು ಕೃಷಿ ಸಚಿವಾಲಯವು ನಮಗೆ ಅನೌಪಚಾರಿಕವಾಗಿ ಸೂಚಿಸಿದೆ" ಎಂದು ಭಾರತೀಯ ಆಹಾರ ನಿಗಮ (ಎಫ್ಸಿಐ) ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಕೆ ಮೀನಾ ತಿಳಿಸಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಗೋಧಿ ಬೆಳೆ ಬಿತ್ತನೆ ಪ್ರದೇಶವೂ ಹೆಚ್ಚಳವಾಗಿದೆ. ಕೆಲವು ರಾಜ್ಯಗಳಲ್ಲಿ ಶೇಕಡಾ ಒಂದರಷ್ಟು ಕೊರತೆಯಿದ್ದು, ಜನವರಿ ಮೊದಲ ವಾರದಲ್ಲಿ ಅದನ್ನೂ ತುಂಬಲಾಗುವುದು ಎಂದು ಅವರು ಹೇಳಿದರು.