

ನವದೆಹಲಿ: ಸೇನೆಗೆ ಅಗತ್ಯವಾದ 26 ಸಾಮಗ್ರಿ ಹಾಗೂ ಉಪಕರಣಗಳನ್ನು ದೇಶೀಯ ಕಂಪನಿಯಿಂದಲೇ ಖರೀದಿ ಮಾಡುವಂತೆ ರಕ್ಷಣಾ ಸಚಿವಾಲಯ ಬುಧವಾರ ನಿರ್ದೇಶನ ನೀಡಿದೆ. ಮೇಕ್ ಇನ್ ಇಂಡಿಯಾ ನೀತಿಯನ್ವಯ ದೇಶೀಯ ಕಂಪನಿಗಳಿಗೆ ಪೋ›ತ್ಸಾಹ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶೀಯ ರಕ್ಷಣಾ ಕೈಗಾರಿಕೆಗೆ ಉತ್ತೇಜನ ನೀಡಲು ಮತ್ತು ಶಸ್ತ್ರಾಸ್ತ್ರ ಹಾಗೂ ಇತರ ಮಿಲಿಟರಿ ಅಗತ್ಯಗಳ ಆಮದು ವೆಚ್ಚ ಕಡಿತ ಮಾಡಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಸುಧಾರಣಾ ಕ್ರಮಗಳನ್ನು ಪ್ರಕಟಿಸಿದ ಕೆಲವೇ ದಿನಗಳಲ್ಲಿ ರಕ್ಷಣಾ ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ. ದೇಶೀಯ ರಕ್ಷಣಾ ಉತ್ಪಾದಕರಿಂದ ಖರೀದಿಸಬೇಕೆಂದು ಗುರುತಿಸಲಾಗಿರುವ ಎಲ್ಲ ಉಪಕರಣಗಳು ಹಡಗು ನಿರ್ವಣಕ್ಕೆ ಬಳಸುವಂಥದ್ದಾಗಿವೆ. ಸ್ಥಳೀಯ ಸರಬರಾಜುದಾರರಿಂದ ಖರೀದಿಸಲು 127 ವಸ್ತುಗಳನ್ನು ಇದುವರೆಗೆ ರಕ್ಷಣಾ ಸಚಿವಾಲಯ ಗುರುತಿಸಿದೆ. ಬುಧವಾರ ಗುರುತಿಸಿರುವುದು ಹೆಚ್ಚುವರಿ ವಸ್ತುಗಳಾಗಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಪ್ರತ್ಯೇಕ ಬಜೆಟ್ ಅನುದಾನ: ಭಾರತೀಯ ನಿರ್ವಿುತ ಮಿಲಿಟರಿ ಹಾರ್ಡ್ವೇರ್ಗಳ ಖರೀದಿಗೆ ಪ್ರತ್ಯೇಕ ಬಜೆಟ್ ಅನುದಾನ ನಿಗದಿಪಡಿಸುವುದು, ಆಟೊಮ್ಯಾಟಿಕ್ ರೂಟ್ ಅನ್ವಯದ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಪ್ರಮಾಣವನ್ನು ಶೇ. 48ರಿಂದ ಶೇ. 74ಕ್ಕೆ ಏರಿಸುವುದು ಹಾಗೂ ಆಮದು ಮಾಡಿಕೊಳ್ಳದಿರುವ ಶಸ್ತ್ರಾಸ್ತ್ರಗಳ ಪಟ್ಟಿಯನ್ನು ಪ್ರತಿ ವರ್ಷ ಸಿದ್ಧಪಡಿಸುವುದು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿರುವ ಸುಧಾರಣೆಗಳಲ್ಲಿ ಸೇರಿವೆ.