

ನವದೆಹಲಿ: ಕಳೆದ ವರ್ಷ ಸೆಪ್ಟಂಬರ್ 20, 2023ರಂದು ಜರ್ಮನ್ ಮೂಲದ ನಟಿ ಸುಝೇನ್ ಬರ್ನರ್ಟ್ 3 ಈಡಿಯಟ್ಸ್ ಸಿನಿಮಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ ತಮ್ಮ ಪತಿ ಅಖಿಲ್ ಮಿಶ್ರಾ ಅವರನ್ನು ಕಳೆದುಕೊಂಡರು. ಮನೆಯಲ್ಲಿ ದಿಢೀರ್ ಕುಸಿತದಿಂದ ಸಾವನ್ನಪ್ಪಿದ ಪತಿಯ ಅಗಲಿಕೆ ನಟಿ ಹಾಗೂ ಆಕೆಯ ಕುಟುಂಬಸ್ಥರಿಗೆ ಭಾರೀ ಆಘಾತವನ್ನು ತಂದೊಡ್ಡಿತ್ತು. ಆದರೆ, ಈ ಘಟನೆ ನಡೆದು ಒಂದು ವರ್ಷಕ್ಕೂ ಮುನ್ನವೇ ಸುಝೇನ್ ಪ್ರೀತಿಯಲ್ಲಿ ಬಿದ್ದಿದ್ದು, ದೆಹಲಿ ಮೂಲದ ವ್ಯಕ್ತಿಯೊಂದಿಗೆ ಪ್ರೇಮದಲ್ಲಿದ್ದಾರೆ ಎಂಬ ಸುದ್ದಿ ಈಗ ಬಹಿರಂಗವಾಗಿದೆ.
ದೆಹಲಿ ಮೂಲದ ಅರ್ಜುನ್ ಹಾರ್ದಾಸ್ ಎಂಬ ವ್ಯಕ್ತಿಯೊಂದಿಗೆ ಪ್ರೇಮ ಸಂಬಂಧ ಹೊಂದಿರುವ ಸುಝೇನ್ ಬರ್ನರ್ಟ್, ಮತ್ತೆ ಪ್ರೀತಿಯನ್ನು ಕಂಡುಕೊಂಡಿದ್ದಾರೆ. 'ಕಸೌತಿ ಜಿಂದಗಿ ಕೇ', 'ಝಾನ್ಸಿ ಕಿ ರಾಣಿ', 'ಏಕ್ ಹಜಾರೋನ್ ಮೇ ಮೇರಿ ಬೆಹನಾ ಹೈ', 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' ಮತ್ತು 'ಪ್ಯಾರ್ ಕಾ ಪೆಹ್ಲಾ ನಾಮ್': ರಾಧಾ ಮೋಹನ್ ಮುಂತಾದ ಟಿವಿ ಸೀರಿಯಲ್ನಲ್ಲಿ ನಟಿಸಿರುವ ಸುಝೇನ್ ಬರ್ನರ್ಟ್ ಇದೀಗ ಈ ವಿಷಯದ ಮುಖೇನ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಪತಿ, ನಟ ಅಖಿಲ್ ಮಿಶ್ರಾ ಅವರ ಸಾವಿನ ನಂತರ ಮತ್ತೆ ಪ್ರೀತಿಯನ್ನು ಕಂಡುಕೊಂಡಿರುವ ಸುಝೇನ್, ಪ್ರಸ್ತುತ ದೆಹಲಿ ಮೂಲದ ಅರ್ಜುನ್ ಹರ್ದಾಸ್ ಅವರನ್ನು ಪ್ರೀತಿಸುತ್ತಿದ್ದಾರೆ. ವೃತ್ತಿಯಲ್ಲಿ ಅರ್ಜುನ್ ಎನ್ಜಿಒ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಇನ್ನು ಈ ಬಗ್ಗೆ ಮಾತನಾಡಿದ ನಟಿ, ಅಖಿಲ್ ನಿಧನದ ನಂತರ, ನಾನು ಕೆಲಸದ ಹೊರತಾಗಿ ಜನರನ್ನು ನೇರವಾಗಿ ಭೇಟಿಯಾಗುವುದನ್ನು ನಿಲ್ಲಿಸಿಬಿಟ್ಟೆ. ಹೆಚ್ಚಿನ ಸಮಯವನ್ನು ಮನೆಯಲ್ಲಿಯೇ ಕಳೆದೆ ಎಂದು ಹೇಳಿದರು.
ಡಿಸೆಂಬರ್ 2023ರಲ್ಲಿ ನನ್ನ ಸ್ನೇಹಿತನ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕಾಗಿ ದೆಹಲಿಗೆ ಪ್ರಯಾಣಿಸುವ ಸಂದರ್ಭ ಒದಗಿ ಬಂದಿತು. ಆಗ ಅರ್ಜುನ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿದೆ. ಕೆಲವೇ ದಿನಗಳಲ್ಲಿ ನಾವು ಆತ್ಮೀಯ ಸ್ನೇಹಿತರಾದೆವು. ಇಂದು ನಾವು ಭಾವನಾತ್ಮಕವಾಗಿ ಪರಸ್ಪರ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತೇವೆ ಮತ್ತು ನಾವು ದೀರ್ಘಕಾಲದಿಂದ ಚಿರಪರಿಚಿತರು ಎಂದೇ ಭಾಸವಾಗುತ್ತದೆ" ಎಂದು ಹೇಳಿದ್ದಾರೆ.
ಇಂದು ನಾನು ಏನಾಗಿದ್ದರೂ ಅದು ಅಖಿಲ್‌ನಿಂದಾಗಿ ಮಾತ್ರ ಎಂಬುದನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ನನ್ನ ದಿವಂಗತ ಪತಿ ನನ್ನ ಭಾಗವಾಗಿದ್ದಾರೆ ಎಂಬ ಸಂಗತಿಯನ್ನು ಅರ್ಜುನ್ ಒಪ್ಪಿಕೊಂಡಿದ್ದಾರೆ. ಈ ನಿರ್ಧಾರದ ಮೂಲಕ ಅಖಿಲ್ ಅವರನ್ನು ಬದಲಿಸುವ ಉದ್ದೇಶವಿಲ್ಲ. ಅಖಿಲ್ ಎಂದೆಂದಿಗೂ ನನ್ನ ಪ್ರೀತಿಯ ವ್ಯಕ್ತಿ ಮತ್ತು ಅದ್ಭುತ ಮನುಷ್ಯ. ಅವರು ಸದಾ ಜೀವಿಸುತ್ತಾರೆ ಎಂದು ಸುಝೇನ್ ಹೇಳಿದರು,(ಏಜೆನ್ಸೀಸ್).