

ಅಹಮದಾಬಾದ್: ಪ್ರತಿಭಾವಂತ ಯುವ ವಿದ್ಯಾರ್ಥಿಯೊಬ್ಬಳು ಯಾವ ಸುಳಿವೂ ನೀಡದೆ ಸಾವಿಗೆ ಶರಣಾಗಿರುವ ಘಟನೆಯೊಂದು ಅಹಮದಾಬಾದಿನ ಐಐಎಂ ಹಾಸ್ಟೆಲ್ನಿಂದ ವರದಿಯಾಗಿದೆ. ಐಐಎಂ-ಎನ ಡಾರ್ಮ್ ಸಂಖ್ಯೆ 8ರಲ್ಲಿ ನೇಣು ಬಿಗಿದುಕೊಂಡು ಸಾವಪ್ಪಿರುವ ಯುವತಿಯನ್ನು ಬಿಹಾರದ ಮುಜಫ್ಫರಪುರದ ದೃಷ್ಟಿ ರಾಜ್ ಕಹ್ನಾನಿ ಎಂಬುದಾಗಿ ಗುರುತಿಸಲಾಗಿದೆ. ಅಹಮದಾಬಾದಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಐಐಎಂನಲ್ಲಿ ಎಂಬಿಎ-ಪಿಜಿಪಿ ಕೋರ್ಸ್ನ ಎರಡನೇ ವರ್ಷದಲ್ಲಿ ಆಕೆ ವ್ಯಾಸಂಗ ಮಾಡುತ್ತಿದ್ದಳು.
ಇತ್ತೀಚೆಗೆ ರಜೆ ಮುಗಿಸಿ ಕ್ಯಾಂಪಸ್ಗೆ ಮರಳಿದ್ದ ದೃಷ್ಟಿ ಬುಧವಾರ ಬೆಳಿಗ್ಗೆಯಿಂದ ತನ್ನ ರೂಮಿನಲ್ಲೇ ಸೇರಿಕೊಂಡಿದ್ದಳು. ಊಟಕ್ಕೂ ಆಚೆ ಬರದಿದ್ದಾಗ ಅವಳ ಸಹಪಾಠಿಗಳು ಮಧ್ಯಾಹ್ನ 2.30ರ ವೇಳೆಗೆ ಅವಳನ್ನು ವಿಚಾರಿಸಲು ಹೋದರು. ಎಷ್ಟೇ ಕದ ತಟ್ಟಿದರೂ, ಕರೆದರೂ ಆಕೆ ಪ್ರತಿಕ್ರಿಯಿಸದಿದ್ದಾಗ, ಬಾಗಿಲು ಒಡೆದು ಒಳಹೋದರು. ಅಲ್ಲಿ ದೃಷ್ಟಿ ತನ್ನ ದುಪಟ್ಟ ಬಳಸಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಳು. ವಿಷಯ ತಿಳಿದ ಹಾಸ್ಟೆಲ್ನ ಸೆಕ್ಯುರಿಟಿ ಮತ್ತು ವೈದ್ಯರು ಬಂದು ಪರೀಕ್ಷಿಸಿದಾಗ ಆಕೆ ಸತ್ತಿರುವುದು ದೃಢವಾಯಿತು.
ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಇಂಥ ಗಂಭೀರ ಕ್ರಮ ತೆಗೆದುಕೊಳ್ಳಲು ಕಾರಣ ತಿಳಿದುಬಂದಿಲ್ಲ. ತನಿಖೆಗಾಗಿ ದೃಷ್ಟಿಯ ಮೊಬೈಲ್ಫೋನ್ ಫೊರೆನ್ಸಿಕ್ ಲ್ಯಾಬ್ಗೆ ಕಳುಹಿಸಲಾಗಿದೆ. ಶವವನ್ನು ಸೋಲಾ ಸಿವಿಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನವದೆಹಲಿಯಲ್ಲಿ ವಾಸವಾಗಿರುವ ದೃಷ್ಟಿಯ ಪಾಲಕರಿಗೆ ವಿಚಾರ ತಿಳಿಸಲಾಗಿದೆ. ತನ್ನ ಕ್ಯಾಂಪಸ್ನಲ್ಲಾಗಿರುವ ಆಘಾತಕಾರಿ ಘಟನೆ ಬಗ್ಗೆ ಐಐಎಂ-ಎ ಕಳವಳ ವ್ಯಕ್ತಪಡಿಸಿದೆ. (ಏಜೆನ್ಸೀಸ್)