ಈ ಐನಾತಿ ದಂಪತಿಗೆ ಮಿಡಲ್ ಕ್ಲಾಸ್ ಜನರೇ ಟಾರ್ಗೆಟ್! ನೂರಾರು ಜನರ ಕೆನ್ನೆಗೆ ಕಣ್ಣೀರಿಳಿಸಿದ ಕರ್ಮಿಷ್ಟರು

arrest
Published on

ಬೆಂಗಳೂರು: ಈ ಐನಾತಿ ದಂಪತಿಗೆ ಮಿಡಲ್ ಕ್ಲಾಸ್ ಜನರೇ ಟಾರ್ಗೆಟ್. ಇವರನ್ನ ನಂಬಿದ ಜನರೀಗ ಕೋಟ್ಯಂತರ ರೂಪಾಯಿ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.

ಗಿರಿನಗರ ಠಾಣಾ ವ್ಯಾಪ್ತಿ‌ಯಲ್ಲಿ ಈ ವಂಚನೆ ಪ್ರಕರಣ ನಡೆದಿದ್ದು, ಬರೋಬ್ಬರಿ 900 ಜನರಿಗೆ ಪಂಗನಾಮ ಸುಮಾರು 20 ಕೋಟಿ‌ ರೂಪಾಯಿ ವಂಚಿಸಿರುವ ಆರೋಪ ಖತರ್ನಾಕ್​ ದಂಪತಿ ಮೇಲಿದೆ. ಈ ಆರೋಪಿಗಳ ಹೆಸರು ಜ್ಞಾನೇಶ್-ಲೀಲಾವತಿ. ಈ ದಂಪತಿ ಸೇರಿದಂತೆ ಮಗ ಮನೋಜ್​ನನ್ನೂ ಪೊಲೀಸರು ಬಂಧಿಸಿದ್ದಾರೆ. ಹೆಚ್ಚುವರಿ ಬಡ್ಡಿ ಆಸೆಗೆ‌ ಬೀದಿಗೆ ಬಿದ್ದ ಹೂಡಿಕೆದಾರರು, ಪ್ರತಿಭಟನೆ ಮೂಲಕ‌ ಕಣ್ಣೀರಿಡುತ್ತಿದ್ದಾರೆ. ಜ್ಞಾನೇಶ್​ ಮತ್ತು ಲೀಲಾವತಿ ಅವರ ಮಗಳು‌ ಮೇಘನಾ ಹಾಗೂ ಅಳಿಯ ರವಿಕುಮಾರ್‌ ಕೂಡ ವಂಚನೆಯಲ್ಲಿ‌ ಭಾಗವಹಿಸಿದ್ದಾರೆ. ಅವರನ್ನೂ ಬಂಧಿಸಿ ಎಂದು ಆಗ್ರಹಿಸಿದ್ದಾರೆ. ಹನುಮಂತನಗರ ಪೊಲೀಸ್ ಠಾಣೆ ರೈಟರ್ ಆಗಿರುವ ಅಳಿಯ ರವಿಕುಮಾರ್‌, ಈ ವಂಚನೆ ಕೇಸ್​ ಮೇಲೆ ಪ್ರಭಾವ ಬೀರುವ ಆತಂಕ ಸಂತ್ರಸ್ತರಲ್ಲಿ ದಟ್ಟವಾಗಿದೆ. ಇದನ್ನೂ ಓದಿರಿ ಪ್ಲೀಸ್​… ನನ್ನ ಮಗಳನ್ನು ಕಾಪಾಡಿ ಎಂದು ಗೋಗರೆಯುತ್ತಿದ್ದ ತಂದೆ ಕಣ್ಣೆದುರಲ್ಲೇ ಪ್ರಾಣಬಿಟ್ಟ ಕಂದಮ್ಮ! ವಿಮಾನದಲ್ಲಿ ನಡೆದದ್ದಾದರೂ ಏನು?

ಜನರಿಗೆ ಹೆಚ್ಚಿನ ಬಡ್ಡಿ ಆಸೆ ತೋರಿಸಿ ಯಾಮಾರಿಸುತ್ತಿದ್ದ ಜ್ಞಾನೇಶ್​ ಮತ್ತು ಲೀಲಾವತಿ ದಂಪತಿ, ಪತ್ನಿಗೆ ಹೇಳದಂತೆ ಪತಿಯಿಂದ, ಪತಿಗೆ ಗೊತ್ತಾಗದಂತೆ ಪತ್ನಿಯಿಂದ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು. ಇವರನ್ನು ನಂಬಿದ ಮಂಜುಳಾ ಎಂಬಾಕೆ ಬರೋಬ್ಬರಿ 20 ಲಕ್ಷ ಹಣ ಕೊಟ್ಟಿದ್ದರು. ಇದೀಗ ಹಣ ವಾಪಸ್​ ಬಾರದೆ ಕಂಗಾಲಾಗಿರುವ ಆಕೆ, ಮಗಳ ಮದುವೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ.

ಅದೇ ರೀತಿ ನಿವೃತ್ತ ಕೆಎಸ್​ಆರ್​ಟಿಸಿ ಚಾಲಕ ನಾರಾಯಣ್​ಗೂ ಮೋಸ ಮಾಡಲಾಗಿದೆ. ಮನೆ ಖರೀದಿ ಆಸೆಯಲ್ಲಿ ಒಟ್ಟು 50 ಲಕ್ಷ ಹಣ ಹೂಡಿಕೆ ಮಾಡಿದ್ದರು. ಹಣ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಜನರು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಜ್ಞಾನೇಶ್​ ಮತ್ತು ಲೀಲಾವತಿ ದಂಪತಿಯ ಅಳಿಯ ರವಿಕುಮಾರ್​ ಮತ್ತು ಮಗಳು ಮೇಘನಾರನ್ನು ಬಂಧಿಸಿ. ಅವರಿಬ್ಬರೂ ತನಿಖೆ ಮೇಲೆ‌ ಪ್ರಭಾವ ಬೀರುತ್ತಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದರು. ಕೂಡಲೇ ಈ ಕೇಸ್ ಅನ್ನು ಸಿಐಡಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net