

ಬೆಂಗಳೂರು: ಇತ್ತೀಚೆಗಷ್ಟೇ ವಾಟ್ಸ್ಆ್ಯಪ್ ತನ್ನ ಪ್ರೈವೆಸಿ ಪಾಲಿಸಿ ಪರಿಷ್ಕರಿಸಿದ್ದ ಹಿನ್ನೆಲೆಯಲ್ಲಿ ವೈಯಕ್ತಿಕ ಭದ್ರತೆ ಬಗ್ಗೆ ಭಾರಿ ಆತಂಕ ಸೃಷ್ಟಿಯಾಗಿ ಬಹಳಷ್ಟು ಮಂದಿ ವಾಟ್ಸ್ಆ್ಯಪ್ ಅನ್ಇನ್ಸ್ಟಾಲ್ ಮಾಡಿದ್ದರೆ, ಇನ್ನು ಹಲವರು ಅದರ ಬದಲು ಟೆಲಿಗ್ರಾಂ ಹಾಗೂ ಸಿಗ್ನಲ್ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿಕೊಂಡು ಬಳಸಲಾರಂಭಿಸಿದ್ದಾರೆ. ಕೆಲವು ಆ್ಯಪ್ಗಳಿಂದ ಹೀಗೆ ಖಾಸಗಿತನದ ಹರಣವಾಗುತ್ತಿರುವ ಆತಂಕ ಎದುರಾಗುತ್ತಿರುವ ಬೆನ್ನಿಗೇ ಈಗ ಆ್ಯಪ್ವೊಂದರ ಡೇಟಾ ಹ್ಯಾಕ್ ಆಗಿರುವ ಮಾಹಿತಿ ಹೊರಬಿದ್ದಿದೆ.
ಫೋಟೋ ಎಡಿಟ್ ಮಾಡಲು ಕೆಲವರು ಬೇರೆ ಬೇರೆ ಆ್ಯಪ್ಗಳನ್ನು ಬಳಸುತ್ತಿರುವುದು ಹೊಸದೇನಲ್ಲ. ಇದೀಗ ಅಂಥ ಒಂದು ಫೋಟೋ ಎಡಿಟ್ ಆ್ಯಪ್ ಬಳಸುತ್ತಿರುವವರೆಲ್ಲ ಆತಂಕಕ್ಕೆ ಒಳಗಾಗುವಂತಾಗಿದೆ. ಏಕೆಂದರೆ ಈ ತಂತ್ರಾಂಶವನ್ನು ಶೈನಿ ಹಂಟರ್ಸ್ ಎಂಬಾತ ಹ್ಯಾಕ್ ಮಾಡಿದ್ದು, 19 ಲಕ್ಷ ಬಳಕೆದಾರರ ಮಾಹಿತಿಗಳನ್ನು ಕದ್ದಿದ್ದಾನೆ. ಫೋಟೋ ಎಡಿಟ್ ಮಾಡಲು ಬಳಸುತ್ತಿರುವ ಉಚಿತ ಆ್ಯಪ್ ಪಿಕ್ಸಲರ್ (Pixlr) ಶೈನಿ ಹಂಟರ್ಸ್ನಿಂದ ಹ್ಯಾಕ್ಗೆ ಒಳಗಾಗಿದೆ ಎಂಬುದು ವರದಿಯಾಗಿದೆ.
ಈತ ಹ್ಯಾಕ್ ಮಾಡಿರುವ ಮಾಹಿತಿಗಳಲ್ಲಿ ಬಳಕೆದಾರರ ಇ-ಮೇಲ್ ಅಡ್ರೆಸ್, ಲಾಗಿನ್ ನೇಮ್, ಎಸ್ಎಚ್ಎ-512 ಹ್ಯಾಷ್ಡ್ ಪಾಸ್ವರ್ಡ್, ಬಳಕೆದಾರರ ಮೂಲ ಇತ್ಯಾದಿ ಅಂಶಗಳಿವೆ. 123ಆರ್ಎಫ್ ಎಂಬ ಫೋಟೋ ಸ್ಟಾಕ್ ಸೈಟ್ ಹ್ಯಾಕ್ ಮಾಡುವ ಮೂಲಕ ತಾನು ಪಿಕ್ಸಲರ್ನಿಂದ ಮಾಹಿತಿ ಕದ್ದಿರುವುದಾಗಿ ಶೈನಿ ಹೇಳಿಕೊಂಡಿದ್ದಾನೆ. 123ಆರ್ಎಫ್ ಸ್ಟಾಕ್ ಫೋಟೋ ಸೈಟ್ ಹಾಗೂ ಪಿಕ್ಸಲರ್ ಫೋಟೋ ಎಡಿಟ್ ಆ್ಯಪ್ ಎರಡೂ ಇನ್ಮ್ಯಾಜಿನ್ ಎಂಬ ಒಂದೇ ಕಂಪನಿಗೆ ಸೇರಿದ್ದಾಗಿವೆ. ಹ್ಯಾಕ್ ಹಿನ್ನೆಲೆಯಲ್ಲಿ ಪಿಕ್ಸಲರ್ ಬಳಕೆದಾರರು ಪಾಸ್ವರ್ಡ್ ಬದಲಿಸುವಂತೆ ಸಲಹೆ ನೀಡಲಾಗಿದೆ. ಆದರೆ ಈ ಹ್ಯಾಕ್ ಬಗ್ಗೆ ಪಿಕ್ಸಲರ್ನಿಂದ ಯಾವುದೇ ಪ್ರತಿಕ್ರಿಯೆ ಅಧಿಕೃತವಾಗಿ ಇನ್ನೂ ವ್ಯಕ್ತವಾಗಿಲ್ಲ. (ಏಜೆನ್ಸೀಸ್)