

ಬೆಂಗಳೂರು: ಅಲ್ ಖೈದಾ ಜತೆಗೆ ಸಂಪರ್ಕದಲ್ಲಿ ಇದ್ದ ಆರೀಫ್ ಎಂಬಾತನನ್ನು ಐಎಸ್ಡಿ ಹಾಗೂ ಕೇಂದ್ರ ಸಂಸ್ಥೆಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಲ್ಖೈದಾ ಸಂಪರ್ಕದಲ್ಲಿ ಇರುವ ಮಾಹಿತಿ ಮೇರೆಗೆ ಬೆಂಗಳೂರಿನ ಥಣಿಸಂದ್ರದ ಮಂಜುನಾಥ ನಗರದಲ್ಲಿ ವಾಸವಿದ್ದ ಶಂಕಿತ ಉಗ್ರನನ್ನು ಬಂಧನ ಮಾಡಲಾಗಿದೆ.
ಬಂಧಿತ ಆರೀಫ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಈ ಹಿಂದೆ ಐಸಿಸ್ ಬಗ್ಗೆ ಒಲವನ್ನು ಹೊಂದಿದ್ದ. ಆಫ್ಘಾನಿಸ್ತಾನದದಲ್ಲಿ ಆಲ್ ಖೈದಾ ಮತ್ತು ತಾಲಿಬಾನ್ ಪ್ರವರ್ಧಮಾನಕ್ಕೆ ಬಂದಿತ್ತು. ಹೀಗಾಗಿ ಮುಂದಿನ ತಿಂಗಳು ಮಾರ್ಚ್ನಲ್ಲಿ ಇರಾಕ್ ಮೂಲಕ ಸಿರಿಯಾಗೆ ಹೊರಟಿದ್ದ. 2 ವರ್ಷಗಳಿಂದ ಅಲ್ಖೈದಾ ಉಗ್ರಸಂಘಟನೆಯೊಂದಿಗೆ ಆರೀಫ್, ಟೆಲಿಗ್ರಾಮ್ ಹಾಗೂ ಡಾರ್ಕ್ ನೆಟ್ ಮೂಲಕ ಸಕ್ರಿಯನಾಗಿದ್ದ ಎನ್ನಲಾಗಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಪವರ್ ಫುಲ್ ಆದ ಬಳಿಕ ಈತನ ಒಲವು ಆಲ್ ಖೈದಾ ಮತ್ತು ತಾಲಿಬಾನ್ ಕಡೆಗೆ ಹೋಗಿತ್ತು ಎನ್ನಲಾಗಿದೆ. ಈ ಹಿಂದೆ ಟ್ವಿಟರ್ನಲ್ಲಿ ಉಗ್ರ ಸಂಘಟನೆ ಪರವಾಗಿ ನಕಲಿ ಖಾತೆಯಿಂದ ಹಲವು ಪೋಸ್ಟ್ ಮಾಡಿದ್ದ. ಅದರೆ ಟ್ವಿಟರ್ ಆರೀಫ್ನ ನಕಲಿ ಖಾತೆಗಳನ್ನು ಬ್ಲಾಕ್ ಮಾಡಿತ್ತು. ಬಳಿಕ ಈತ ಟ್ವಿಟರ್ನಲ್ಲಿ ಸಕ್ರಿಯ ಅಗಿರಲಿಲ್ಲ.