

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಇಬ್ಬರಿಗೆ ಕರೆ ಮಾಡಿದ್ದ. ಒಬ್ಬಾಕೆ ಗೆಳತಿ ರಿಯಾ ಚಕ್ರವರ್ತಿಯಾದರೆ, ಇನ್ನೊಬ್ಬ ಮಹೇಶ್ ಶೆಟ್ಟಿ. ದುರದೃಷ್ಟವಶಾತ್ ಇಬ್ಬರೂ ಆ ಕ್ಷಣ ಕರೆ ಸ್ವೀಕರಿಸಿರಲಿಲ್ಲ.
ಈ ಮಹೇಶ್ ಶೆಟ್ಟಿ ಸುಶಾಂತ್ ಸಿಂಗ್ ಆಪ್ತ ಗೆಳೆಯರಲ್ಲಿ ಒಬ್ಬನಾಗಿದ್ದ. ಸುಶಾಂತ್ ಸಾವು ಬೆಳಕಿಗೆ ಬಂದ ದಿನ ಬೆಳಗ್ಗೆ ಆತನ ಕೋಣೆ ಪ್ರವೇಶಿಸಿದವರಲ್ಲಿ ಮೊದಲಿಗನಾಗಿದ್ದ. ಇದೀಗ ಈತ ಬಿಹಾರ ಪೊಲಿಸರಿಗೆ ನೀಡಿರುವ ಹೇಳಿಕೆ ಭಾರಿ ಸಂಚಲನವನ್ನೇ ಉಂಟು ಮಾಡಿದೆ.
ತನ್ನ ಪಾಲಕರೊಂದಿಗೆ ಮಾತನಾಡಲು ಸುಶಾಂತ್ಗೆ ರಿಯಾ ಅವಕಾಶವನ್ನೇ ನೀಡುತ್ತಿರಲಿಲ್ಲ. ಆತನ ಫೋನನ್ನು ಪದೇಪದೆ ಚೆಕ್ ಮಾಡುತ್ತಲೇ ಇರುತ್ತಿದ್ದಳು. ರಿಯಾ ಜತೆಗೆ ಸಂಬಂಧ ಬೆಳೆಸುತ್ತಿದ್ದಂತೆ ಸುಶಾಂತ್ ತನ್ನ ಗೆಳೆಯರನ್ನು ಭೇಟಿಯಾಗುವುದನ್ನೇ ನಿಲ್ಲಿಸಿದ್ದ. ರಿಯಾ ತನ್ನ ತಾಯಿಯೊಂದಿಗೆ ಸೇರಿಕೊಂಡು ಆತನ ಇಡೀ ತಂಡವನ್ನೇ ಬದಲಾಯಿಸಲು ಮುಂದಾಗಿದ್ದರು. ಇದು ಸುಶಾಂತ್ಗೆ ಇಷ್ಟವಿರಲಿಲ್ಲ ಎಂದು ಹೇಳಿದ್ದಾನೆ.
ಸುಶಾಂತ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ಮೊದಲಿಗೆ ಆತನ ಕೋಣೆ ಪ್ರವೇಶಿದ ಮಹೇಶ್ ಶೆಟ್ಟಿಯನ್ನು ಬಿಹಾರ ಪೊಲೀಸರು ಪ್ರಮುಖ ಸಾಕ್ಷಿಯಾಗಿ ಪರಿಗಣಿಸುವ ಸಾಧ್ಯತೆ ಇದೆ.
ಈ ನಡುವೆ, ಸುಶಾಂತ್ ಇನ್ನೊಬ್ಬ ಗೆಳೆಯ ಸಿದ್ದಾರ್ಥ ಪಿಠಾಣಿ ಮತ್ತೊಂದು ಹೇಳಿಕೆ ನೀಡಿದ್ದಾನೆ. ರಿಯಾ ವಿರುದ್ಧ ಹೇಳಿಕೆ ನೀಡುವಂತೆ ನನ್ನನ್ನು ಒತ್ತಾಯಿಸಲಾಗುತ್ತಿದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.