

ಮುಂಬೈ: ಕಳೆದೊಂದು ವರ್ಷದಿಂದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಯಾವುದೋ ಚಿಂತೆ ಕಾಡುತ್ತಿತ್ತು. ಆದರೆ ಅದೇನೆಂದು ಅವರು ಹೇಳಿಕೊಂಡಿರಲಿಲ್ಲ ಎಂದು ಬಾಲಿವುಡ್ ನಟಿ ಹಾಗೂ ಒಂದು ಕಾಲದಲ್ಲಿ ಸುಶಾಂತ್ ಜತೆ ಲಿವ್ ಇನ್ ರಿಲೇಷನ್ಷಿಪ್ನಲ್ಲಿದ್ದ ಅಂಕಿತಾ ಲೋಖಂಡೆ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಅವರು, ಒಂದು ವೇಳೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜವೇ ಆದರೆ ಅದು ತಮ್ಮ ವೃತ್ತಿಜೀವನ ಸಂಬಂಧಿತ ವಿಷಯಕ್ಕಾಗಿ ಅಲ್ಲ. ಬೇರೇನೋ ಬಹುದೊಡ್ಡ ಕಾರಣವಿರಬೇಕು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಮರಣಿಸಿದ ವಿಷಯ ಸುದ್ದಿಗಾರರಿಂದ ತಮಗೆ ತಿಳಿಯಿತು ಎಂದಿರುವ ಅವರು, ಒಬ್ಬ ವರದಿಗಾರರು ಈ ಬಗ್ಗೆ ನನ್ನನ್ನು ಪ್ರಶ್ನಿಸಿದರು. ಅದನ್ನು ಕೇಳಿ ಒಂದುಕ್ಷಣ ನಾನು ಗಲಿಬಿಲಿಗೊಂಡೆ. ಅವರ ಸತ್ತಿದ್ದಾರೆ ಎಂದು ಊಹಿಸಿಕೊಳ್ಳಲೂ ನನಗೆ ಕಷ್ಟವಾಯಿತು ಎಂದು ಸ್ಪಷ್ಟಪಡಿಸಿದ್ದಾರೆ.
ತಾವು ಸುಶಾಂತ್ ಸಿಂಗ್ ರಜಪೂತ್ ಅವರ ನಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದುದಾಗಿ ಹೇಳಿದ ಅವರು, ಒಂದು ವರ್ಷದ ಹಿಂದೆ ಸುಶಾಂತ್ ಅವರು ತಮ್ಮ ಕೆಲಸ ಮತ್ತು ನಟನೆಯ ಬಗ್ಗೆ ತುಂಬಾ ಸಂತೋಷವಾಗಿದ್ದರು. ಆ ಸಂತೋಷ ಅವರ ಮುಖದಲ್ಲೇ ಕಾಣಿಸುತ್ತಿತ್ತು ಎಂದು ಹೇಳಿದ್ದಾರೆ.
ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಬಗ್ಗೆ ಪ್ರಶ್ನಿಸಿದಾಗ, ನನಗೆ ಅವರು ಯಾರೆಂದು ಗೊತ್ತಿಲ್ಲ. ಆದರೆ, ಸುಶಾಂತ್ ಅವರನ್ನು ಚೆನ್ನಾಗಿ ಬಲ್ಲೆ. ಅವರು ತುಂಬಾ ಭಾವುಕ ವ್ಯಕ್ತಿಯಾಗಿದ್ದರು. ಅವರ ಹಣಕಾಸಿನ ವ್ಯವಹಾರದ ಬಗ್ಗೆಯೂ ನನಗೆ ಏನೊಂದು ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುಶಾಂತ್ ಅವರ ಕುರಿತು ಮುಂಬೈ ಪೊಲೀಸರು ನನ್ನನ್ನು ಪ್ರಶ್ನಿಸಿದರು. ಅದರು ಕೇವಲ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಆಗಿರಲಿಲ್ಲ. ಬಹುಶಃ ನನ್ನ ಮಾತಿನಲ್ಲಿ ಅವರಿಗೆ ಯಾವುದೇ ಹುರುಳು ಸಿಕ್ಕಂತೆ ಇಲ್ಲ. ಆದರೆ ಸುಶಾಂತ್ ಅವರ ಕುಟುಂಬದವರನ್ನು ಈ ಬಗ್ಗೆ ಅವರು ಏಕೆ ಪ್ರಶ್ನಿಸಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಜೀವನ್ಮುಖಿ ವ್ಯಕ್ತಿತ್ವ: ಸುಶಾಂತ್ ಸಿಂಗ್ ರಜಪೂತ್ ಅವರು ಖಿನ್ನತೆ ಒಳಗಾಗುವಂಥ ವ್ಯಕ್ತಿ ಆಗಿರಲಿಲ್ಲ ಎಂದು ಅಂಕಿತಾ ಲೋಖಂಡೆ ಹೇಳಿದ್ದಾರೆ.
ಸುಶಾಂತ್ ಅವರದ್ದು ಜೀವನ್ಮುಖಿ ವ್ಯಕ್ತಿತ್ವ. ಕೆಲವೊಮ್ಮೆ ಅವರಿಗೆ ತುಂಬಾ ಸಿಟ್ಟು ಬರುತ್ತಿತ್ತು ನಿಜ. ಆದರೆ, ಅವರು ಎಂದೂ ಖಿನ್ನರಾಗಿದ್ದನ್ನು ನಾನು ಕಂಡಿಲ್ಲ ಎಂದು ಹೇಳುವ ಮೂಲಕ ರಿಯಾ ಚಕ್ರವರ್ತಿ ಅವರು ಸುಪ್ರೀಂಕೋರ್ಟ್ಗೆ ನೀಡಿರುವ ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.
ಜೀವನ ಮುಂದುವರಿದಂತೆ ವ್ಯಕ್ತಿಗಳಲ್ಲಿ ಬದಲಾವಣೆಗಳು ಆಗುವುದು ಸಹಜ. ಆದರೆ, ಆ ವ್ಯಕ್ತಿಯ ಮೂಲಭೂತ ವ್ಯಕ್ತಿತ್ವ ಅಥವಾ ಜೀವನಕ್ರಮದಲ್ಲಿ ಬದಲಾವಣೆಗಳು ಆಗುವುದು ತುಂಬಾ ಕಡಿಮೆ. ಈ ವಿಷಯದಲ್ಲಿ ಸುಶಾಂತ್ ತುಂಬಾ ಸಮತೋಲಿತ ವ್ಯಕ್ತಿಯಾಗಿದ್ದರು ಎಂದು ಹೇಳಿದ್ದಾರೆ.