ಸುಶಾಂತ್​ ಸಿಂಗ್​ನದ್ದು ಆತ್ಮಹತ್ಯೆಯಲ್ಲ, ಕೊಲೆ; ನಟನ ಚಿಕ್ಕಪ್ಪನಿಗೆ ಅನುಮಾನ; ತನಿಖೆಗೆ ಒತ್ತಾಯ

sushant-singh
Published on

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅಂತ್ಯಕ್ರಿಯೆ ಸೋಮವಾರ ನಡೆದಿದೆ. ಬಾಲಿವುಡ್​ನ ದಿಗ್ಗಜರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

ಪೊಲೀಸರು ಈಗಾಗಲೇ ಈ ಪ್ರಕರಣವನ್ನು ಆತ್ಮಹತ್ಯೆ ಎಂದೇ ಕರೆದಿದ್ದಾರೆ. ಆದರೆ ಇದೊಂದು ಕೊಲೆ, ಪೊಲೀಸರು ತನಿಖೆ ನಡೆಸಲೇ ಬೇಕು ಎಂದು ಒತ್ತಾಯಿಸಿದ್ದಾರೆ ನಟನ ಚಿಕ್ಕಪ್ಪ ಆರ್​.ಸಿ ಸಿಂಗ್​.

ಸುಶಾಂತ್​ ಸಿಂಗ್​ ಮೂಲತಃ ಬಿಹಾರದವರು. ಅವರ ಮನೆ ಪಟನಾದಲ್ಲಿದೆ. ಆರಂಭಿಕ ವಿದ್ಯಾಭ್ಯಾಸ ಪಟನಾದಲ್ಲಿಯೇ ನಡೆದಿತ್ತು. ನಂತರ ದೆಹಲಿಗೆ ಅವರ ಕುಟುಂಬ ವಲಸೆ ಬಂದಿತ್ತು. ಬಾಲಿವುಡ್​ ನಂಟಿನ ಬಳಿಕ ಸುಶಾಂತ್​ ಮುಂಬೈನಲ್ಲಿ ನೆಲೆ ಕಂಡುಕೊಂಡಿದ್ದರು.

ಪಟನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಶಾಂತ್​ ಸಿಂಗ್​ ಚಿಕ್ಕಪ್ಪ ಆರ್​.ಸಿ. ಸಿಂಗ್​, ಇದೊಂದು ಆತ್ಮಹತ್ಯೆ ಎಂದು ನಂಬಲು ಸಾಧ್ಯವಿಲ್ಲ. ಆತನ ಸಾವಿನ ಹಿಂದೆ ಏನೋ ಷಡ್ಯಂತ್ರವಿದೆ. ಅವನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪೊಲಿಸರು ತನಿಖೆ ನಡೆಸಲೇಬೇಕು ಎಂದು ಒತ್ತಾಯಿಸಿದ್ದಾರೆ.

ಈ ನಡುವೆ, ಜನ್​ ಅಧಿಕಾರ ಪಕ್ಷದ ಮುಖ್ಯಸ್ಥ ಪಪ್ಪು ಯಾದವ್​ ಕೂಡ ಕೇಸ್​ನ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ಸುಶಾಂತ್​ ಸಿಂಗ್​ನನ್ನು ನಾನು ಬಲ್ಲೆ. ಆತ ಕರ್ಮ ಯೋಗಿಯಾಗಿದ್ದ, ಬಿಹಾರಕ್ಕೆ ಹೆಮ್ಮೆ ಎನಿಸಿದ್ದ. ಈ ಬಗ್ಗೆ ಕೇಂದ್ರ ಸರ್ಕಾರವೇ ಮುತುವರ್ಜಿ ವಹಿಸಿ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

ಬಾಂದ್ರಾದ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್​ ಮೃತದೇಹ ಕಂಡು ಬಂದಿತ್ತು. ಹೀಗಾಗಿ ಪೊಲೀಸರು ಇದೊಂದು ಆತ್ಮಹತ್ಯೆ ಎಂದು ಘೋಷಿಸಿದ್ದಾರೆ. ಈ ಸಾವು ಇಡೀ ಬಾಲಿವುಡ್​ಗೆ ಶಾಕ್​ ನೀಡಿದೆ.

ಸಾವಿಗೆ ಖಿನ್ನತೆ ಜತೆಗೆ, ಆರ್ಥಿಕ ಸಂಕಷ್ಟವೂ ಕಾರಣ ಇರಬಹುದು ಎಂಬ ವಿಶ್ಲೇಷಣೆಗಳು ನಡೆದಿವೆ. ಆದರೆ, ಪೊಲೀಸ್​ ತನಿಖೆಯಿಂದಷ್ಟೇ ನಿಜ ಬಯಲಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net