

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ ಆತ್ಮಹತ್ಯೆ ಸುದ್ದಿ ಇಡೀ ಚಿತ್ರರಂಗವನ್ನು ಶಾಕ್ಗೆ ತಳ್ಳಿದೆ.
ಕಡೆಯ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಸುಶಾಂತ್ ಕವನವೊಂದನ್ನು ಬರೆದುಕೊಂಡು ಅದರಲ್ಲಿ ತಾಯಿಯನ್ನು ಸ್ಮರಿಸಿಕೊಂಡಿದ್ದರು. ಬದುಕನ್ನು ಕ್ಷಣಿಕ ಎಂದು ಬಣ್ಣಿಸಿ ತಾಯಿಯ ಪೋಟೊವೊಂದನ್ನು ಅಪ್ಲೋಡ್ ಮಾಡಿದ್ದರು.
ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸತ್ಯವನ್ನು ಇನ್ನೂ ಅವರ ಅಭಿಮಾನಿಗಳು ಹಾಗೂ ಕುಟುಂಬದವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ತಿಂಗಳ ಆರಂಭದಲ್ಲಿಯೇ ತಾಯಿಯ ನೆನಪಿನಲ್ಲಿ ಬರೆದುಕೊಂಡಿದ್ದ ಪೋಸ್ಟ್ವೊಂದನ್ನು ಶೇರ್ ಮಾಡಿಕೊಂಡಿದ್ದರು.
ತಾಯಿಯ ಕಪ್ಪು ಬಿಳುಪಿನ ಫೊಟೋದೊಂದಿಗೆ ತನ್ನದೂ ಕಪ್ಪುಬಿಳುಪಿನ ಫೋಟೋವನ್ನು ಫೋಟೋವನ್ನು ಕೊಲಾಜ್ ಮಾಡಿ ಜೂನ್ 3ರಂದು ಇನ್ಸ್ಟಾಗ್ರಾಂನಲ್ಲಿ ಹಾಕಿದ್ದರು.
'ಮಸುಕಾದ ಗತಕಾಲವು ಕಣ್ಣಾಲಿಗಳೊಂದಿಗೆ ಬಾಷ್ಪೀಕರಣವಾಗುತ್ತಿದೆ... ಮುಗಿಯದ ಕನಸುಗಳು ನಗುವಿನ ಕಮಾನು ಕಟ್ಟಿವೆ..... ಕ್ಷಣಿಕವಾದ ಬದುಕು ಇವೆರಡರ ನಡುವಿನ ಹೊಯ್ದಾಟದಲ್ಲಿದೆ....' ಎಂದು ಸುಶಾಂತ್ ಬರೆದುಕೊಂಡಿದ್ದರು. ಇದಕ್ಕೆ ಆತನ ಗೆಳತಿ ಎಂದೇ ಬಿಂಬಿಸಲಾದ ರಿಯಾ ಚಕ್ರವರ್ತಿ 'ರೆಡ್ ಹಾರ್ಟ್' ಸಿಂಬಲ್ಗಳನ್ನು ಕಾಮೆಂಟ್ಗಳಾಗಿಸಿದ್ದಳು.
ತಾಯಿಯ ಬಗ್ಗೆ ಸುಶಾಂತ್ ಅತ್ಯಂತ ಭಾವುಕರಾಗಿದ್ದರು. ಧೋನಿ; ಅನ್ಟೋಲ್ಡ್ ಸ್ಟೋರಿ ಚಿತ್ರ ಬಿಡುಗಡೆ ಅವಧಿಯಲ್ಲಿ 'ಜೀವನದಲ್ಲಿ ನಾನು ಯಶಸ್ಸು ಗಳಿಸುವುದನ್ನು ನೋಡಲು ಆಕೆ ಬದುಕಿರಬೇಕಿತ್ತು' ಎಂದು ಹೇಳಿಕೊಂಡಿದ್ದರು. ಆಕೆ ನನ್ನ ಬಗ್ಗೆ ಅತ್ಯಂತ ಸಂತೋಷ ಹಾಗೂ ಹೆಮ್ಮೆ ಪಡುತ್ತಿದ್ದಳು ಎಂದಿದ್ದರು.
ತಾಯಿ ಬದುಕಿದ್ದರೆ ಈಗ ನಾನೇನಾಗಿದ್ದೆಯೋ ಅದಕ್ಕಿಂತ ಭಿನ್ನ ವ್ಯಕ್ತಿಯಾಗಿರುತ್ತಿದ್ದೆ. ಈಗ ನೋಡುತ್ತಿರುವ ಜಗತ್ತು ಸಂಪೂರ್ಣ ಬದಲಾಗಿರುತ್ತಿತ್ತು. ಆದರೆ, ನಾವು ಮತ್ತೆ ಗತಕಾಲಕ್ಕೆ ಹೋಗುವುದು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದರು.
ಈ ಹಿಂದೆ ನನ್ನನ್ನು ರೋಮಾಂಚನಗೊಳಿಸುತ್ತಿದ್ದ ಸಂಗತಿಗಳೀಗ ನನಗೆ ಸಾಮಾನ್ಯ ಎನಿಸುತ್ತಿವೆ. ಏಕೆಂದರೆ ನನ್ನೊಳಗೊಂದು ಬದಲಾವಣೆಯಾಗಿದೆ. ಸಂಬಂಧಗಳು, ಯಶಸ್ಸು, ಯಾವುದು ಕೂಡ ನನಗೆ ಮಹತ್ತರವಾದುದು ಎನಿಸುತ್ತಿಲ್ಲ ಎಂದು ಸುಶಾಂತ್ ಹೇಳಿದ್ದರು.
ಈ ಹಿಂದೆಯೂ ಸುಶಾಂತ್ ಅಮ್ಮನ ಬಗ್ಗೆ ಹಲವು ಕವನಗಳನ್ನು ರಚಿಸಿ ಶೇರ್ ಮಾಡಿಕೊಂಡಿದ್ದರು. ಇದೀಗ ಬಾರದ ಲೋಕಕ್ಕೆ ಪಯಣಿಸಿದ್ದಾರೆ.