ಸಾಲ್ಮನ್​ ಮೀನಿನಲ್ಲಿತ್ತು ಕರೊನಾ ವೈರಸ್​; ಮಾರಾಟ ಬಂದ್​, ಮಾರುಕಟ್ಟೆ ಸ್ಥಗಿತ

China market
Published on

ಬೀಜಿಂಗ್​: ಚೀನಾದಲ್ಲಿ ಮತ್ತೆ ಕರೊನಾ ವೈರಸ್​ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ರಾಜಧಾನಿ ಬೀಜಿಂಗ್​ನ ತರಕಾರಿ ಹಾಗೂ ಮಾಂಸದ ಮಾರುಕಟ್ಟೆಯಲ್ಲಿ ಸಂಗ್ರಹಿಸಲಾದ 517 ಮಾದರಿಗಳ ಪೈಕಿ 45 ಜನರಲ್ಲಿ ಕೋವಿಡ್​ ಇರುವುದು ಶನಿವಾರ ಖಚಿತವಾಗಿದೆ.

ಮಾರುಕಟ್ಟೆಯ ವ್ಯಾಪಾರಿಗಳಲ್ಲಿ ಕರೊನಾ ಪತ್ತೆಯಾಗುತ್ತಿದ್ದಂತೆ ಬೀಜಿಂಗ್​ನ ಪ್ರಸಿದ್ಧ ಮಾರುಕಟ್ಟೆಗಳಲ್ಲಿ ಒಂದಾದ ಕ್ಸಿನ್​ಫಾಡಿ ತರಕಾರಿ ಹಾಗೂ ಮಾಂಸದ ಸಗಟು ಮಾರುಕಟ್ಟೆಯನ್ನು ಬಂದ್​ ಮಾಡಲಾಗಿದೆ. ಇದಲ್ಲದೇ, ಮಾರುಕಟ್ಟೆ ಸುತ್ತಲಿನ 11 ವಸತಿ ಸಮುಚ್ಚಯಗಳನ್ನು ಲಾಕ್​​ಡೌನ್ ಮಾಡಲಾಗಿದೆ.

ಮಾರುಕಟ್ಟೆಯಲ್ಲಿ ಸೋಂಕು ಇರಬಹುದಾದ ಸಾವಿರಾರು ವ್ಯಾಪಾರಿಗಳನ್ನು ಹಾಗೂ ಇವರೊಂದಿಗೆ ಸಂಪರ್ಕಕ್ಕೆ ಬಂದ ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಚೀನಾದ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶದಿಂದ ತರಿಸಲಾಗುವ ಸಾಲ್ಮನ್​ ಮೀನನ್ನು ಕತ್ತರಿಸುವ ಮರದ ದಿಮ್ಮಿಗಳ ಮೇಲೆ ಕರೊನಾ ವೈರಸ್​ ಪತ್ತೆಯಾಗಿದೆ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೀಜಿಂಗ್​ ಪ್ರಮುಖ ಸೂಪರ್​ ಮಾರ್ಕೆಟ್​ಗಳು ಸಾಲ್ಮನ್​ ಮೀನಿನ ಮಾರಾಟವನ್ನು ಬಂದ್​ ಮಾಡಿವೆ.

ಬೀಜಿಂಗ್​ನಲ್ಲಿ ಕಳೆದ 55 ದಿನಗಳಿಂದ ಕರೊನಾದ ಹೊಸ ಕೇಸ್​ ಪತ್ತೆಯಾಗಿರಲಿಲ್ಲ. ಕಳೆದ ವಾರ 52 ವರ್ಷದ ವ್ಯಕ್ತಿಯೊಬ್ಬ ಮೃತಪಡುವ ಮೂಲಕ ಕರೊನಾ ಮರುಕಳಿಸಿದೆ.

112 ಹೆಕ್ಟೇರ್​​ಗಳಲ್ಲಿ ಹಬ್ಬಿಕೊಂಡಿರುವ ಮಾರುಕಟ್ಟೆಯಲ್ಲಿ 1,500ಕ್ಕೂ ಹೆಚ್ಚು ನಿರ್ವಹಣಾ ಸಿಬ್ಬಂದಿ ಇದ್ದರೆ, 4,000ಕ್ಕೂ ವ್ಯಾಪಾರಿಗಳಿದ್ದಾರೆ. ಎಲ್ಲರನ್ನೂ ಪರೀಕ್ಷೆ ಮಾಡಲಾಗುತ್ತಿದೆ. ಕರೊನಾ ಜನ್ಮ ಸ್ಥಳವಾದ ವುಹಾನ್​ ಮಾರುಕಟ್ಟೆ ಬಳಿಕ ಇದೀಗ ಮತ್ತೊಂದು ಮಾರುಕಟ್ಟೆ ಮೂಲಕ ಚೀನಾಗೆ ಕಂಟಕ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net