ಸುಶಾಂತ್ ಸಿಂಗ್ ರಜಪೂತ್ ಕೇಸ್ ಸಿಬಿಐಗೆ - ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Sushanth singh case
Published on

ನವದೆಹಲಿ: ಬಾಲಿವುಡ್​ನ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದ್ದು, ಮಹಾರಾಷ್ಟ್ರ ಸರ್ಕಾರಕ್ಕೆ ಮತ್ತು ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದವರಿಗೆ ಭಾರಿ ಹಿನ್ನಡೆಯಾಗಿದೆ. ಸಿಬಿಐ ತನಿಖೆಯನ್ನು ಆಗ್ರಹಿಸುತ್ತ ಬಂದಿದ್ದ ಸುಶಾಂತ್ ಕುಟುಂಬದವರ ಆಗ್ರಹಕ್ಕೆ ಮನ್ನಣೆ ಸಿಕ್ಕಂತಾಗಿದೆ.

ಪ್ರಕರಣದ ವಿಚಾರಣೆಯನ್ನು ಪಟನಾದಿಂದ ಮುಂಬೈಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಪಿಟಿಷನ್ ನಲ್ಲಿ ಇದ್ದ ಅಂಶವನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್​, ಸಿಬಿಐ ತನಿಖೆಗೆ ಪ್ರಕರಣವನ್ನು ವಹಿಸುವ ಎಲ್ಲ ಅಧಿಕಾರವೂ ಬಿಹಾರ ಸರ್ಕಾರಕ್ಕೆ ಇದೆ. ತನಿಖೆಯ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಸಿಬಿಐಗೆ ಸಹಕಾರ ನೀಡಬೇಕು ಎಂದು ಆದೇಶಿಸಿದೆ.

ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರ ಏಕ ಸದಸ್ಯ ಪೀಠ ಈ ಪಿಟಿಷನ್ ಅನ್ನು ವಿಚಾರಣೆಗೆ ಎತ್ತಿಕೊಂಡಿದೆ. ಮುಂಬೈ ಪೊಲೀಸ್ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದರೂ, ಪಟನಾ ಪೊಲೀಸರು ಎಫ್ಐಆರ್ ದಾಖಲಿಸಿರುವುದನ್ನು ದೂರಿನಲ್ಲಿವ ಅಂಶಗಳು ಬಹಿರಂಗಪಡಿಸಿವೆ ಎಂದು ಹೇಳಿದ ನ್ಯಾಯಪೀಠ, ರಿಯಾ ಸಲ್ಲಿಸಿದ್ದ ಪಿಟಿಷನ್ ಅನ್ನು ತಿರಸ್ಕರಿಸಿತು. ಇದಕ್ಕೂ ಮುನ್ನ ಆಗಸ್ಟ್ 11ರ ವಿಚಾರಣೆ ವೇಳೆ ಪಿಟಿಷನ್ ಕುರಿತ ತೀರ್ಪನ್ನು ಕಾಯ್ದಿರಿಸಿದ್ದಾಗಿ ಹೇಳಿತ್ತು.

ಸುಶಾಂತ್ ಸಿಂಘ್ ಅವರ ತಂದೆ ಕೆಕೆ ಸಿಂಗ್ ಅವರು ರಿಯಾ ಚಕ್ರವರ್ತಿ ವಿರುದ್ಧ ಪಟನಾ ಪೊಲೀಸ್ ಠಾಣೆಯಲ್ಲಿ ಜುಲೈ 25ರಂದು ಕೇಸ್ ದಾಖಲಿಸಿದ್ದರು. ಮಗನ ಆತ್ಮಹತ್ಯೆ ಪ್ರಚೋದನೆ ನೀಡಿದ್ದಾಗಿ ಆಕೆಯ ವಿರುದ್ಧ ಆರೋಪ ಮಾಡಿದ್ದರು. ಅಲ್ಲದೆ, ಸುಶಾಂತ್ ಖಾತೆಯಿಂದ 15 ಕೋಟಿ ರೂಪಾಯಿಯನ್ನು ತನ್ನ ಖಾತೆಗೆ ಆಕೆ ವರ್ಗಾಯಿಸಿಕೊಂಡಿದ್ದಾಳೆ ಎಂದೂ ಆರೋಪಿಸಿದ್ದರು. ಜೂನ್ 14ರಂದು ಸುಶಾಂತ್​ ಸಿಂಗ್ ರಜಪೂತ್​ (34) ಸಂದೇಹಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net