

ಜೈಪುರ: ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಸಚಿನ್ ಪೈಲಟ್ ಅವರು ಇಂದು ಬೆಳಗ್ಗೆ ನಡೆದ ಸಿಎಲ್ಪಿ ಸಭೆಯಲ್ಲಿ ಹಾಜರಾಗಿರಲಿಲ್ಲ. ಅವರ ಆಪ್ತ ಶಾಸಕರೂ ಸಹ ಪಾಲ್ಗೊಳ್ಳಲಿಲ್ಲ.
ನಾಳೆ (ಜುಲೈ 14) ಮತ್ತೊಮ್ಮೆ ಜೈಪುರದ ಸಿಎಂ ಅಶೋಕ್ ಗೆಹ್ಲೋಟ್ ನಿವಾಸದಲ್ಲಿ ಶಾಸಕಾಂಗ ಸಭೆಯನ್ನು ಆಯೋಜಿಸಲಾಗಿದ್ದು, ಅದರಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ಮುಖಂಡ, ಜೈಪುರ ಕಾಂಗ್ರೆಸ್ ವೀಕ್ಷಕ ರಣದೀಪ್ ಸರ್ಜೇವಾಲಾ ಅವರು ಸಚಿನ್ ಪೈಲಟ್ ಮತ್ತು ಅವರ ಆಪ್ತ ಶಾಸಕರಿಗೆ ಆಮಂತ್ರಣ ನೀಡಿದ್ದಾರೆ.
ರಾಜಸ್ಥಾನದ ರಾಜಕೀಯ ಸ್ಥಿತಿಗತಿಗಳನ್ನು ಚರ್ಚಿಸುವುದಕ್ಕೋಸ್ಕರ ನಾಳೆ ಬೆಳಗ್ಗೆ 10 ಗಂಟೆಗೆ ಮತ್ತೊಂದು ಶಾಸಕಾಂಗ ಪಕ್ಷದ ಸಭೆ ಹಮ್ಮಿಕೊಳ್ಳಲಾಗಿದೆ. ದಯವಿಟ್ಟು ಈ ಸಭೆಯಲ್ಲಿ ಹಾಜರಿರಿ ಎಂದು ಸಚಿನ್ ಪೈಲಟ್ ಮತ್ತು ಅವರ ಆಪ್ತ ಶಾಸಕರ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಲಿಖಿತವಾಗಿಯೂ ಅವರಿಗೆ ಆಹ್ವಾನ ನೀಡಿದ್ದೇವೆ. ಸಭೆಗೆ ಬಂದು ಮಾತನಾಡಿ ಎಂದು ವಿನಂತಿಸಿಕೊಂಡಿದ್ದೇವೆ ಎಂದು ರಣದೀಪ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ರೋಗಿಗಳಿಗೆ ಬೆಂಗಳೂರಿನ ಬಯೋಕಾನ್ನಿಂದಲೂ ಜೀವರಕ್ಷಕ ಲಸಿಕೆ
ಯಾರಿಗೆ ಏನೇ ಅಸಮಾಧಾನ ಇದ್ದರೂ ಎಲ್ಲರೂ ಕುಳಿತು ಚರ್ಚಿಸೋಣ. ಪ್ರತಿಯೊಬ್ಬರ ಮಾತು, ಅಭಿಪ್ರಾಯ ಕೇಳಲು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸಿದ್ಧರಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ ಎಂದು ಹೇಳಿದ್ದಾರೆ.
ಇಂದು ಬೆಳಗ್ಗೆ ನಡೆದ ಸಭೆಯಲ್ಲಿ ಅಶೋಕ್ ಗೆಹ್ಲೋಟ್ ಮತ್ತವರ ಬಣ ವಿಜಯದ ನಗೆ ಬೀರಿದೆ. ಆದಕ್ಕೆ ಜಗ್ಗದ ಸಚಿನ್ ಪೈಲಟ್ ನನಗೆ ಶಾಸಕರ ಬೆಂಬಲವಿದೆ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. (ಏಜೆನ್ಸೀಸ್)