

ಮುಂಬೈ: ಮಾಜಿ ಕೇಂದ್ರ ಸಚಿವ, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಪುತ್ರಿ, ಸಂಸದೆ ಸುಪ್ರಿಯಾ ಸುಳೆ ಅವರ ಫೋನ್ ಹ್ಯಾಕ್ ಆಗಿದೆ. ಇದರ ಜೊತೆಗೆ ಅವರ ವಾಟ್ಸ್ ಆಪ್ ಕೂಡ ಹ್ಯಾಕ್ ಆಗಿದೆ. ಇದರ ಹಿನ್ನೆಲೆಯಲ್ಲಿ ಯಾರೂ ತನಗೆ ಕರೆ ಮಾಡಬೇಡಿ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಾಕಿರುವ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಯಾರೂ ಸಹ ಕರೆ ಮಾಡಬೇಡಿ ಅಥವಾ ಸಂದೇಶಗಳನ್ನು ಕಳುಹಿಸಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ. ಹ್ಯಾಕ್ ಆಗಿರುವ ಕುರಿತು ಪೊಲೀಸರಿಗೆ ದೂರು ನೀಡಿರುವುದಾಗಿ ಸುಪ್ರಿಯಾ ಸುಳೆ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸುಪ್ರಿಯಾ ಸುಳೆ ಬಾರಾಮತಿ ಕ್ಷೇತ್ರದಿಂದ 1.55 ಲಕ್ಷ ಮತಗಳ ಭಾರಿ ಬಹುಮತದಿಂದ ಗೆದ್ದಿದ್ದಾರೆ. ಮಹಾರಾಷ್ಟ್ರದ ಅತ್ಯಂತ ಪ್ರಮುಖ ಸ್ಪರ್ಧೆಯಾಗಿರುವ ಬಾರಾಮತಿ ಕ್ಷೇತ್ರದಲ್ಲಿ ಸುಪ್ರಿಯಾ ಅವರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ವಿರುದ್ಧ ಭಾರಿ ಅಂತರದಿಂದ ಗೆದ್ದಿದ್ದಾರೆ.