ಹೇಗಿದೆ ಸನ್ನಿ ಡಿಯೋಲ್​ ನಟಿಸಿರುವ ಗದರ್​ 2 ಸಿನಿಮಾ? ಇಲ್ಲಿದೆ ವಿಮರ್ಶೆ...

ಗಅದಅರ2-ರೆವಿಎಡ
Published on

| ಹರ್ಷವರ್ಧನ್​ ಬ್ಯಾಡನೂರು

ಚಿತ್ರ: ಗದರ್​ 2
ನಿರ್ದೇಶನ: ಅನಿಲ್​ ಶರ್ಮಾ
ನಿರ್ಮಾಣ: ಅನಿಲ್​ ಶರ್ಮಾ
ತಾರಾಗಣ: ಸನ್ನಿ ಡಿಯೋಲ್​, ಅಮೀಷಾ ಪಟೇಲ್​, ಉತ್ಕರ್ಷ್​ ಶರ್ಮಾ, ಮನೀಷ್​ ವಾಧ್ವಾ, ಗೌರವ್​ ಚೋಪ್ರಾ, ಲವ್​ ಸಿನ್ಹಾ, ಸಿಮ್ರತ್​ ಕೌರ್​ ಮುಂತಾದವರು

2001ರಲ್ಲಿ ರಿಲೀಸ್​ ಆಗಿದ್ದ "ಗದರ್​' ಬಾಕ್ಸಾಫಿಸ್​ನಲ್ಲಿ ದಾಖಲೆ ಗಳಿಕೆ ಮಾಡಿಕೊಂಡಿತ್ತು. 1947ರ ಭಾರತ & ಪಾಕಿಸ್ತಾನ ವಿಭಜನೆ ಹಿನ್ನೆಲೆಯಲ್ಲಿ ನಿರ್ದೇಶಕ ಅನಿಲ್​ ಶರ್ಮಾ ಕಾಲ್ಪನಿಕ ಪ್ರೇಮಕಥೆ ಹೇಳಿದ್ದರು. ಇದೀಗ 22 ವರ್ಷಗಳ ಬಳಿಕ ಆ ಕಥೆ ಮುಂದುವರಿದಿದೆ. ಈ ಸೀಕ್ವಲ್​ನಲ್ಲಿ 1971ರಲ್ಲಿ ನಡೆದ ಭಾರತ & ಪಾಕಿಸ್ತಾನ ಯುದ್ಧದ ಬ್ಯಾಕ್​ಗ್ರೌಂಡ್​ನಲ್ಲಿ ಕಥೆ ಹೇಳಿದ್ದಾರೆ. ಮೊದಲ ಭಾಗದಲ್ಲಿ ಪತ್ನಿ ಸಕೀನಾಗಾಗಿ (ಅಮೀಷಾ) ಪಾಕಿಸ್ತಾನಕ್ಕೆ ಹೋಗುವ ತಾರಾ ಸಿಂಗ್​ (ಸನ್ನಿ ಡಿಯೋಲ್​), ಸೀಕ್ವಲ್​ನಲ್ಲಿ ಏನು ಮಾಡುತ್ತಾನೆ? ಎಂಬುದೇ ಕಥೆ.

1971ರಲ್ಲಿ ಪಾಕಿಸ್ತಾನದ ಕಪಿಮುಷ್ಠಿಯಿಂದ ಬಾಂಗ್ಲಾದೇಶವನ್ನು ಸ್ವತಂತ್ರ ದೇಶವಾಗಿಸುವಲ್ಲಿ ಭಾರತ ಪ್ರಮುಖ ಪಾತ್ರವಹಿಸುತ್ತದೆ. ಅದರ ಬೆನ್ನಲ್ಲೇ ಭಾರತದ ಗಡಿಯಲ್ಲಿ ಪಾಕಿಸ್ತಾನದ ಸೈನಿಕರು ಯುದ್ಧೋತ್ಸಾಹ ತೋರುತ್ತಾರೆ. ಆಗ ತನ್ನ ಟ್ರಕ್​ನಲ್ಲಿ ಭಾರತೀಯ ಸೈನಿಕರಿಗೆ ಶಸ್ತ್ರಾಸ್ತ್ರ ಸಾಗಣೆ ಮಾಡಲು ಹೋಗುವ ಚಾಲಕ ತಾರಾ ಸಿಂಗ್​ ಕಣ್ಮರೆಯಾಗುತ್ತಾನೆ. ಇಬ್ಬರು ಟ್ರಕ್​ ಚಾಲಕರು, ಐವರು ಸೈನಿಕರು ಸೇರಿ ಏಳು ಮಂದಿಯನ್ನು ಪಾಕ್​ ಸೈನಿಕರು ಬಂಧಿಸಿರುವ ಬಗ್ಗೆ ಮಾಹಿತಿ ಹರಡುತ್ತದೆ. ತಾರಾ ಪತ್ನಿ ಸಕೀನಾ ಶೋಕದಲ್ಲಿ ಮುಳುಗುತ್ತಾಳೆ. ಮಗ ಜೀತೇ ಅಪ್ಪನ ಹುಡುಕಾಟದಲ್ಲಿ ಮನೆ ಬಿಡುತ್ತಾನೆ. ಅದಾಗಿ ಕೆಲ ತಿಂಗಳಲ್ಲೇ ತಾರಾ ಮನೆಗೆ ವಾಪಸ್ಸಾಗುತ್ತಾನೆ. ಮಗ ಪಾಕಿಸ್ತಾನದಲ್ಲಿ ಅವನನ್ನು ಹುಡುಕುತ್ತಿರುವ ಬಗ್ಗೆ ಮಾಹಿತಿ ಸಿಗುತ್ತದೆ. ಹಿಂದೆ ಮುಂದೆ ನೋಡದೇ ಮಗನ ರಕ್ಷಣೆಗೆ ಇಳಿಯುತ್ತಾನೆ ತಾರಾ. ಮುಂದೆ? ಸಿನಿಮಾ ನೋಡಿ…

ಇದನ್ನೂ ಓದಿ : ಭೋಲಾ ಶಂಕರ್ ತಮನ್ನಾ ಕೈ ಹಿಡಿಯದಿದ್ದರೂ, ಜೈಲರ್​ ಸಿನಿಮಾ ಯಶಸ್ವಿ
"ಗದರ್​' 185 ನಿಮಿಷಗಳ ಸುದೀರ್ ಸಿನಿಮಾ. ಅದಕ್ಕೆ ಹೋಲಿಸಿದರೆ 170 ನಿಮಿಷಗಳ "ಗದರ್​ 2' ಕಡಿಮೆಯಿದೆ. ಆದರೂ, ಥಿಯೇಟರ್​ನಲ್ಲಿ ಕುಳಿತವರಿಗೆ "ಸುದೀರ್'ವೆನಿಸುತ್ತದೆ. ಕಳೆದ ಎರಡು ದಶಕಗಳಲ್ಲಿ ಸಿನಿಮಾ ಮಾಡುವ, ನೋಡುವ ರೀತಿ ಬದಲಾಗಿರುವುದೇ ಅದಕ್ಕೆ ಕಾರಣ. ಸೀಕ್ವಲ್​ನಲ್ಲೂ ಆಗಾಗ ಮೊದಲ ಭಾಗದ ದೃಶ್ಯಗಳು ಬಂದು ಹೋಗುತ್ತವೆ. ಹಿನ್ನೆಲೆ ಸಂಗೀತ, "ಉಡ್​ ಜಾ ಕಾಲೇ…', "ಮೈ ನಿಕ್​ಲಾ ಗಾಡಿ ಲೇಕೆ…' ಹಾಡುಗಳನ್ನೂ ಇಲ್ಲಿ ಕೇಳಬಹುದು, ನೋಡಬಹುದು. ಮೊದಲ ಭಾಗದಲ್ಲಿ ಪಾಕ್​ ವಿರೋಧಿ ಸಂಭಾಷಣೆಗಳಿದ್ದಂತೆಯೇ ಇಲ್ಲೂ ಇವೆ, ಅದರ ಜತೆಗೆ ಶಾಂತಿ ಮಂತ್ರ ಸಾರುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಅನಿಲ್​ ಶರ್ಮಾ. ಈ ಚಿತ್ರದ ಮೂಲಕ ನಿರ್ದೇಶಕರು ಮಗನನ್ನು ಮತ್ತೊಮ್ಮೆ ನಾಯಕನನ್ನಾಗಿ ಲಾಂಚ್​ ಮಾಡಲು ಯತ್ನಿಸಿರುವಂತಿದೆ. ಹೀಗಾಗಿಯೇ ಮೊದರ್ಲಧದಲ್ಲಿ ಉತ್ಕರ್ಷ್​, ತೆರೆಯನ್ನು ಆವರಿಸಿಕೊಂಡಿದ್ದಾರೆ. ಮಗನ ಕಥೆ ಚಿತ್ರವನ್ನು ನಿಧಾನವಾಗಿಸಿದೆ. ಕನ್ನಡಿಗ ರವಿವರ್ಮಾ ಸಾಹಸ ನಿರ್ದೇಶನದಲ್ಲಿ ಮೂಡಿಬಂದಿರುವ ಆ್ಯಕ್ಷನ್​ ಸನ್ನಿವೇಶಗಳು ಗಮನ ಸೆಳೆಯುತ್ತವೆ. "ಗದರ್​' ನೋಡಿದ್ದವರಿಗೆ "ಗದರ್​ 2' ಇಷ್ಟವಾಗುವುದರಲ್ಲಿ ಸಂದೇಹವಿಲ್ಲ. ಸ್ವಲ್ಪ ಕತ್ತರಿ ಪ್ರಯೋಗ ಮಾಡಿದರೆ ಇಂದಿನ ಪೀಳಿಗೆಯನ್ನೂ ಸಿನಿಮಾ ಸೆಳೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net