ಪ್ರಾಣ ಬಿಡ್ತೀನಿ ಆದ್ರೆ ಮಂಡ್ಯ ಬಿಡಲ್ಲ! ಮಗನ ರಾಜಕೀಯ ಭವಿಷ್ಯದ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಸುಮಲತಾ

Sumalatha Ambarees Abhishek
Published on

ಮಂಡ್ಯ: ನಾನು ರಾಜಕಾರಣದಲ್ಲಿ ಇರೋವರೆಗೂ ಅಭಿಷೇಕ್​ ಅಂಬರೀಷ್​ನನ್ನು ರಾಜಕೀಯಕ್ಕೆ ಕರೆತರುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್​ ಹೇಳಿದರು.

ಇಂದು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ, ಬಿಜೆಪಿಗೆ ಸಂಪೂರ್ಣ ಬೆಂಬಲ ಸೂಚಿಸಿದ ಸಂಸದೆ ಸುಮಲತಾ ಅಂಬರೀಷ್​, ಇದೇ ಸಂದರ್ಭದಲ್ಲಿ ತಮ್ಮ ಪುತ್ರನ ರಾಜಕೀಯ ನಡೆಯ ಬಗ್ಗೆ ಸ್ಪಷ್ಟನೆ ನೀಡಿದರು.

ಅಭಿಷೇಕ್​ಗೆ ಎರಡು ಪಕ್ಷದಿಂದ ಆಹ್ವಾನ ಬಂದಿತ್ತು. ಮದ್ದೂರು ಮತ್ತು ಮಂಡ್ಯದಿಂದ ಟಿಕೆಟ್ ಕೊಡ್ತೀವಿ ಎಂದು ಎರಡು ಪಕ್ಷಗಳು ಹೇಳಿದವು. ಆದರೆ, ಅಭಿ ಅದನ್ನು ನಿರಾಕರಿಸಿದನು. ನನಗೆ ತಾಯಿ, ತಂದೆ ಹೆಸರಿನಲ್ಲಿ ಟಿಕೆಟ್ ಬೇಡ. ಜನರಿಗಾಗಿ ದುಡಿದು, ಯಾವುದಾದರೊಂದು ಪಕ್ಷದಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡಿದ ಬಳಿಕ ಟಿಕೆಟ್​ ತೆಗೆದುಕೊಳ್ಳುತ್ತೇನೆ ಅಂತಾ ಆ ಪಕ್ಷದವರಿಗೆ ಹೇಳಿದ ಎಂದು ಸುಮಲತಾ ತಿಳಿಸಿದರು.

ಅಭಿ ಈ ವರ್ಷ ಮದುವೆ ಆಗ್ತಾನೆ ಮತ್ತು ಸಿನಿಮಾದಲ್ಲಿ ಮುಂದುವರಿಯುತ್ತಾನೆ. ಮುಂದೆ ಅವನ ಹಣೆಯಲ್ಲಿ ಏನು ಬರೆದಿದೆಯೋ ಅದು ಆಗಲಿ. ಸಿನಿಮಾದಲ್ಲಿ ಅವನನ್ನು ಕರೆತರವ ಪ್ರಯತ್ನವನ್ನು ಅಂಬರೀಶ್ ಆಗಲಿ, ನಾವಾಗಲಿ ಮಾಡಲಿಲ್ಲ. ಅಲ್ಲೆ ಮಾಡಲಿಲ್ಲ ಅಂದಮೇಲೆ ರಾಜಕೀಯಕ್ಕೆ ಅವನನ್ನು ಕರೆತರುತ್ತೀವಾ? ಎಂದರು.

ಸವಾಲುಗಳನ್ನು ಮೆಟ್ಟಿನಿಂತಾಗ ಸಾಧನೆ ಮಾಡಲು ಸಾಧ್ಯ. ಸಾಕಷ್ಟು ಯೋಚಿಸಿ ಬಿಜೆಪಿ ಬೆಂಬಲ ನೀಡುವ ಬಗ್ಗೆ ನಾನು ಈ ನಿರ್ಧಾರ ಮಾಡಿದ್ದೇನೆ. ಈ ನಿರ್ಧಾರದಲ್ಲಿ ನನ್ನ ಸ್ವಾರ್ಥ ಇಲ್ಲ. ಇದರಲ್ಲಿ ರಿಸ್ಕ್ ಇರಬಹುದು, ಮುಂದೆ ಏನಾಗುತ್ತೆ ಗೊತ್ತಿಲ್ಲ. ಬಹಳಷ್ಟು ಜನರ ವಿರೋಧ ಕಟ್ಟಿಕೊಳ್ಳುತ್ತಿದ್ದೇನೆ. ಇರಲಿ ಪರವಾಗಿಲ್ಲ, ಇದು ಒಂದು ದಿನದಲ್ಲಿ ಆದ ನಿರ್ಧಾರ ಅಲ್ಲ. ರಾಜಕಾರಣ ಬಿಡ್ತೀನಿ ಆದರೆ, ಸ್ವಾಭಿಮಾನ ಬಿಡಲ್ಲ. ಪ್ರಾಣ ಬಿಡ್ತೀನಿ ಆದ್ರೆ ಮಂಡ್ಯ ಬಿಡಲ್ಲ ಎನ್ನುವ ಮೂಲಕ ಬೆಂಗಳೂರಿಗೆ ಹೋಗ್ತಾರೆ ಅನ್ನೋ ವಿಚಾರಕ್ಕೆ ಸುಮಲತಾ ಸ್ಪಷ್ಟನೆ ನೀಡಿದರು.

ಸದ್ಯಕ್ಕೆ ಬಿಜೆಪಿ ಬೆಂಬಲದ ಬಗ್ಗೆ ಚರ್ಚೆಯಾಗಿದೆ. ಅದನ್ನ ನಾನು ಹೇಳಿದ್ದೇನೆ. ರಾಜ್ಯ ರಾಜಕಾರಣಕ್ಕೆ ಬರುವ ಅಗತ್ಯ ಇದ್ಯೋ, ಇಲ್ವೋ ಅನ್ನೋದು ಚರ್ಚೆ ಆಗಬೇಕು. ಒಂದು ಪಾರ್ಟಿಗೆ ಬಾಹ್ಯ ಬೆಂಬಲ ನೀಡಿದ್ದೇನೆ. ರಾಜ್ಯ ರಾಜಕಾರಣದ ಬಗ್ಗೆ ಇನ್ನು ಚರ್ಚೆ ಆಗಿಲ್ಲ. ನಿಮ್ಮ ಅನಿವಾರ್ಯತೆ ಇದೆ, ರಾಜ್ಯ ರಾಜಕಾರಣಕ್ಕೆ ಬನ್ನಿ ಅಂದ್ರೆ ಚರ್ಚೆ ಮಾಡಬೇಕು. ಬಿಜೆಪಿ ಪಕ್ಷದ ನಾಯಕರೊಂದಿಗು ಚರ್ಚೆ ಆಗಬೇಕಿದೆ ಎಂದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net