

ನವದೆಹಲಿ: ಕೆಲವು ಮಕ್ಕಳು ಮಾತೆತ್ತಿದ್ರೆ ಸಾಕು ಬೆಟ್ಸಾ, ಚಾಲೆಂಜಾ ಎಂದು ಸವಾಲು ಹಾಕುತ್ತಾರೆ. ಹೀಗೆ ಕೊಯಮತ್ತೂರಿನಲ್ಲಿ ಬಾಲಕಿಯೊಬ್ಬಳು ಚಾಲೆಂಜ್ ಗೆಲ್ಲಲು ಹೋಗಿ ಪ್ರಾಣವನ್ನು ಕಳೆದುಕೊಂಡಿದ್ದಾಳೆ.
ನಾಲ್ಕು ವಿದ್ಯಾರ್ಥಿನಿಯರು ಅತಿಯಾದ ಕಬ್ಬಿಣಾಂಶ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳನ್ನು ಸೇವಿಸಿದ್ದಾರೆ. ಓರ್ವ ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ. ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾತ್ರೆಗಳ ಅತಿಯಾದ ಸೇವನೆಯಿಂದ ಉಂಟಾದ ಲಿವರ್ ವೈಫಲ್ಯದಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಊಟಿ ಪುರಸಭೆಯಿಂದ ನಡೆಸಲ್ಪಡುವ ಉರ್ದು ಮಾಧ್ಯಮಿಕ ಶಾಲೆಯ 8ನೇ ತರಗತಿಯ ನಾಲ್ಕು ವಿದ್ಯಾರ್ಥಿಗಳು ಬೆಟ್ನಲ್ಲಿ ಗೆಲ್ಲಲು ಹೆಚ್ಚು ಕಬ್ಬಿಣದ ಮಾತ್ರೆಗಳನ್ನು ಸೇವಿಸಿ ಶಾಲೆಯಲ್ಲಿ ಪ್ರಜ್ಞಾಹೀನರಾಗಿದ್ದರು. ರಾತ್ರಿ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಸಿಎಂಸಿಎಚ್) ಕರೆತರುವಾಗ ವಿದ್ಯಾರ್ಥಿಗಳ ಸ್ಥಿತಿ ಸಹಜವಾಗಿತ್ತು. ಆದರೆ ಹುಡುಗಿಯೊಬ್ಬಳಿಗೆ ತೀವ್ರ ಯಕೃತ್ತು ಹಾನಿಯಾಗಿದ್ದು, ತಕ್ಷಣದ ಯಕೃತ್ತಿನ ಕಸಿ ಮಾಡಬೇಕಾಗಿರುವುದರಿಂದ ಚೆನ್ನೈಗೆ ಕಳುಹಿಸಿ ಕೊಡಲಾಯಿತು.
ಚೆನ್ನೈಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಸೇಲಂ ಬಳಿ ಬಂದಾಗ ಆಕೆಯ ಸ್ಥಿತಿ ಹದಗೆಟ್ಟಿದ್ದ ಕಾರಣ ಆಕೆಯನ್ನು ಸೇಲಂ ಜಿಎಚ್ಗೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಇಬ್ಬರು ಹುಡುಗಿಯರ ಸ್ಥಿತಿ ಸ್ಥಿರವಾಗಿದೆ, ಆದರೆ ಇನ್ನೂ ಒಬ್ಬ ಹುಡುಗಿಗೆ ಯಕೃತ್ತು ಹಾನಿಯಾಗಿದೆ. ಸಂತ್ರಸ್ತೆ ಸುಮಾರು 45 ಮಾತ್ರೆಗಳನ್ನು ಸೇವಿಸಿದ್ದಾಳೆಂದು ವೈದ್ಯರು ಹೇಳಿದ್ದಾರೆ.