

ತುಮಕೂರು: ಕೌಟುಂಬಿಕ ಕಲಹದಿಂದ ನೊಂದು ತಾಯಿಯೊಬ್ಬಳು ಮಗನೊಂದಿಗೆ ಕೆರೆಗೆ ಹಾರಿದ್ದು, ಮಗ ಸಾವಿಗೀಡಾಗಿ, ಅಮ್ಮ ಚಿಂತಾಜನಕ ಪರಿಸ್ಥಿತಿಗೆ ತಲುಪಿದಂತಾಗಿದೆ. ತುಮಕೂರು ಜಿಲ್ಲೆಯಲ್ಲಿ ಇಂಥದ್ದೊಂದು ಕರುಣಾಜನಕ ಪ್ರಸಂಗ ನಡೆದಿದೆ.
ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ಕುಣಿಗಲ್ ಕೆರೆ ಕೋಡಿ ಬಳಿ ಈ ಪ್ರಕರಣ ನಡೆದಿದೆ. ತುರುವೇಕೆರೆ ತಾಲ್ಲೂಕಿನ ಪುರ ಗ್ರಾಮದ ನಿವಾಸಿ ವಿಜಯಲಕ್ಷ್ಮಿ, ತನ್ನ ಐದು ವರ್ಷದ ಮಗ ಶಿವಕುಮಾರ್ ಸಹಿತ ಕೆರೆಗೆ ಹಾರಿದ್ದಳು. ದುರದೃಷ್ಟವಶಾತ್ ಮಗ ಸಾವಿಗೀಡಾಗಿದ್ದು, ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದರೂ ಪರಿಸ್ಥಿತಿ ಚಿಂತಾಜನಕವಾಗಿದೆ.
ಕೌಟುಂಬಿಕ ಕಲಹಕ್ಕೆ ಮನನೊಂದು ಇಂದು ಸಂಜೆ ತನ್ನ ಮಗನ ಜೊತೆ ಕುಣಿಗಲ್ ಕೆರೆಗೆ ಹಾರಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯುತ್ನಿಸಿದ್ದಳು. ಇವರು ಕೆರೆಯಲ್ಲಿ ಬಿದ್ದು ಒದ್ದಾಡುತ್ತಿದ್ದುದನ್ನು ನೋಡಿದ ಸ್ಥಳೀಯರು ರಕ್ಷಣೆಗೆ ಧಾವಿಸಿ ತಾಯಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟರಲ್ಲಿ ಮಗ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದ. ತೀವ್ರ ಅಸ್ವಸ್ಥಗೊಂಡಿದ್ದ ವಿಜಯಲಕ್ಷ್ಮೀಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಶಿವಕುಮಾರ್ ಮೃತದೇಹವನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.