

ಮುಂಬೈ: ಬಾಲಿವುಡ್ನ ಕಿಂಗ್ ಖಾನ್, ನಟ ಶಾರೂಖ್ ಖಾನ್ ಪುತ್ರಿ ಸುಹಾನಾ ಖಾನ್ ಇದೀಗ ಒಟಿಟಿ ಸಿನಿಮಾದ ಮುಖೇನ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಇಂದು 'ದಿ ಆರ್ಚೀಸ್' ಟ್ರೇಲರ್ ಅಧಿಕೃತವಾಗಿ ಯೂಟ್ಯೂಬ್ನಲ್ಲಿ ಬಿಡುಗಡೆಗೊಂಡಿತು. ಈ ಸಿನಿಮಾದ ಮುಖೇನ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶಾರೂಖ್ ಪುತ್ರಿಗೆ ಇದೀಗ ಸಿನಿಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ, ಅಭಿನಂದನೆ ವ್ಯಕ್ತವಾಗುತ್ತಿದೆ.
ತಮ್ಮ ಪುತ್ರಿ ಸುಹಾನಾ ಖಾನ್ ಅಭಿನಯದ 'ದಿ ಆರ್ಚೀಸ್' ಟ್ರೇಲರ್ ನೋಡಿದ ಶಾರೂಖ್ ಖಾನ್, ಮಗಳ ನಟನೆಯನ್ನು ಶ್ಲಾಘಿಸಿ, ಜೋಯಾ ಅಖ್ತರ್ ಅವರು 'ಚಿತ್ರಕ್ಕೆ ಮುಗ್ಧ ಮತ್ತು ಪ್ರಾಚೀನ ಗುಣಮಟ್ಟವನ್ನು ಸೃಷ್ಟಿಸಿದ್ದಾರೆ' ಎಂದು ಹೇಳಿದ್ದಾರೆ. ಸದ್ಯ ಚಿತ್ರದ ಟ್ರೇಲರ್ಗೆ ಪಾಸಿಟಿವ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ಸುಹಾನಾ ಖಾನ್, ಖುಷಿ ಕಪೂರ್, ಅಗಸ್ತ್ಯ ನಂದಾ, ವೇದಂಗ್ ರೈನಾ ಮುಂತಾದವರು ಕಾಣಿಸಿಕೊಂಡಿದ್ದಾರೆ.
'ದಿ ಆರ್ಚೀಸ್' ಟ್ರೇಲರ್ ವೀಕ್ಷಿಸಿ, ಟ್ವೀಟ್ ಮಾಡಿದ ಶಾರೂಖ್, ಇದೊಂದು ಸಮಕಾಲೀನ ವಿಷಯ. ಜೋಯಾ ಚಲನಚಿತ್ರಕ್ಕೆ ಅಂತಹ ಮುಗ್ಧ ಮತ್ತು ಪ್ರಾಚೀನ ಗುಣಮಟ್ಟವನ್ನು ಸೃಷ್ಟಿಸಿದ್ದಾರೆ. ಈ ಸಿಹಿ ಮತ್ತು ಅರ್ಥಪೂರ್ಣ ಮೋಜಿನ ಚಿತ್ರದಲ್ಲಿ ತೊಡಗಿಸಿಕೊಂಡಿರುವ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಎಂದು ಶುಭಕೋರಿದ್ದಾರೆ.
ಈ ಚಿತ್ರದಲ್ಲಿ ಶಾರೂಖ್ ಖಾನ್ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ದಿ ಆರ್ಚೀಸ್' ಚಿತ್ರವನ್ನು ಜೋಯಾ ಅಖ್ತರ್ ನಿರ್ದೇಶಿಸಿದ್ದು, ಅಖ್ತರ್, ರೀಮಾ ಕಾಗ್ತಿ ಮತ್ತು ಆಯೇಶಾ ದೇವಿತ್ರೆ ಧಿಲ್ಲೋನ್ ಕಥೆ ಬರೆದಿದ್ದಾರೆ. ಈ ಚಲನಚಿತ್ರವು ಜನಪ್ರಿಯ ಅಮೇರಿಕನ್ ಕಾಮಿಕ್ ಪುಸ್ತಕ ಸರಣಿಯನ್ನು ಆಧರಿಸಿದೆ.
'ದಿ ಆರ್ಚೀಸ್' ಇದೇ ಡಿಸೆಂಬರ್ 7, 2023 ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾದ ಎರಡು ಹಾಡುಗಳನ್ನು ಚಿತ್ರ ತಯಾರಕರು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಿದ್ದಾರೆ,(ಏಜೆನ್ಸೀಸ್).