ವರ್ಗಾವಣೆಯಾದ ನೆಚ್ಚಿನ ಶಿಕ್ಷಕಿಗೆ ಅದ್ಧೂರಿ ಬೀಳ್ಕೊಡುಗೆ: ಬೆಳ್ಳಿ ರಥದ ಮೆರವಣಿಗೆ, ಡೊಳ್ಳು ಕುಣಿತ, ಹೂಮಳೆಗೈದು ಗೌರವ

Teacher Tranfer
Published on

ಬಳ್ಳಾರಿ: ಒಮ್ಮೆ ಇಷ್ಟವಾದರೆ ನಮ್ಮ ಜನರು ಯಾವ ರೀತಿ ಒಬ್ಬ ವ್ಯಕ್ತಿಯನ್ನು ಹೊತ್ತು ಮೆರೆಸುತ್ತಾರೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.

ಈ ಸರ್ಕಾರಿ ಶಾಲೆಯ ಶಿಕ್ಷಕಿಗೆ ಸಿಕ್ಕ ಅದ್ದೂರಿ ಬೀಳ್ಕೊಡಿಗೆ ಈವರೆಗೂ ಯಾವುದೇ ಅಧಿಕಾರಿಗೆ ಸಿಕ್ಕಿರಲಿಲ್ಲ ಎಂದೇ ಹೇಳಬಹುದು. ಅಷ್ಟರಮಟ್ಟಿಗೆ ಶಿಕ್ಷಕಿಯನ್ನು ಗೌರವಪೂರ್ಣವಾಗಿ ಕಳುಹಿಸಿಕೊಡಲಾಗಿದೆ. ಇದು ಸರ್ಕಾರಿ ಶಾಲೆಯ ಶಿಕ್ಷಕಿ, ಮಕ್ಕಳು ಹಾಗೂ ಗ್ರಾಮಸ್ಥರ ಅವಿನಾಭಾವಕ್ಕೆ ಸಾಕ್ಷಿಯಾದ ಕ್ಷಣವಾಗಿದೆ. ಇದು ನಡೆದಿರೋದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕುರುವಳ್ಳಿ ಗ್ರಾಮದಲ್ಲಿ.

ಸರ್ಕಾರಿ ಶಾಲೆಯ ಶಿಕ್ಷಕಿ ಜ್ಯೋತಿ ಎಂಬುವರು ವರ್ಗಾವಣೆ ಆಗಿದ್ದಾರೆ. ನೆಚ್ಚಿನ ಶಿಕ್ಷಕಿಯನ್ನು ಆಗಾಗ ನೋಡಲು ಸಾದ್ಯವಾಗುವುದಿಲ್ಲ ಮತ್ತು ಅವರ ಅತ್ಯುತ್ತಮ ಮಾರ್ಗದರ್ಶನ ತಪ್ಪಿತ್ತಲ್ಲ ಎಂಬ ದುಃಖದಲ್ಲಿ ಮಕ್ಕಳು ಕಣ್ಣೀರಿಟ್ಟರು. ಜ್ಯೋತಿ ಅವರು ಪಾಠ ಹೇಳಿಕೊಡುವ ಶಿಕ್ಷಕಿಯ ಜತೆ ಮಮತೆಯನ್ನು ಸಹ ಮಕ್ಕಳಿಗೆ ಧಾರೆ ಎರೆಯುತ್ತಿದ್ದರು. ಇದು ಮಕ್ಕಳು ಮತ್ತು ಶಿಕ್ಷಕಿ ನಡುವೆ ಭಾವನಾತ್ಮಕ ಸಂಬಂಧ ಬೆಸೆದಿತ್ತು.

ಇದೀಗ ಶಿಕ್ಷಕಿ ಜ್ಯೋತಿ ತಮ್ಮ ಶಾಲೆ ಬಿಟ್ಟು ಹೊಗುತ್ತಿರುವುದಕ್ಕೆ ಮಕ್ಕಳು ಕಣ್ಣೀರಿಟ್ಟಿದ್ದಾರೆ. ಗ್ರಾಮಸ್ಥರಿಗೂ ಜ್ಯೋತಿ ಅವರ ಮೇಲೆ ಅಭಿಮಾನ ಇತ್ತು. ಹೀಗಾಗಿ ಶಿಕ್ಷಕಿಯನ್ನು ಬೆಳ್ಳಿ ರಥದಲ್ಲಿ ಕೂರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡುವ ಜತೆಗೆ ಮಹಿಳೆಯರು ಹಾಗೂ ಮಕ್ಕಳಿಂದ ಪೂರ್ಣ ಕುಂಭ ಹೊತ್ತು ಗೌರವಪೂರ್ಣ ಬೀಳ್ಕೊಡಿಗೆ ನೀಡಿದರು. ಅಲ್ಲದೆ, ಡೊಳ್ಳು ಕುಣಿತ, ಹೂಮಳೆಗೈದು ಮೆಚ್ಚಿನ ಶಿಕ್ಷಕಿಯನ್ನು ಭಾರದ ಮನಸ್ಸಿನಿಂದಲೇ ಮಕ್ಕಳು ಕಳುಹಿಸಿಕೊಟ್ಟಿದ್ದಾರೆ.

ಕುರುವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ‌ ಶಾಲೆಯ ಶಿಕ್ಷಕಿ ಜ್ಯೋತಿ, ಕಳೆದ ಹದಿನೈದು ವರ್ಷದಿಂದ ಕುರುಳ್ಳಿ ಗ್ರಾಮದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಈಗ ಅವರ ವರ್ಗಾವಣೆಯಾಗಿದೆ. ಹದಿನೈದು ವರ್ಷದಲ್ಲಿ ಶಿಕ್ಷಕಿ ಜ್ಯೋತಿ ಮಕ್ಕಳ ಪ್ರೀತಿಯ ಜೊತೆಗೆ ಗ್ರಾಮಸ್ಥರ ಪ್ರೀತಿ ಗಳಿಸಿದ್ದಾರೆ. ಶಿಕ್ಷಕಿ ಜ್ಯೋತಿ ವರ್ಗಾವಣೆ ಹಿನ್ನೆಲೆ ಗ್ರಾಮಸ್ಥರು ಹಾಗೂ ಮಕ್ಕಳಿಗೆ ಬೇಸರವಾಗಿದೆ. ಆದರೂ ಅದ್ಧೂರಿಯಾಗಿ ಬಿಳ್ಕೊಟ್ಟು ಜನ ಪ್ರೀತಿ ತೋರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net