ಇಂದಿನಿಂದ ವಿಶ್ವ ಅಥ್ಲೆಟಿಕ್ಸ್​; ಸ್ವರ್ಣ ಪದಕದ ಮೇಲೆ ನೀರಜ್​ ಚೋಪ್ರಾ ಕಣ್ಣು

neeraj web
Published on

ಬುಡಾಪೆಸ್ಟ್​ (ಹಂಗೆರಿ): ಟೋಕಿಯೊ ಒಲಿಂಪಿಕ್ಸ್​ನಲ್ಲಿ ನೀರಜ್​ ಚೋಪ್ರಾ ಸ್ವರ್ಣ ಪದಕ ಗೆದ್ದು ಇತಿಹಾಸ ಬರೆದ ಬಳಿಕ ಅದರಿಂದ ಸ್ಫೂರ್ತಿ ಪಡೆದ ಭಾರತದ ಅಥ್ಲೀಟ್​ಗಳು ಜಾಗತಿಕ ಮಟ್ಟದಲ್ಲಿ ಪ್ರಗತಿಯ ಹಾದಿಯಲ್ಲಿದ್ದಾರೆ. ಕಳೆದ ವರ್ಷ ಕಾಮನ್ವೆಲ್ತ್​ ಗೇಮ್ಸ್​ ಮತ್ತು ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಭಾರತದ ಅಥ್ಲೀಟ್​ಗಳು ಭರ್ಜರಿ ಯಶಸ್ಸು ಕಂಡಿದ್ದರು. ಇದೀಗ ಶನಿವಾರ ಆರಂಭಗೊಳ್ಳಲಿರುವ 19ನೇ ಆವೃತ್ತಿಯ ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲೂ ಯಶಸ್ಸಿನ ಅಲೆ ಮುಂದುವರಿಸಲು ಭಾರತದ ಅಥ್ಲೀಟ್​ಗಳು ಸಜ್ಜಾಗಿದ್ದಾರೆ. ಈ ಬಾರಿ ದಾಖಲೆಯ 28 ಭಾರತೀಯ ಅಥ್ಲೀಟ್​ಗಳು ಕಣದಲ್ಲಿದ್ದು, ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ ಕಳೆದ ಆವೃತ್ತಿಯಲ್ಲಿ ಗೆದ್ದಿದ್ದ ರಜತವನ್ನು ಸ್ವರ್ಣ ಪದಕವಾಗಿ ಬದಲಾಯಿಸಲು ಸಜ್ಜಾಗಿದ್ದಾರೆ.

ಜಾವೆಲಿನ್​ ಎಸೆತದಲ್ಲಿ ಭಾರತದ ಮೂವರು ಸ್ಪರ್ಧಿಸಲಿದ್ದರೆ, ಲಾಂಗ್​ಜಂಪ್​ನಲ್ಲೂ ಭಾರತದ ಇಬ್ಬರು ಸ್ಪರ್ಧಿಗಳಾದ ಮುರಳಿ ಶ್ರೀಶಂಕರ್​ ಮತ್ತು ಜೆಸ್ವಿನ್​ ಅಲ್​ಡ್ರಿನ್​ ಪದಕ ಆಕಾಂಗಳಾಗಿದ್ದಾರೆ. ಕಳೆದ ಬಾರಿ 3000ಮೀ. ಸ್ಟೀಪಲ್​ಚೇಸ್​ನಲ್ಲಿ ಫೈನಲ್​ಗೇರಿದ್ದ ರಾಷ್ಟ್ರೀಯ ದಾಖಲೆ ವೀರ ಅವಿನಾಶ್​ ಸಾಬ್ಲೆ ಈ ಬಾರಿ ಪದಕ ಒಲಿಸಿಕೊಳ್ಳುವ ಹಂಬಲದಲ್ಲಿದ್ದಾರೆ. ಮಹಿಳಾ ವಿಭಾಗದಲ್ಲಿ ಹರ್ಡಲ್ಸ್​ ತಾರೆ ಜ್ಯೋತಿ ಯರಾಜಿ ಮತ್ತು ಲಾಂಗ್​ಜಂಪ್​ ಪಟು ಶೈಲಿ ಸಿಂಗ್​ ಭಾರತದ ಪ್ರಮುಖ ಆಶಾಕಿರಣವೆನಿಸಿದ್ದಾರೆ.

ಒಟ್ಟು 9 ದಿನಗಳ ಕಾಲ ನಡೆಯಲಿರುವ ಜಾಗತಿಕ ಕ್ರೀಡಾಕೂಟದಲ್ಲಿ 200ಕ್ಕೂ ಅಧಿಕ ದೇಶಗಳಿಂದ ಅಥ್ಲೀಟ್​ಗಳು ಭಾಗವಹಿಸಲಿದ್ದು, ಒಟ್ಟು 49 ಸ್ವರ್ಣ ಪದಕಗಳಿಗೆ ಟ್ರಾ$್ಯಕ್​ ಆಂಡ್​ ಫೀಲ್ಡ್​ ಸ್ಪರ್ಧೆಗಳು ನಡೆಯಲಿವೆ.

ನೀರಜ್​ಗೆ 90 ಮೀಟರ್​ ಗುರಿ

ಒಲಿಂಪಿಕ್ಸ್​ ಚಾಂಪಿಯನ್​ ನೀರಜ್​ ಚೋಪ್ರಾ ಚಿನ್ನ ಗೆದ್ದು ವಿಶ್ವ ಚಾಂಪಿಯನ್​ ಪಟ್ಟವೇರುವ ಜತೆಗೆ ಮೊದಲ ಬಾರಿಗೆ 90 ಮೀ. ಗಡಿಯನ್ನು ದಾಟುವ ಹಂಬಲದಲ್ಲಿದ್ದಾರೆ. 90 ಮೀ. ದಾಟುವ ಸನಿಹದಲ್ಲಿರುವೆ. ಅದಕ್ಕೆ ಅನುಕೂಲಕರ ವಾತಾವರಣದ ನೆರವಷ್ಟೇ ಸಿಗಬೇಕಾಗಿದೆ ಎಂದು ನೀರಜ್​ ಹೇಳಿದ್ದಾರೆ. ಕಳೆದ ವರ್ಷ ಡೈಮಂಡ್​ ಲೀಗ್​ನಲ್ಲಿ 89.94 ಮೀ. ಎಸೆದಿದ್ದು ಅವರ ಗರಿಷ್ಠ ದೂರದ ಎಸೆತವಾಗಿದೆ. ಜೂನ್​ 30ರ ಲಾಸನ್ನೆ ಡೈಮಂಡ್​ ಲೀಗ್​ ಬಳಿಕ 25 ವರ್ಷದ ನೀರಜ್​ ಮೊದಲ ಬಾರಿ ಕಣಕ್ಕಿಳಿಯಲಿದ್ದಾರೆ. ಈ ಕೂಟದ ಬೆನ್ನಲ್ಲೇ ಡೈಮಂಡ್​ ಲೀಗ್​ ಫೈನಲ್​ ಮತ್ತು ಏಷ್ಯನ್​ ಗೇಮ್ಸ್​ ಸವಾಲುಗಳೂ ಅವರ ಮುಂದಿವೆ. ಗಾಯದಿಂದಾಗಿ 2 ತಿಂಗಳು ವಿಶ್ರಾಂತಿ ಪಡೆದ ಬಳಿಕ ಮರಳಿ ಕಣಕ್ಕಿಳಿಯುತ್ತಿರುವ ನೀರಜ್​ಗೆ ಜೆಕ್​ ಗಣರಾಜ್ಯದ ಜೇಕಬ್​ ವಡ್ಲೆಜ್​, ಜರ್ಮನಿಯ ಜೂಲಿಯನ್​ ವೆಬರ್​, ಹಾಲಿ ಚಾಂಪಿಯನ್​ ಆಂಡರ್​ಸನ್​ ಪೀಟರ್ಸ್​ ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದಾರೆ. ನೀರಜ್​ ಚೋಪ್ರಾ ಚಿನ್ನದ ಪದಕ ಗೆದ್ದರೆ, ಒಲಿಂಪಿಕ್ಸ್​ ಮತ್ತು ವಿಶ್ವ ಚಾಂಪಿಯನ್​ಷಿಪ್​ ಎರಡರಲ್ಲೂ ಚಿನ್ನ ಗೆದ್ದ 2ನೇ ಭಾರತೀಯ ಎನಿಸಲಿದ್ದಾರೆ. ಶೂಟರ್​ ಅಭಿನವ್​ ಬಿಂದ್ರಾ ಮೊದಲ ಸಾಧಕ.

ಕಣದಲ್ಲಿ ಇಬ್ಬರು ಕನ್ನಡಿಗರು

ಜಾವೆಲಿನ್​ ಎಸೆತ ಸ್ಪರ್ಧೆಯಲ್ಲಿ ನೀರಜ್​ ಜತೆಗೆ ಕನ್ನಡಿಗ ಮನು ಡಿ.ಪಿ. ಕಣಕ್ಕಿಳಿಯಲಿದ್ದಾರೆ. ಕಳೆದ ಏಷ್ಯನ್​ ಚಾಂಪಿಯನ್​ಷಿಪ್​ ರಜತ ಪದಕ ಗೆದ್ದಿದ್ದ 23 ವರ್ಷದ ಮನುಗೆ ಕನ್ನಡಿಗರೇ ಆದ ಕಾಶಿನಾಥ್​ ನಾಯ್ಕ್​ ಕೋಚ್​ ಆಗಿದ್ದಾರೆ. ಸೈನಿಕರಾಗಿರುವ ಮನು, ಗರಿಷ್ಠ 84.35 ಮೀ. ಎಸೆತದ ದಾಖಲೆ ಹೊಂದಿದ್ದಾರೆ. ಪುರುಷರ 4/400 ಮೀ. ರಿಲೇ ತಂಡದಲ್ಲಿರುವ ಮಿಜೋ ಚಾಕೋ ಕುರಿಯನ್​ ಕಣದಲ್ಲಿರುವ ಮತ್ತೋರ್ವ ಕನ್ನಡಿಗರಾಗಿದ್ದಾರೆ.

ಭಾರತದ ಪದಕ ಆಕಾಂಕ್ಷಿಗಳು

*ನೀರಜ್​ ಚೋಪ್ರಾ (ಜಾವೆಲಿನ್​ ಎಸೆತ)

ಸ್ಪರ್ಧೆ ದಿನಾಂಕ: ಅರ್ಹತಾ ಸುತ್ತು: ಆ. 25, ಫೈನಲ್​: ಆ. 27

*ಮುರಳಿ ಶ್ರೀಶಂಕರ್​ (ಲಾಂಗ್​ಜಂಪ್​)

ಸ್ಪರ್ಧೆ ದಿನಾಂಕ: ಅರ್ಹತಾ ಸುತ್ತು: ಆ.23, ಫೈನಲ್​: ಆ.24

*ಪ್ರವಿಣ್​ ಚಿತ್ರವೆಲ್​ (ಟ್ರಿಪಲ್​ ಜಂಪ್​)

ಸ್ಪರ್ಧೆ ದಿನಾಂಕ: ಅರ್ಹತಾ ಸುತ್ತು: ಆ.19, ಫೈನಲ್​: ಆ.21

*ಅವಿನಾಶ್​ ಸಾಬ್ಲೆ (3000 ಮೀ. ಸ್ಟೀಪಲ್​ಚೇಸ್​)

ಸ್ಪರ್ಧೆ ದಿನಾಂಕ: ಹೀಟ್ಸ್​: ಆ.19, ಫೈನಲ್​: ಆ.22

*ಜ್ಯೋತಿ ಯರಾಜಿ (100 ಮೀ. ಹರ್ಡಲ್ಸ್​)

ಸ್ಪರ್ಧೆ ದಿನಾಂಕ: ಹೀಟ್ಸ್​: ಆ.22, ಸೆಮೀಸ್​: ಆ.23, ಫೈನಲ್​: ಆ24

*ಶೈಲಿ ಸಿಂಗ್​ (ಲಾಂಗ್​ಜಂಪ್​)

ಸ್ಪರ್ಧೆ ದಿನಾಂಕ: ಅರ್ಹತಾ ಸುತ್ತು: ಆ.19, ಫೈನಲ್​: ಆ.20

ಭಾರತ ಎರಡೇ ಪದಕ ಸಾಧನೆ

ವಿಶ್ವ ಅಥ್ಲೆಟಿಕ್ಸ್​ನಲ್ಲಿ ಭಾರತ ಇದುವರೆಗೆ ಕೇವಲ 2 ಪದಕ ಗೆದ್ದುಕೊಂಡಿದೆ. 2003ರ ಪ್ಯಾರಿಸ್​ ಕೂಟದಲ್ಲಿ ಅಂಜು ಬಾಬಿ ಜಾರ್ಜ್​ ಲಾಂಗ್​ಜಂಪ್​ನಲ್ಲಿ ಕಂಚಿಗೆ ಕೊರಳೊಡ್ಡಿದ್ದರೆ, ಕಳೆದ ವರ್ಷ ನೀರಜ್​ ಬೆಳ್ಳಿ ಪದಕ ಗೆದ್ದಿದ್ದರು. ಇದಲ್ಲದೆ ಕಳೆದ ವರ್ಷ ಭಾರತದ 6 ಅಥ್ಲೀಟ್​ಗಳು ಫೈನಲ್​ಗೇರಿದ್ದು ದಾಖಲೆ ಎನಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net