

ನವದೆಹಲಿ: ಇತ್ತೀಚೆಗೆ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಕೊನೇ 2 ಪಂದ್ಯಗಳನ್ನು ಆಡಲು ಅಮೆರಿಕದ ಮಿಯಾಮಿಗೆ ತೆರಳಿದಾಗ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ನಡುವೆ 2 ಗಂಟೆಗಳ ಸುದೀರ್ ಸಭೆ ನಡೆದಿದೆ. ಜಯ್ ಷಾ ತಂಗಿದ್ದ ಖಾಸಗಿ ಹೋಟೆಲ್ನ ಕೊಠಡಿಯಲ್ಲಿ ಇವರಿಬ್ಬರ ನಡುವೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಜಯ್ ಷಾ ಮಿಯಾಮಿಗೆ ಖಾಸಗಿ ಭೇಟಿ ನೀಡಿದ್ದ ಕಾರಣ ಪ್ರತ್ಯೇಕ ಹೋಟೆಲ್ನಲ್ಲಿ ಉಳಿದುಕೊಂಡಿದ್ದರು. ಆ ವೇಳೆ ದ್ರಾವಿಡ್ ಭಾರತ ತಂಡದ ಹೋಟೆಲ್ನಿಂದ ಕಾರಿನಲ್ಲಿ ಅಲ್ಲಿಗೆ ತೆರಳಿದ್ದರು ಎನ್ನಲಾಗಿದೆ.
ಮುಂಬರುವ ಏಷ್ಯಾಕಪ್-ವಿಶ್ವಕಪ್ ಹಿನ್ನೆಲೆಯಲ್ಲಿ ಇವರಿಬ್ಬರ ಈ ಭೇಟಿ ಮಹತ್ವ ಪಡೆದಿದೆ. ಅಲ್ಲದೆ ಏಕದಿನ ವಿಶ್ವಕಪ್ ಬಳಿಕ ದ್ರಾವಿಡ್ ಅವರ ಹಾಲಿ ಒಪ್ಪಂದ ಮುಕ್ತಾಯಗೊಳ್ಳಲಿದ್ದು, ಅವರ ಮರುನೇಮಕಕ್ಕೆ ಸಂಬಂಧಿಸಿದಂತೆಯೂ ಮಾತುಕತೆ ನಡೆದಿರಬಹುದು ಎನ್ನಲಾಗಿದೆ.