24*7 ಬಿಂದಾಸ್ ಬೆಂಗ್ಳೂರು!: ಆರ್ಥಿಕ ಬೆಳವಣಿಗೆ, ಉದ್ಯೋಗಾವಕಾಶ ಸೃಷ್ಟಿ ಉದ್ದೇಶ

City
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು 
ರಾಜಧಾನಿ ಬೆಂಗಳೂರಿನಲ್ಲಿ ಆರ್ಥಿಕ ಚಟುವಟಿಕೆಗಳನ್ನು ವೃದ್ದಿಸುವ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ದಿನದ 24 ಗಂಟೆಗಳ ಕಾಲ ವಾಣಿಜ್ಯೋದ್ಯಮಗಳು ಕಾರ್ಯ ನಿರ್ವಹಿಸುವ ‘ರಾತ್ರಿ ಜೀವನ’ ಆರಂಭಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ.

ಈಗಾಗಲೇ ಹೋಟೆಲ್ ಉದ್ಯಮಿಗಳು ಸೇರಿದಂತೆ ವಿವಿಧ ವಲಯಗಳಿಂದ 24 ಗಂಟೆಗಳ ಚಟುವಟಿಕೆಗಳಿಗೆ ಸರ್ಕಾರದ ಮೇಲೆ ಒತ್ತಡ ಬಂದಿದೆ. ಆ ಹಿನ್ನೆಲೆಯಲ್ಲಿ ಸಾಧಕ-ಬಾಧಕಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ಸರ್ಕಾರ ವರದಿ ಕೇಳಿದೆ.ಮುಂಬೈನಲ್ಲಿ ಯಶಸ್ವಿಯಾಗಿರುವ ‘ನೈಟ್​ಲೈಫ್’ ಪದ್ಧತಿಯನ್ನು ರಾಜ್ಯದಲ್ಲಿಯೂ ಜಾರಿಗೆ ತರುವ ಬಗ್ಗೆ ರಾಜ್ಯದಲ್ಲಿ ಹಿಂದಿನಿಂದಲೂ ಚರ್ಚೆಗಳು ನಡೆದಿವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿತ್ತಾದರೂ ಸಾಧ್ಯವಾಗಲಿಲ್ಲ. ಈ ಸರ್ಕಾರ ನೈಟ್​ಲೈಫ್ ಯೋಜನೆಗೆ ಸ್ಪಷ್ಟ ರೂಪ ನೀಡುವ ಮೂಲಕ ಜಾರಿಗೆ ಕೊಡಲು ತೀರ್ವನಿಸಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಸರ್ಕಾರ ‘ಬ್ರ್ಯಾಂಡ್​ ಬೆಂಗಳೂರು’ ರೂಪಿಸುತ್ತಿದ್ದು, ಅದು ಯಶಸ್ವಿ ಯಾಗಬೇಕಾದರೆ ಎಲ್ಲ ವಲಯದಲ್ಲಿಯೂ ಬೆಳವಣಿಗೆಯನ್ನು ಸರ್ಕಾರ ದಾಖಲಿಸಬೇಕಾಗುತ್ತದೆ. ನೈಟ್​ಲೈಫ್ ಜಾರಿಗೆ ತಂದರೆ ವ್ಯಾಪಾರ ವಹಿವಾಟು ವೃದ್ಧಿಯ ಜತೆಗೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ ಎಂಬ ಉದ್ದೇಶ ಸರ್ಕಾರದ್ದು.

ಎಲ್ಲಿ ಜಾರಿ?: ಬೆಂಗಳೂರಿನ ರಾತ್ರಿ ಜೀವನವನ್ನು ಇಡೀ ನಗರಕ್ಕೆ ಅನ್ವಯಿಸಬೇಕೇ? ಅಥವಾ ಆಯ್ದ ಪ್ರದೇಶದಲ್ಲಿ ಮಾತ್ರ ಜಾರಿ ಮಾಡಬೇಕೆ ಎಂಬುದು ಚರ್ಚೆಯಲ್ಲಿರುವ ಪ್ರಮುಖ ಅಂಶವಾಗಿದೆ. ಅಧಿಕಾರಿಗಳಿಂದ ಎರಡು ರೀತಿಯ ಅಭಿಪ್ರಾಯಗಳು ಕೇಳಿಬಂದಿವೆ. ವಾಣಿಜ್ಯ ವಹಿವಾಟುಗಳು ನಡೆಯುವಂತಹ ಪ್ರದೇಶದಲ್ಲಿ ಮಾತ್ರ ಜಾರಿಗೆ ತಂದರೆ ಸಾಕು ಎಂಬ ಅನಿಸಿಕೆ ಕೆಲ ಅಧಿಕಾರಿಗಳು ಕೊಟ್ಟಿದ್ದಾರೆ. ಆದರೆ, ಈ ರೀತಿಯಾದರೆ ತಪ್ಪಾಗುತ್ತದೆ. ಎಲ್ಲ ಪ್ರದೇಶದಲ್ಲಿಯೂ ಅನುಷ್ಠಾನವಾಗಬೇಕು ಎಂಬುದು ಇನ್ನೂ ಕೆಲವರ ಅಭಿಪ್ರಾಯ.

ಉದ್ಯೋಗದ ಸೃಷ್ಟಿಗೆ ಒತ್ತು: ನೈಟ್​ಲೈಫ್ ಜಾರಿಗೆ ಬಂದರೆ ಉದ್ಯೋಗ ಸೃಷ್ಟಿಯಾಗಲೇಬೇಕು ಎಂಬುದು ಸರ್ಕಾರದ ಸೂಚನೆಯಾಗಿದೆ. ಉದಾಹರಣೆಗೆ ಹೋಟೆಲ್​ಗಳು ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತವೆ ಎಂದರೆ ಅಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿಕೊಂಡು ಪಾಳಿಯಂತೆ ನಡೆಸಬೇಕು. ಮಾಲ್​ಗಳು ಹಾಗೂ ಇತರೆ ಉದ್ದಿಮೆಗಳಲ್ಲಿಯೂ ಇದೇ ರೀತಿಯ ಷರತ್ತು ವಿಧಿಸಲಾಗುತ್ತದೆ.

ಭದ್ರತೆಗೆ ಒತ್ತು: ಎಲ್ಲಿಯೂ ಸಣ್ಣ ಅಪರಾಧಗಳು ನಡೆಯದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಪೊಲೀಸರಿಗೆ ದೊಡ್ಡ ಸವಾಲಿನ ಕೆಲಸವೇ ಆಗಿರುತ್ತದೆ. ರಾತ್ರಿ ಬೀಟ್ ಹೆಚ್ಚಿಸುವುದು, ಅದಕ್ಕಾಗಿ ಬೆಂಗಳೂರಿಗೆ ಹೆಚ್ಚಿನ ಸಿಬ್ಬಂದಿ ನೇಮಕ, ಗಸ್ತು ಹೆಚ್ಚಿಸಲು ಏನೇನು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆಯೂ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಮೆಟ್ರೋ ಅವಧಿ ವಿಸ್ತರಣೆಗೆ ಚಿಂತನೆ ಮಾಡಲಾಗಿದೆ.

ಸಂಘಟನೆಗಳ ಜತೆ ಚರ್ಚೆ: ವಿವಿಧ ಇಲಾಖೆಗಳ ಅಧಿಕಾರಿಗಳು ವರದಿ ನೀಡಿದ ನಂತರ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಂಸ್ಥೆಗಳು, ಸಣ್ಣ ಕೈಗಾರಿಕೆಗಳು, ಆಟೋ ಹಾಗೂ ಟ್ಯಾಕ್ಸಿ ಸಂಘಟನೆಗಳು, ಹೋಟೆಲ್ ಉದ್ದಿಮೆದಾರರು, ಔಷಧ ಮಾರಾಟಗಾರರು, ಮಾಲ್​ಗಳ ಹಾಗೂ ಮಲ್ಟಿಪ್ಲೆಕ್ಸ್​ಗಳ ಮಾಲೀಕರು ಸೇರಿದಂತೆ ವಿವಿಧ ಸಂಘಟನೆಗಳ ಜತೆಗೂ ಪ್ರತ್ಯೇಕವಾಗಿ ಸಭೆ ನಡೆಸಲಾಗುತ್ತದೆ. ಅವರ ಸಾಧಕ-ಬಾಧಕಗಳನ್ನು ಕೇಳಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ. ಆ ನಂತರವಷ್ಟೇ ಯೋಜನೆ ಜಾರಿಗೆ ಬರಲಿದೆ.

ಮುಂಬೈನಿಂದ ಮಾಹಿತಿ: ಮುಂಬೈನಲ್ಲಿ ನೈಟ್​ಲೈಫ್​ನಿಂದ ಏನೇನು ಬದಲಾವಣೆ ಸಾಧ್ಯವಾಗಿದೆ, ಅಹಿತಕರ ಘಟನೆಗಳು ನಡೆಯದಂತೆ ಹೇಗೆ ಎಚ್ಚರಿಕೆ ತೆಗೆದುಕೊಳ್ಳಲಾಗಿದೆ. ಮಹಾರಾಷ್ಟ್ರದ ಆರ್ಥಿಕತೆಗೆ ಇದರಿಂದ ಸಿಕ್ಕಿರುವ ಪಾಲು ಎಷ್ಟು? ಹೀಗೆ ವಿವಿಧ ಮಾಹಿತಿಯನ್ನು ಕೋರಲಾಗುತ್ತದೆ. ಅಧಿಕಾರಿಗಳ ತಂಡವೊಂದನ್ನು ಅಲ್ಲಿಗೆ ಕಳುಹಿಸಿ ಅಧ್ಯಯನ ವರದಿ ಪಡೆಯುವುದು ಸಹ ಸರ್ಕಾರದ ಆಲೋಚನೆಯಲ್ಲಿದೆ.

ಅನುಕೂಲಗಳೇನು?

  • ದಿನದ 24 ಗಂಟೆಗಳು ಎಲ್ಲ ವಸ್ತುಗಳು ಲಭ್ಯ
  • ಹೊರಗಡೆಯಿಂದ ಬರುವವರಿಗೆ ಊಟ-ತಿಂಡಿ ಲಭ್ಯ
  • ಮಧ್ಯರಾತ್ರಿ ಬಂದರೂ ಮೆಟ್ರೋ, ಬಿಎಂಟಿಸಿಯಲ್ಲಿ ಪ್ರಯಾಣ
  • ಬಟ್ಟೆ, ದಿನಸಿ ಖರೀದಿಗೆ ಆರಾಮವಾಗಿ ರಾತ್ರಿ ಹೋಗಬಹುದು
  • ಉದ್ಯೋಗದ ಅವಕಾಶಗಳು ಹೆಚ್ಚಾಗುತ್ತವೆ

ಅನನುಕೂಲಗಳು

  • ಅಪರಾಧಗಳು ಹೆಚ್ಚಾಗುವ ಸಾಧ್ಯತೆ
  • ಸ್ವಚ್ಛತೆಯನ್ನು ಕಾಪಾಡುವ ಸಮಸ್ಯೆ
  • ಪಾನಮತ್ತ ಚಾಲನೆಯಿಂದ ಅಪಘಾತಗಳು
  • ಗಲಾಟೆ, ಗದ್ದಲ ಹೆಚ್ಚಾಗುವ ಅಪಾಯ
  • ಅಧಿಕಾರಿ, ಸಿಬ್ಬಂದಿಯ ಮೇಲೆ ಒತ್ತಡ

ಸಿಎಂ- ಡಿಸಿಎಂ ಆಸಕ್ತಿ

ನೈಟ್​ಲೈಫ್ ಜಾರಿಗೆ ತರುವುದಕ್ಕಿಂತ ಮುಂಚೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳ ಬೇಕಾಗುತ್ತದೆ. ಎಲ್ಲಿಯೂ ವಿರೋಧ ಎದುರಾಗಬಾರದು, ಅಹಿತಕರ ಘಟನೆಗಳು ವರದಿಯಾಗದಂತೆ ಸಾಕಷ್ಟು ಮುನ್ನೆಚ್ಚರಿಕೆ ಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದಲೇ ಸರ್ಕಾರ ವ್ಯಾಪಕ ಚರ್ಚೆಗೆ ಮುಂದಾಗಿದೆ. ವಿವಿಧ ಇಲಾಖೆಗಳಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ಕೇಳಿದೆ. ವರದಿ ಬಂದ ನಂತರ ಅದನ್ನು ಕ್ರೋಡೀಕರಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರು ನೈಟ್​ಲೈಫ್ ಅನುಷ್ಠಾನದ ಬಗ್ಗೆ ವಿಶೇಷ ಆಸಕ್ತಿ ತೋರಿಸುತ್ತಿದ್ದಾರೆ.

ಯಾವ ಇಲಾಖೆಯಿಂದ ಮಾಹಿತಿ?: ನೈಟ್​ಲೈಫ್ ಜಾರಿಗೊಳಿಸಲು ಬಿಬಿಎಂಪಿ, ಬೆಸ್ಕಾಂ, ಬಿಎಂಟಿಸಿ, ಕೈಗಾರಿಕೆ, ಸಾರಿಗೆ ಸಂಸ್ಥೆ, ಮೆಟ್ರೋ, ಆಹಾರ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಿಂದ ಸರ್ಕಾರ ಅಗತ್ಯ ಮಾಹಿತಿಯನ್ನು ಕೋರಿದೆ. ಯಾವ ಇಲಾಖೆಗಳ ಜವಾಬ್ದಾರಿ ಏನು ಎಂಬುದನ್ನು ತಿಳಿಸಿಯೇ ವರದಿಯನ್ನು ಕೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net