

ಬೆಂಗಳೂರು: ಡಿಜಿಟಲ್ ಜಗತ್ತಿನಲ್ಲಿ ಹೊಸ ಹೊಸ ರೀತಿಯಲ್ಲಿ ಜನರನ್ನು ಮೋಸ ಮಾಡುವುದು ನಡೆಯುತ್ತಲೇ ಇರುತ್ತದೆ. ಜನರು ಸ್ವಲ್ಪ ಯೋಚಿಸದೆ, ಪರಿಶೀಲಿಸದೆ ಮುಂದುವರಿದರೆ ಮೋಸಕ್ಕೆ ಒಳಗಾಗುವುದು ಖಚಿತ. ಅಂಥ ಒಂದು ಮೋಸದ ಪ್ರಕರಣ ಬೆಳಕಿಗೆ ಬಂದಿದೆ.
ಅನಾರೋಗ್ಯದ ಜತೆಗೆ ಆರ್ಥಿಕ ಸಂಕಷ್ಟಕ್ಕೂ ಸಿಲುಕಿ ಪರದಾಡುವ ಕೆಲವರು ಮಿಲಾಪ್/ಕೆಟ್ಟೊ ಮುಂತಾದ ಆ್ಯಪ್ಗಳ ಮೂಲಕ ಧನಸಹಾಯಕ್ಕೆ ಕೋರಿಕೆ ಸಲ್ಲಿಸುವುದು ಸಾಮಾನ್ಯ. ಅಂಥವುಗಳಿಗೆ ಹಲವರು ಹಣ ಹಾಕಿ ಸ್ಪಂದಿಸುತ್ತಾರೆ ಮತ್ತು ಇದರಿಂದ ಸಂಕಷ್ಟದಲ್ಲಿರುವ ಅನೇಕರಿಗೆ ಸಹಾಯ ಆಗುವುದು ಕೂಡ ನಿಜ. ಅದಾಗ್ಯೂ ಕೆಲವರು ಇಂಥ ಆ್ಯಪ್ಗಳನ್ನು ದುರ್ಬಳಕೆ ಮಾಡಿಕೊಂಡು ವಂಚಿಸುವುದು ಸಹ ನಡೆಯುತ್ತಿದೆ. ಅಂಥ ಒಂದು ಮೋಸವನ್ನು ವೈದ್ಯರೊಬ್ಬರು ಬಯಲಿಗೆ ಎಳೆದಿದ್ದಾರೆ.
ಅಗ್ನಿ ಆಕಸ್ಮಿಕಕ್ಕೆ ಒಳಗಾಗಿ ಸುಟ್ಟಗಾಯಗಳಿಗೀಡಾಗಿರುವ ಮಗುವಿಗೆ ಆರ್ಥಿಕ ಸಹಾಯ ಬೇಕು ಎಂದು ಕೆಟ್ಟೊ ಆ್ಯಪ್ನ ಎಕ್ಸ್ ಹ್ಯಾಂಡಲ್ನಲ್ಲಿ ಕೋರಿಕೆಯೊಂದು ಪೋಸ್ಟ್ ಆಗಿತ್ತು. ಆದರೆ ಅದರಲ್ಲಿನ ಮಗುವಿನ ಚಿತ್ರವನ್ನು ಕಂಡ ಚರ್ಮವೈದ್ಯರೊಬ್ಬರು, ಇದು ಸುಟ್ಟಗಾಯವಲ್ಲ ಎಂಬ ಅನುಮಾನ ಮೂಡಿದೆ. ಹೆಚ್ಚಿನ ಪರಿಶೀಲನೆಗಾಗಿ ಅಲ್ಲಿದ್ದ ವೈದ್ಯಕೀಯ ಪ್ರಮಾಣಪತ್ರ ಗಮನಿಸಿದಾಗ ಅವರಿಗೆ ಅನುಮಾನ ಮತ್ತಷ್ಟು ಬಲವಾಗಿದೆ.
ಆ ಪ್ರಮಾಣಪತ್ರ ಆಸ್ಪತ್ರೆಯ ವಿವರಗಳನ್ನು ಗೂಗಲ್ ಮೂಲಕ ಪರಿಶೀಲನೆ ಮಾಡಿದಾಗ ಅಲ್ಲಿ ಫೋನ್ ನಂಬರ್ ಇರಲಿಲ್ಲ, ವೆಬ್ಸೈಟ್ ಇರಲಿಲ್ಲ. ಬರೀ ಐದು ರಿವ್ಯೂ ಇದ್ದು, ಎಲ್ಲದಕ್ಕೂ 5 ಸ್ಟಾರ್ ನೀಡಲಾಗಿತ್ತು. ಪ್ರಮಾಣಪತ್ರದಲ್ಲಿ ಹೆಸರಿಸಲಾಗಿದ್ದ ಇಬ್ಬರು ವೈದ್ಯರು ಈ ಆಸ್ಪತ್ರೆಯಲ್ಲಿ ಇಲ್ಲದಿರುವುದು ಕೂಡ ಕಂಡುಬಂದಿತ್ತು. ಅದರಲ್ಲಿ ಮೂರನೇ ವೈದ್ಯರ ಹೆಸರನ್ನು ಪರಿಶೀಲನೆಗೆ ಒಳಪಡಿಸಿದಾಗ ಆ ಯುನಾನಿ ವೈದ್ಯ ಮಾತ್ರ ಇರುವುದು ಗೊತ್ತಾಗಿದೆ. ಕೆಲವು ಜನರು ಇಂಥ ಆಸ್ಪತ್ರೆಗಳಿಂದ ಪ್ರಮಾಣಪತ್ರ ಪಡೆದು ಅವುಗಳನ್ನು ಮಿಲಾಪ್/ಕೆಟ್ಟೊ ಆ್ಯಪ್ಗಳಲ್ಲಿ ಅಪ್ಲೋಡ್ ಮಾಡುತ್ತಾರೆ. ಅದನ್ನು ಅವರು ಸರಿಯಾಗಿ ಪರಿಶೀಲಿಸದೆ ಪೋಸ್ಟ್ ಮಾಡುತ್ತಾರೆ. ಕೆಲವು ಆಸ್ಪತ್ರೆಗಳ ಇಂಥ ನಕಲು ಪ್ರಮಾಣಪತ್ರಗಳು ಇರುವ ಹಲವು ಡೊನೇಷನ್ ಕ್ಯಾಂಪೇನ್ಗಳು ಇಂಥ ಆ್ಯಪ್ಗಳಲ್ಲಿ ಕಂಡುಬರುತ್ತವೆ ಎಂದು ಈ ವೈದ್ಯರು ಎಚ್ಚರಿಸಿದ್ದಾರೆ.
ಮಿಲಾಪ್/ಕೆಟ್ಟೊ ಎರಡೂ ಆ್ಯಪ್ಗಳಲ್ಲಿ ಪೇಜ್ಗಟ್ಟಲೆ ಟರ್ಮ್ಸ್ ಆ್ಯಂಡ್ ಕಂಡಿಷನ್ಸ್ ಇರುತ್ತವೆ, ಅದರಲ್ಲಿ ಬೇಡಿಕೆ ಬಂದಿರುವ ಪ್ರಕರಣಗಳ ನಿಖರತೆ ಕುರಿತು ನಾವು ಪೂರ್ತಿ ಗ್ಯಾರಂಟಿ ಕೊಡುವುದಿಲ್ಲ. ನಿಮಗೆ ವಿಶ್ವಾಸ ಮೂಡಿದರೆ ಮಾತ್ರ ಕೊಡಿ ಎಂಬುದೂ ಇರುತ್ತದೆ. ಅದನ್ನು ಜನರು ಸಾಮಾನ್ಯವಾಗಿ ಓದಿರುವುದಿಲ್ಲ. ಜನರು ತಾವೊಂದು ಒಳ್ಳೆಯ ಉದ್ದೇಶಕ್ಕೆ ಕೊಡುತ್ತಿದ್ದೇವೆ ಎಂದು ಹಣ ಹಾಕುತ್ತಾರೆ ಎಂದಿರುವ ಈ ವೈದ್ಯರು ಈ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಲು ಕೂಡ ಯತ್ನಿಸಿದ್ದಾರೆ.