ಆರೋಗ್ಯವಂತ ಸಮಾಜದಿಂದ ಸದೃಢ ದೇಶ ನಿರ್ಮಾಣ: ಸಚಿವ ಸುಧಾಕರ್ ಅಭಿಪ್ರಾಯ | ರಾಜ್ಯಾದ್ಯಂತ ಆರೋಗ್ಯ ಮೇಳಕ್ಕೆ ಚಾಲನೆ

Sudhakar
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಸೋಮವಾರ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಭೇಟಿಯಾಗಿ ಸಮಾಲೋಚಿಸಿದರು.
Published on

ಬೆಂಗಳೂರು: ಪ್ರತಿಯೊಬ್ಬ ಪ್ರಜೆಗೂ ಉತ್ತಮ ಆರೋಗ್ಯ ಸೌಲಭ್ಯ ನೀಡಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಎಲ್ಲ ತಾಲೂಕುಗಳಲ್ಲಿ ಆರೋಗ್ಯ ಮೇಳ ಆಯೋಜಿಸಲಾಗಿದ್ದು, ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಕರೆ ನೀಡಿದರು.

ಆರೋಗ್ಯವಂತ ಸಮಾಜದಿಂದ ಸದೃಢ ದೇಶ ನಿರ್ಮಾಣ ಸಾಧ್ಯ. ಆ ಉದ್ದೇಶದಿಂದಲೇ ದೇಶಾದ್ಯಂತ ಎಲ್ಲ ತಾಲೂಕಿನಲ್ಲಿ ಆರೋಗ್ಯ ಮೇಳಗಳನ್ನು ಆಯೋಜಿಸಿ ಪ್ರತಿ ಪ್ರಜೆಯ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗೆ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ದೇಶದಲ್ಲೇ ಪ್ರಥಮ ಎಂದರು.

ಕೆ.ಆರ್.ನಗರ ಮತ್ತು ಮಂಡ್ಯ ನಗರಗಳಲ್ಲಿ ನಡೆಯುತ್ತಿರುವ ಆರೋಗ್ಯ ಮೇಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಆರೋಗ್ಯ ತಪಾಸಣೆ ಕಾರ್ಯಕ್ಕೆ ಚಾಲನೆ ನೀಡಿದ ಸಚಿವರು, ಐದು ದಿನಗಳ ಅವಧಿಯಲ್ಲಿ ಪ್ರತಿ ತಾಲೂಕಿನಲ್ಲಿ ಒಂದು ದಿನ ಈ ಮೇಳ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯಾ ಅವರ ದೂರದರ್ಶಿತ್ವ ಮತ್ತು ಕ್ರಿಯಾಶೀಲತೆಯಿಂದ ಈ ವಿನೂತನ ಕಾರ್ಯಕ್ರಮ ಆಯೋಜನೆ ಆಗಿದೆ ಎಂದರು. ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು ಎಂಬ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವೇ ಪ್ರತಿ ತಾಲೂಕಿಗೆ ಎರಡು ಲಕ್ಷ ರೂ. ಆರ್ಥಿಕ ನೆರವು ನೀಡಿದೆ. ಈ ಮೇಳದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ಪತ್ತೆಗಾಗಿ ರಕ್ತ ಪರೀಕ್ಷೆ ಮಾಡಲಾಗುತ್ತಿದೆ. ಆ ಮೂಲಕ ಆರಂಭಿಕ ಹಂತದಲ್ಲೇ ರೋಗಗಳನ್ನು ಪತ್ತೆ ಮಾಡಿದರೆ ರೋಗವನ್ನು ಗುಣಪಡಿಸಲು ಸಾಧ್ಯ. ಇದರ ಜತೆಗೆ, ನೇತ್ರ ಮತ್ತು ಮಾನಸಿಕ ರೋಗಗಳ ತಪಾಸಣೆ, ವಿಕಲಚೇತನರಿಗೆ ಯೂನಿಕ್ ಐಡೆಂಟೆಂಟಿ ಕಾರ್ಡ್ ವಿತರಣೆ, ಎಲ್ಲ ನಾಗರಿಕರಿಗೆ ಡಿಜಿಟಲ್ ಆರೋಗ್ಯ ಗುರುತಿನ ಐಡಿ ನೀಡಲಾಗುತ್ತಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಎಬಿ-ಎಆರ್​ಕೆ ಕಾರ್ಡ್ ವಿತರಿಸಲಾಗುತ್ತಿದೆ ಎಂದು ವಿವರಿಸಿದರು.

ಆಂದೋಲನ ಆಗಬೇಕು: ಆಯುಷ್ಮಾನ್ ಕಾರ್ಡ್ ವಿತರಣೆ ಜಗತ್ತಿನಲ್ಲೇ ಯಾವುದೇ ದೇಶದಲ್ಲಿ ಜಾರಿಯಾಗಿಲ್ಲ. ಯಾವುದೇ ಪ್ರೀಮಿಯಂ ಆಗಲೀ, ನವೀಕರಣ ಶುಲ್ಕಗಳಿಲ್ಲದೆ ವಿಮೆ ಸೌಲಭ್ಯ ನೀಡಿರುವುದು ಭಾರತದಲ್ಲಿ ಮಾತ್ರ. ಕುಟುಂಬದ ಎಲ್ಲ ಸದಸ್ಯರಿಗೂ, ಬಿಪಿಎಲ್ ಮತ್ತು ಎಪಿಎಲ್ ತಾರತಮ್ಯವಿಲ್ಲದೆ ಯೋಜನೆ ಸೌಲಭ್ಯ ನೀಡಲಾಗಿದೆ. ಆ ಮೂಲಕ ವರ್ಷದಲ್ಲಿ ಗರಿಷ್ಠ ಐದು ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುವುದು. ಈ ಸೌಲಭ್ಯವನ್ನು ರಾಜ್ಯದ ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಇದುವರೆಗೆ ಹದಿನೆಂಟು ವರ್ಷ ಮೇಲ್ಪಟ್ಟ 4.8 ಕೋಟಿ ಜನರ ಪೈಕಿ 1.66 ಮಂದಿಗೆ ವಿತರಣೆ ಮಾಡಲಾಗಿದೆ. ಆಂದೋಲನ ಮಾದರಿಯಲ್ಲಿ ಉಳಿದ ಎಲ್ಲರಿಗೂ ಎಬಿ-ಎಆರ್​ಕೆ ಕಾರ್ಡಗಳನ್ನು ಇಲಾಖೆ ಸಿಬ್ಬಂದಿ ವಿತರಿಸಬೇಕು ಎಂದು ಸೂಚನೆ ನೀಡಿದರು. ಆರೋಗ್ಯ ತಪಾಸಣೆಗೆ ನೆರವಾಗುವಂತೆ ಪಿಎಚ್​ಸಿ ಮತ್ತು ಉಪ ಕೇಂದ್ರಗಳಲ್ಲೂ ವೈದ್ಯಕೀಯ ಉಪಕರಣಗಳನ್ನು ನೀಡಲಾಗಿದೆ. ವೆಲ್​ನೆಸ್ ಕೇಂದ್ರಗಳ ಸ್ಥಾಪನೆಯಲ್ಲೂ ಗುರಿ ಮೀರಿ ಸಾಧನೆ ಮಾಡಲಾಗಿದೆ. ಇ- ಸಂಜೀವಿನಿ ಸೌಲಭ್ಯ ಜಾರಿಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದ್ದೇವೆ. ಕೋವಿಡ್ ಸಂದರ್ಭದಲ್ಲಿ ನೀಡಿರುವ ಟೆಲಿ ಕನ್ಸಲ್ಟಿಂಗ್ ಅನ್ನು ಪರಿಗಣಿಸಿದ್ದರೆ ನಾವು ಮೊದಲ ಸ್ಥಾನದಲ್ಲಿ ಇರುತ್ತಿದ್ದೆವು ಎಂದು ಸಚಿವರು ವಿವರಿಸಿದರು.

ಹಠಾತ್ ಭೇಟಿ: ಪೂರ್ವ ನಿಗದಿ ಆಗಿಲ್ಲದಿದ್ದರೂ ಕೆಆರ್ ನಗರ ಮೇಳಕ್ಕೆ ಹಠಾತ್ ಭೇಟಿ ನೀಡಿದ ಸಚಿವರು, ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಳವನ್ನು ಯಾವ ರೀತಿ ನಡೆಸುತ್ತಿದ್ದಾರೆ ಎಂದು ಪರಿಶೀಲಿಸುವ ಸಲುವಾಗಿಯೇ ಯಾವುದೇ ಸೂಚನೆ ನೀಡದೆ ಬಂದಿದ್ದೇನೆ. ಇಂತಹ ಭೇಟಿಗಳ ಮೂಲಕವೇ ರಾಜ್ಯಾದ್ಯಂತ ಇಲಾಖೆ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಮನವರಿಕೆ ಮಾಡಿಕೊಳ್ಳಲು ಸಾಧ್ಯ ಎಂದರು. ಜಿಲ್ಲೆಯ ಪ್ರತಿ ತಾಲ್ಲೂಕುಗಳಲ್ಲಿ ಲೋಪವಿಲ್ಲದಂತೆ ಐದು ದಿನದಲ್ಲಿ ಒಮ್ಮೆಯಾದರೂ ಆರೋಗ್ಯ ಮೇಳವನ್ನು ಆಯೋಜಿಸಬೇಕು. ಮೊದಲ ದಿನದ ಲೋಪಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಸಚಿವ ಸುಧಾಕರ್ ಕಿವಿಮಾತು ಹೇಳಿದರು.

ಯುವ ನಾಯಕರನ್ನು ಪಕ್ಷಕ್ಕೆ ಕರೆತರಲು ಸಮಾಲೋಚನೆ

ಬೆಂಗಳೂರು: ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಾಚರಣೆ ಆರಂಭಿಸಿದೆ. ಆರೋಗ್ಯ ಮೇಳಗಳಿಗೆ ಚಾಲನೆ ನೀಡಲು ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ಸೋಮವಾರ ಭೇಟಿ ನೀಡಿದ್ದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಎರಡೂ ಜಿಲ್ಲೆಗಳ ಪ್ರಮುಖ ಯುವ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ. ಬೆಳಗ್ಗೆ ನಂಜನಗೂಡಿನ ಶ್ರೀನಂಜುಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಸಚಿವರು ಸ್ಥಳೀಯ ಕೆಲ ಮುಖಂಡರ ಜತೆ ಸಮಾಲೋಚಿಸಿದರು. ಬಳಿಕ ಕೆ.ಆರ್. ನಗರಕ್ಕೆ ಹಠಾತ್ ಭೇಟಿ ನೀಡಿದ ಸಚಿವರು ಸ್ಥಳೀಯ ಕೆಲ ನಾಯಕರ ಜತೆ ಸಮಾಲೋಚಿಸಿದರು.

ಮಂಡ್ಯಕ್ಕೆ ಮಧ್ಯಾಹ್ನ ಆಗಮಿಸಿದ ಸಚಿವರು ನೇರವಾಗಿ ಮಾಜಿ ಸಚಿವ ದಿವಂಗತ ಎಸ್.ಡಿ. ಜಯರಾಂ ಅವರ ನಿವಾಸಕ್ಕೆ ತೆರಳಿದರು. ಇತ್ತೀಚಿಗೆ ನಡೆದ ರಾಜ್ಯ ಒಕ್ಕಲಿಗರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಜಯಗಳಿಸಿರುವ ಅಶೋಕ್ ಜಯರಾಂ ಅವರನ್ನು ಭೇಟಿ ಅರ್ಧ ತಾಸು ಮಾತುಕತೆ ನಡೆಸಿದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು, ಅಶೋಕ್ ಮತ್ತು ಸಚ್ಚಿದಾನಂದ ಅರಂತಹ ಅನೇಕ ಯುವ ಮುಖಂಡರು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಸೇರ್ಪಡೆ ಆಗುವ ವಿಶ್ವಾಸವಿದೆ ಎಂದಷ್ಟೇ ಹೇಳಿದರು. ಮೂಲಗಳ ಪ್ರಕಾರ, ಸಂಸದೆ ಸುಮಲತಾ ಅಂಬರೀಷ್, ಅಭಿಷೇಕ್ ಅಂಬರೀಷ್, ಅಶೋಕ್ ಜಯರಾಂ, ಸಚ್ಚಿದಾನಂದ ಸೇರಿ ಕೆಲ ಮುಖಂಡರ ಜತೆ ಸಚಿವ ಸುಧಾಕರ್ ಈಗಾಗಲೇ ಮಾತುಕತೆ ನಡೆಸಿದ್ದು, ಹಳೇ ಮೈಸೂರು ಭಾಗದಲ್ಲಿ ಅನೇಕ ಒಕ್ಕಲಿಗ ಮುಖಂಡರನ್ನು ಶೀಘ್ರವೇ ಪಕ್ಷಕ್ಕೆ ಕರೆತರಲಿದ್ದಾರೆ. ಆ ಮೂಲಕ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಖಚಿತ ಎಂದೂ ಹೇಳಲಾಗುತ್ತಿದೆ.

ಸುತ್ತೂರು ಶ್ರೀ ಭೇಟಿ: ಇದೇ ಸಂದರ್ಭದಲ್ಲಿ ಖಾಸಗಿ ಭೇಟಿಗೆ ಆಗಮಿಸಿದ್ದ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನೂ ಭೇಟಿಯಾದ ಸುಧಾಕರ್, ಸುಮಾರು ಹೊತ್ತು ಸಮಾಲೋಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net