

ಬೆಂಗಳೂರು: ಕರೊನಾ ಹೊಸ ಪ್ರಭೇದ ಒಮಿಕ್ರಾನ್ ವೈರಾಣು ಪ್ರಭಾವ, ಪರಿಣಾಮ ತಡೆಗೆ ಬಿಗಿ ಕ್ರಮಗಳನ್ನು ಕೈಗೊಂಡಿರುವ ಸರ್ಕಾರ, ಕ್ರಿಸ್ವುಸ್ ಹಬ್ಬ ಹಾಗೂ ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಮತ್ತೊಂದು ಸುತ್ತಿನ ಸಭೆ ನಡೆಸಲು ನಿರ್ಧರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಚಿವರು, ತಜ್ಞರು ಹಾಗೂ ಅಧಿಕಾರಿಗಳ ಸಭೆ ಸೋಮವಾರ (ಡಿ.6) ನಡೆಯುವುದು ಬಹುತೇಕ ನಿಶ್ಚಿತವೆಂದು ಮೂಲಗಳು ತಿಳಿಸಿವೆ. ಈಗಾಗಲೆ ವರದಿಯಾಗಿರುವ ಎರಡು ಒಮಿಕ್ರಾನ್ ಪ್ರಕರಣಗಳ ಪರೀಕ್ಷಾ ವರದಿಯನ್ನು ವಿಶ್ಲೇಷಿಸಿ ಸಲಹೆ ನೀಡುವಂತೆ ತಾಂತ್ರಿಕ ತಜ್ಞರಿಗೆ ಸೂಚಿಸಿದ್ದು, ಅಷ್ಟರೊಳಗೆ ಎನ್ಸಿಬಿಎಸ್ ಕಡೆಯಿಂದಲೂ ವಿವರ ಲಭ್ಯವಾಗುವ ನಿರೀಕ್ಷೆಯಿದೆ. ಕ್ರಿಸ್ವುಸ್ ಹಬ್ಬದ ವೇಳೆ ಜನದಟ್ಟಣೆ, ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮದಲ್ಲಿ ಮೋಜು, ಮಸ್ತಿ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ನಿರ್ಬಂಧಗಳನ್ನು ವಿಧಿಸಲು ಸರ್ಕಾರ ಚಿಂತನೆ ನಡೆಸಿದ್ದು, ಮುಂದಿನ ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲಿದೆ.
ತಟಸ್ಥ ನಿಲುವು: ಒಮಿಕ್ರಾನ್ ಭೀತಿ, ಹಲವೆಡೆ ಕರೊನಾ ಡೆಲ್ಟಾ ಸೋಂಕು ಪ್ರಕರಣಗಳ ಸ್ಪೋಟ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ತಗ್ಗದ ಸೋಂಕು ಕಾರಣವೊಡ್ಡಿ ಬಿಗಿ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಶಾಲೆ-ಕಾಲೇಜುಗಳಲ್ಲಿ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿದೆ. ಮದುವೆ ಇನ್ನಿತರ ಸಮಾರಂಭಗಳಿಗೆ 500 ಜನರ ಮಿತಿಗೊಳಿಸಿದೆ. ಆದರೆ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆ ಸೇರಿ ವಿವಿಧ ರಾಜಕೀಯ ಸಮಾವೇಶಗಳ ವಿಷಯದಲ್ಲಿ ಸರ್ಕಾರ ತಟಸ್ಥ ನಿಲುವು ತಳೆದಿದೆ. ಒಮಿಕ್ರಾನ್ ದೃಢಪಟ್ಟ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ವಿಷಯದ ಬಗ್ಗೆ ಬಿಸಿಬಿಸಿ ಚರ್ಚೆಯಾಗಿದೆ. ಬೇರೆ ಕಾರ್ಯಕ್ರಮಗಳಿಗೆ ವಿಧಿಸಿರುವ ನಿರ್ಬಂಧಗಳನ್ನು ರಾಜಕೀಯ ಸಭೆ, ಸಮಾವೇಶಗಳಿಗೂ ಅನ್ವಯಿಸಬೇಕೆಂಬ ವಿಚಾರದಲ್ಲಿ ಸಚಿವರ ಮಧ್ಯೆ ಸಹಮತ ಮೂಡಲಿಲ್ಲ ಎಂದು ಮೂಲಗಳು ತಿಳಿಸಿವೆ. ನಿರ್ಬಂಧದ ಪರವಾಗಿ ಡಾ.ಕೆ.ಸುಧಾಕರ್ ಒಲವು ವ್ಯಕ್ತಪಡಿಸಿದರೆ, ನಿರ್ಬಂಧ ವಿಧಿಸಿದರೆ ರಾಜ್ಯ ನಾಯಕರು ಪಾಲ್ಗೊಳ್ಳುವುದಕ್ಕೆ ಅಡ್ಡಿಯಾಗುತ್ತದೆ ಎಂದು ಆರ್.ಅಶೋಕ್ ಪರೋಕ್ಷವಾಗಿ ಅಪಸ್ವರ ಎತ್ತಿದರು. ಸಿಎಂ ಬೊಮ್ಮಾಯಿ ಸೇರಿ ಉಳಿದಿಬ್ಬರು ಸಚಿವರು ಜಾಣ ಮೌನಕ್ಕೆ ಶರಣಾದರು ಎಂದು ತಿಳಿದುಬಂದಿದೆ.
ಆರೋಗ್ಯ ಸಚಿವರೊಂದಿಗೆ ಚರ್ಚೆ: ದಕ್ಷಿಣ ಆಫ್ರಿಕಾದಿಂದ ಬಂದಿದ್ದ 10 ಜನರ ಸಂಪರ್ಕ ಇಲ್ಲದಿರುವ ಬಗ್ಗೆ ಆರೋಗ್ಯ ಸಚಿವರು ಹೇಳಿಕೆ ಬಗ್ಗೆ ಉತ್ತರಿಸಿದ ಸಿಎಂ, ಆ ಬಗ್ಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಆರೋಗ್ಯ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಪೊಲೀಸರ ಬಗ್ಗೆ ಕಾಳಜಿಯುಳ್ಳ ಗೃಹ ಸಚಿವರು: ಗೃಹ ಸಚಿವರು ಪೊಲೀಸರ ಮನ ನೋಯುವಂತೆ ಮಾತನಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಅವರು ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಎಲ್ಲರಿಗೂ ಅದನ್ನು ಹೇಳಿಲ್ಲ. ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿದ್ದು ಎಂದಿದ್ದಾರೆ. ಪೊಲೀಸರ ಕಲ್ಯಾಣ ಹಾಗೂ ಸವಲತ್ತು ನೀಡಲು ಅತಿ ಹೆಚ್ಚು ಕಾಳಜಿಯನ್ನು ಗೃಹ ಸಚಿವರು ಹೊಂದಿದ್ದಾರೆ ಎಂದು ಸಮರ್ಥಿಸಿಕೊಂಡರು.
ಅಧಿವೇಶನಕ್ಕೆ ಲಸಿಕೆ ಕಡ್ಡಾಯ: ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಎರಡು ಡೋಸ್ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮಕ್ಕೆ ಈಗಾಗಲೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ರಾಜ್ಯದಲ್ಲಿ ಒಮಿಕ್ರಾನ್ ಕಾಣಿಸಿಕೊಳ್ಳಲು ಸರ್ಕಾರವೇ ಕಾರಣ. ವಿದೇಶದಿಂದ ಬಂದವರು ಇಲ್ಲಿ ಹೇಗೆ ಮಿಸ್ಸಿಂಗ್ ಆಗುತ್ತಾರೆ. ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದ ಇದೆಲ್ಲ ಸಾಧ್ಯವಾಗುತ್ತಿದೆ. ಇದು ಲಂಚ ಹೊಡೆಯುವ ಸರ್ಕಾರ. | ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕ
ಯಾವುದೇ ಪ್ರಯಾಣದ ಹಿನ್ನೆಲೆ ಹೊಂದಿರದ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯ ಅರವಳಿಕೆ ತಜ್ಞರು ಒಮಿಕ್ರಾನ್ ರೂಪಾಂತರಿ ಸೋಂಕಿಗೆ ಒಳಗಾಗಿರುವುದರಿಂದ, ಕೇವಲ ಪ್ರಯಾಣ ಹಿನ್ನೆಲೆಯುಳ್ಳವರ ಮಾದರಿಗಳನ್ನು ಮಾತ್ರವಲ್ಲದೆ, ಲಸಿಕೆ ಪಡೆದು ಸೋಂಕಿಗೆ ಒಳಗಾದವರು, ತಜ್ಞರು, ಸೋಂಕಿತ ಮಕ್ಕಳ ಮಾದರಿಗಳನ್ನು (ಕನಿಷ್ಠ ಶೇ.10) ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸುವ ಮೂಲಕ ಒಮಿಕ್ರಾನ್ ಸಮುದಾಯದಲ್ಲಿ ಹರಡಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಕೋವಿಡ್ ಎರಡೂ ಡೋಸ್ ಲಸಿಕೆ ಪಡೆದಿದ್ದ ಅರವಳಿಕೆ ತಜ್ಞ ಯಾವುದೇ ಪ್ರಯಾಣ ಇತಿಹಾಸ ಹೊಂದಿಲ್ಲದಿದ್ದರೂ, ಅವರ ಆರ್ಟಿಪಿಸಿಆರ್ ಪರೀಕ್ಷಾ ವರದಿಯಲ್ಲಿ ವೈರಾಣು ಪ್ರಮಾಣ ಹೆಚ್ಚಿದ್ದು, ಸಿಟಿ ಮಟ್ಟ 1.5ಕ್ಕಿಂತ ಕಡಿಮೆ ಇತ್ತು. ಹಾಗಾಗಿ ಅವರ ಸ್ವಾ್ಯಬ್ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆಯಿಂದ ಒಮಿಕ್ರಾನ್ ದೃಢಪಟ್ಟಿದೆ. ಈ ಕುರಿತು ವೈರಾಣು ತಜ್ಞ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಆಗಿರುವ ಡಾ.ವಿ.ರವಿ, ಸಮುದಾಯದಲ್ಲಿ ಸೋಂಕು ಹರಡಿರುವುದನ್ನು ಖಾತ್ರಿ ಪಡಿಸಿಕೊಳ್ಳುವುದು ಮುಖ್ಯವಾಗಿದೆ. ಹೀಗಾಗಿ ಕೋವಿಡ್ ಸೋಂಕಿಗೆ ಒಳಗಾಗಿ ಸಿಟಿ ಮಟ್ಟ 1.5ಕ್ಕಿಂತ ಕಡಿಮೆ ಇದ್ದರೆ, ಲಸಿಕೆ ಪಡೆದು ಸೋಂಕಿಗೆ ಒಳಗಾದರೆ ಮಕ್ಕಳಲ್ಲಿ ಸೋಂಕು ಕಂಡುಬಂದರೆ ಹಾಗೂ ಕ್ಲಸ್ಟರ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಅಂತಹ ಮಾದರಿಗಳನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಬೇಕಿದೆ. ಒಮಿಕ್ರಾನ್ ಕೂಡ ಡೆಲ್ಟಾ ರೀತಿಯಲ್ಲೇ ವೇಗವಾಗಿ ಹರಡಲಿದೆ. ಹಾಗಾಗಿ ಜನರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಸಿ.ಎನ್.ಮಂಜುನಾಥ್, ಹೊಸ ರೂಪಾಂತರಿ ವೈರಾಣು ಹರಡುವುದನ್ನು ತಡೆಯಲು ಕೋವಿಡ್ ಪರೀಕ್ಷೆ ಹೆಚ್ಚಿಸುವುದರ ಜತೆಗೆ ಸಮುದಾಯದಲ್ಲಿ ಸೋಂಕಿಗೆ ಒಳಗಾದವರಿಗೂ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸುವುದು ಅಗತ್ಯವಾಗಿದೆ. ಮುಂದಿನ 3 ತಿಂಗಳುಗಳು ನಿರ್ಣಾಯಕವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಸಕ್ರಿಯ ಕೇಸ್ 7 ಸಾವಿರಕ್ಕೆ ಏರಿಕೆ: ರಾಜ್ಯದಲ್ಲಿ ಶನಿವಾರ 397 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತೆ 7,012ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ 207 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಮೈಸೂರು 29, ಧಾರವಾಡ 26, ದಕ್ಷಿಣ ಕನ್ನಡ 22, ಹಾಸನ, ಕೊಡಗು ಮತ್ತು ಶಿವಮೊಗ್ಗ ತಲಾ 19, ಚಿಕ್ಕಮಗಳೂರಿನಲ್ಲಿ 11 ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ ಸೋಂಕಿಗೆ ನಾಲ್ವರು ಬಲಿ ಯಾಗಿದ್ದು, ಮೃತರ ಒಟ್ಟು ಸಂಖ್ಯೆ 38,224ಕ್ಕೆ ತಲುಪಿದೆ. 277 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಒಟ್ಟು ಸಂಖ್ಯೆ 29.52 ಲಕ್ಷ ಮೀರಿದೆ.