ಆರ್ಥಿಕ ಚಟುವಟಿಕೆ ವೃದ್ಧಿಗೆ ಕಾರ್ಯತಂತ್ರ: ಗ್ಯಾರಂಟಿಗಳ ಸದ್ಬಳಕೆಗೆ ಹೆಜ್ಜೆ, ಎಂಎಸ್​ಐಎಲ್​ಗೆ ಯೋಜನೆ ರೂಪಿಸುವ ಜವಾಬ್ದಾರಿ

Development (1)
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯಡಿ ಸಾವಿರಾರು ಕೋಟಿ ರೂ. ಮೌಲ್ಯದ ಗ್ಯಾರಂಟಿಗಳನ್ನು ನೀಡಿರುವ ರಾಜ್ಯ ಸರ್ಕಾರ, ಅದರ ಮುಂದುವರಿದ ಭಾಗವಾಗಿ ಆರ್ಥಿಕ ಚಟುವಟಿಕೆ ವೃದ್ಧಿಗೆ ಹತ್ತು ಹಲವು ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.

ಮುಖ್ಯಮಂತ್ರಿ ಸೂಚನೆ ಮೇರೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಬಹುಆಯಾಮದಲ್ಲಿ ಯೋಜನೆ ರೂಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಭೆಗಳನ್ನು ನಡೆಸಲಾಗಿದೆ. ಇದೊಂದು ದೂರಗಾಮಿ ಯೋಜನೆಯಾಗಿರುವುದರಿಂದ ಎಚ್ಚರಿಕೆಯಿಂದ ಹೆಜ್ಜೆಯನ್ನಿಡಲಾಗುತ್ತಿದೆ. ಗ್ಯಾರಂಟಿಗಳಿಗಾಗಿ ಈ ವರ್ಷ ಅಂದಾಜು 38 ಸಾವಿರ ಕೋಟಿ ರೂ.ಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ. ಮುಂದಿನ ವರ್ಷದಿಂದ ಈ ಮೊತ್ತ 50 ಸಾವಿರ ಕೋಟಿ ರೂ. ಮೀರಲಿದೆ. ಯುಬಿಐ ಅನ್ವಯ ಪ್ರತಿ ಬಿಪಿಎಲ್ ಕುಟುಂಬಕ್ಕೆ ವಾರ್ಷಿಕ ಅಂದಾಜು 60 ಸಾವಿರ ರೂ.ಗಳಷ್ಟು ಮೊತ್ತ ಲಭ್ಯವಾಗುತ್ತದೆ. ಆ ಹಣ ಮತ್ತೆ ಮಾರುಕಟ್ಟೆಗೆ ಮರಳಿ ಆರ್ಥಿಕತೆಯನ್ನು ಬೆಳೆಸಬೇಕು, ಆ ಮೂಲಕ ರಾಜ್ಯದ ಜಿಡಿಪಿ ವೃದ್ಧಿಯಾಗಬೇಕು.

ಏನೇ ಯೋಜನೆ ರೂಪಿಸಿದರೂ ಅದು ರಾಜ್ಯ ಸರ್ಕಾರದ ಗುರಿಯಾಗಿರುವ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಉದ್ದೇಶ ಈಡೇರಿಸುವ ಕಡೆ ಇರಬೇಕು ಎಂಬುದು ಸರ್ಕಾರದ ಉದ್ದೇಶ. ಸರ್ಕಾರ ರೂಪಿಸುತ್ತಿರುವ ಈ ಯೋಜನೆ ಅಷ್ಟು ಸುಲಭದಲ್ಲಿ ಜಾರಿಯಾಗದು. ಸಾಕಷ್ಟು ದತ್ತಾಂಶ ಸಂಗ್ರಹಣೆಯಾಗಬೇಕು, ವಿವಿಧ ಇಲಾಖೆಗಳು ಕಾರ್ಯತಂತ್ರಗಳನ್ನು ರೂಪಿಸಬೇಕು, ಅದಕ್ಕಾಗಿಯೇ ಹಿಮ್ಮುಖ ಕಾರ್ಯತಂತ್ರ ಅಳವಡಿಸಿಕೊಂಡು ಮುನ್ನಡೆಯುವ ನಿರ್ಧಾರ ಸರ್ಕಾರದ್ದು.

ಎಂಎಸ್​ಐಎಲ್​ಗೆ ಜವಾಬ್ದಾರಿ: ಆರ್ಥಿಕ ಚಟುವಟಿಕೆಗಳ ವೃದ್ಧಿಗೆ ಏನೇನು ಮಾಡಬೇಕು, ಯಾವ ರೀತಿ ಮಾರುಕಟ್ಟೆ ಒದಗಿಸಬೇಕು ಎಂಬ ಬಗ್ಗೆ ಯೋಜನಾ ವರದಿ ಸಿದ್ಧಪಡಿಸುವ ಜವಾಬ್ದಾರಿಯನ್ನು ಸರ್ಕಾರದ ಸಂಸ್ಥೆಯಾದ ಎಂಎಸ್​ಐಎಲ್​ಗೆ ವಹಿಸಲಾಗಿದೆ. ಮುಂದೆಯೂ ಇದೇ ಸಂಸ್ಥೆಯ ಮೂಲಕವೇ ಯೋಜನೆ ಜಾರಿಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಹೈವೇ ಹಬ್​ಗಳ ನಿರ್ಮಾಣ: ಪ್ರಮುಖವಾಗಿ ಹೆದ್ದಾರಿಗಳಲ್ಲಿ ‘ಶಾಪ್ ಎನ್ ಶಾಪ್’ ಮಾದರಿಯಲ್ಲಿ ಹೈವೇ ಹಬ್​ಗಳ ನಿರ್ಮಾಣ ಮಾಡಲಾಗುತ್ತದೆ. ಹೆದ್ದಾರಿಗಳ ಜತೆಗೆ ರಾಜ್ಯದ ಪ್ರಮುಖ ದೇವಾಲಯಗಳು, ಪ್ರವಾಸಿ ಸ್ಥಳಗಳಲ್ಲಿ ಮಾಲ್​ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅಲ್ಲಿ ಸರ್ಕಾರದಿಂದಲೇ ಕೃಷಿ ಉತ್ಪನ್ನಗಳು, ಸ್ವಸಹಾಯ ಸಂಘಗಳು, ಪಿಎಂಎಫ್​ಎಂಪಿ, ಒಡಿಒಪಿ ಯೋಜನೆಗಳ ಫಲಾನುಭವಿಗಳು, ಕರಕುಶಲ ವಸ್ತುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸ್ಥಳೀಯ ಆಹಾರ ಪದ್ಧತಿಯ ಹೋಟೆಲ್​ಗಳಿಗೂ ಇಲ್ಲಿ ಅವಕಾಶ ಇರುತ್ತದೆ.

ರಾಜ್ಯದ ಎಲ್ಲ ಭಾಗಗಳಲ್ಲಿಯೂ ಹೈವೇ ಹಬ್​ಗಳ ನಿರ್ಮಾಣ ಸಾಧ್ಯವಾಗುವುದಿಲ್ಲ. ಹಂತಹಂತವಾಗಿ ಖಾಸಗಿ ಬಂಡವಾಳ ಆಕರ್ಷಣೆ ಮಾಡುವ ಮೂಲಕ ನಿರ್ಮಾಣ ಮಾಡಲಾಗುತ್ತದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಬ್ರ್ಯಾಂಡಿಂಗ್​ ವ್ಯವಸ್ಥೆ: ಉತ್ತಮ ಗುಣಮಟ್ಟದ ಕೃಷಿ ಹಾಗೂ ಇತರೆ ಉತ್ಪನ್ನಗಳಿಗೆ ನೆರೆ ರಾಜ್ಯದಲ್ಲಿಯೂ ಬೇಡಿಕೆ ಇದೆ. ಆದರೆ ಕೆಲವೆಡೆ ಖಾಸಗಿಯವರು ಕಲಬೆರಕೆ ಮಾಡಿ ಮಾರಾಟ ಮಾಡುವುದನ್ನು ತಡೆಯಲು ಬ್ರಾ್ಯಂಡಿಂಗ್ ಹಾಗೂ ಜಿಯೋಟ್ಯಾಗ್ ಮಾಡಲು ನಿರ್ಧರಿಸಲಾಗಿದೆ. ಎಂಎಸ್​ಐಎಲ್ ಹೊರ ರಾಜ್ಯದಲ್ಲಿ ಮಳಿಗೆಗಳನ್ನು ತೆರೆದು ಮಾರಾಟಕ್ಕೆ ಕಾರ್ಯತಂತ್ರ ರೂಪಿಸಲು ಸೂಚಿಸಲಾಗಿದೆ.

ಮನೆಯಲ್ಲಿ ಉತ್ಪನ್ನಗಳ ತಯಾರಿ: ಕೇರಳದಲ್ಲಿ ಮನೆಮನೆಗಳಲ್ಲಿ ತಯಾರಾಗುವ ಚಾಕೋಲೇಟ್​ಗಳಿಗೆ ಉತ್ತಮ ಬೇಡಿಕೆ ಇದೆ. ರಾಜ್ಯದಲ್ಲಿ 50 ಲಕ್ಷ ಎಕರೆಯಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಆದರೆ ಅದು ಪೌಲ್ಟ್ರಿಗೆ ಹೋಗುತ್ತಿದೆ. ಹೆಚ್ಚಿನ ಪೌಷ್ಟಿಕಾಂಶ ಹೊಂದಿರುವುದರಿಂದ ಅದರ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟದ ಬಗ್ಗೆಯೂ ಆಲೋಚನೆ ಇದೆ.

ಕೈಗಾರಿಕಾ ಶೆಡ್​ಗಳ ನಿರ್ಮಾಣ: ಆಹಾರ ಸಂಸ್ಕರಣೆ ಇಲ್ಲಿ ಬಹಳ ಮುಖ್ಯವಾದ ಕಾರ್ಯವಾಗಿದೆ. ಅದಕ್ಕಾಗಿ 2023-28ರ ಅವಧಿಯ ಆಹಾರ ಸಂಸ್ಕರಣಾ ನೀತಿಯನ್ನು ತರಲು ನಿರ್ಧರಿಸಲಾಗಿದೆ. ಅಂದಾಜು 10 ಉತ್ಪನ್ನಗಳ ಸಂಗ್ರಹಣೆ, ಮೌಲ್ಯವರ್ಧನೆ, ಗುಣಮಟ್ಟದ ಕಮಾಡಿಟಿ ಪ್ರೊಫೈಲ್ ಮಾಡಲಾಗುತ್ತದೆ. ಇದರ ಜತೆಗೆ ಕಿರು ಆಹಾರ ಸಂಸ್ಕರಣೆಗಾಗಿ ಕೆಐಎಡಿಬಿ ಜಾಗದಲ್ಲಿ ಕೈಗಾರಿಕಾ ಶೆಡ್​ಗಳ ನಿರ್ವಣಕ್ಕೆ ಉದ್ದೇಶಿಸಿದೆ. ಆ ನಂತರ ಇ-ಮಾರುಕಟ್ಟೆ, ಉಗ್ರಾಣ, ಲಾಜಿಸ್ಟಿಕ್ ಬೆಂಬಲ ನೀಡುವ ಕಡೆ ಗಮನ ಹರಿಸಲಾಗುತ್ತದೆ. ಕೆಫೆಕ್​ನಲ್ಲಿ ಕೃಷಿ ರಫ್ತುಕೋಶ ತೆರೆಯುವ ಮೂಲಕ ರಫ್ತು ಉತ್ತೇಜನಕ್ಕೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ.

ಅನುಕೂಲ ಹೇಗೆ?: ಗ್ಯಾರಂಟಿಗಳಿಂದ ಹಣಕಾಸಿನ ಆದಾಯ ಪಡೆದಿರುವ ಬಡ ಕುಟುಂಬಗಳು ಇಲ್ಲಿನ ಗ್ರಾಹಕರಾಗಿ ಉತ್ತಮ ಗುಣಮಟ್ಟದ ವಸ್ತುಗಳನ್ನು ಪಡೆಯಲಿದ್ದಾರೆ. ಜತೆಗೆ ಪ್ರವಾಸಕ್ಕೆ ಬರುವ ದೇಶ ವಿದೇಶಗಳ ಗ್ರಾಹಕರಿಗೆ ಸರ್ಕಾರದಿಂದಲೇ ಉತ್ತಮ ಉತ್ಪನ್ನಗಳನ್ನು ನೀಡುವ ಮೂಲಕ ಆರ್ಥಿಕ ಚಟುವಟಿಕೆಗಳನ್ನು ವೃದ್ಧಿಸುವುದು ಸರ್ಕಾರದ ಆಶಯ.

ಏನೇನು ಕಾರ್ಯತಂತ್ರ?: ಕೃಷಿ, ವಾಣಿಜ್ಯೋದ್ಯಮ ಚಟುವಟಿಕೆಗಳನ್ನು ಒಳಗೊಂಡಂತೆ ಕಾರ್ಯತಂತ್ರವನ್ನು ರೂಪಿಸಲಾಗುತ್ತದೆ. ಕೃಷಿ ಉತ್ಪನ್ನಗಳ ಸಂಸ್ಕರಣೆ, ಮಾರಾಟ, ಕರಕುಶಲ ವಸ್ತುಗಳ ಮಾರಾಟಕ್ಕೆ ವೇದಿಕೆ, ಬ್ರಾ್ಯಂಡಿಂಗ್, ಜಿಯೋಟ್ಯಾಗ್, ಹೊರ ರಾಜ್ಯಗಳಲ್ಲಿಯೂ ರಾಜ್ಯದ ಉತ್ಪನ್ನಗಳಿಗೆ ಮಾರುಕಟ್ಟೆ, ಆಹಾರ ಸಂಸ್ಕರಣಾ ಕ್ಷೇತ್ರಕ್ಕೆ ಖಾಸಗಿ ಬಂಡವಾಳ ಆಕರ್ಷಣೆ ಸೇರಿ ಹತ್ತು ಹಲವು ತಂತ್ರಗಳನ್ನು ರೂಪಿಸಲಾಗುತ್ತಿದೆ.

ಈ ಕಲ್ಪನೆ ಏಕೆ?: ಆರ್ಥಿಕ ಚಟುವಟಿಕೆಯನ್ನು ವೃದ್ಧಿಸುವುದರ ಜತೆಗೆ ಪ್ರತಿವರ್ಷ ರೈತರ ಬಳಿಯಲ್ಲಿ ಮಾರಲರ್ಹವಾದ ಅಂದಾಜು 47 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಉಳಿಯುತ್ತದೆ. ಅದಕ್ಕೆ ಮಾರುಕಟ್ಟೆ ಕಂಡುಕೊಳ್ಳಬೇಕಿದೆ. ಶೀತಲಗೃಹ ಅಥವಾ ಉಗ್ರಾಣ ಗಳನ್ನು ನಿರ್ವಿುಸಿ ದಾಸ್ತಾನು ಮಾಡುವುದಕ್ಕಿಂತ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಮಾರುಕಟ್ಟೆ ಕಂಡುಕೊಳ್ಳುವುದು ರೈತರಿಗೆ ಅನುಕೂಲವೆಂಬುದು ಸರ್ಕಾರದ ಆಶಯ. ರಾಜ್ಯದ ಉತ್ಪನ್ನಗಳಾದ ಬೆಲ್ಲ, ಮೆಣಸಿನಕಾಯಿ, ಕೊಬ್ಬರಿ ಮೊದಲಾದ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲಾಗುತ್ತದೆ.

  • ಹೈವೇ ಹಬ್​ಗಳ ನಿರ್ಮಾಣದ ಭಾಗ
  • ದೇವಾಲಯ, ಪ್ರವಾಸಿ ಸ್ಥಳಗಳ ಬಳಿಯಲ್ಲಿಯೂ ಶಾಪ್ ಎನ್ ಶಾಪ್ ಸ್ಥಾಪನೆ
  • ರಾಜ್ಯದ ಉತ್ಪನ್ನಗಳಿಗೆ ಹೊರ ರಾಜ್ಯದಲ್ಲೂ ಮಾರುಕಟ್ಟೆ ವ್ಯವಸ್ಥೆ ಮಾಡುವುದು
  • ಮಾರಲಾಗದೆ ರೈತರ ಬಳಿ ಉಳಿಯುವ ಸುಮಾರು 45ಲಕ್ಷ ಟನ್ ಆಹಾರ ಧಾನ್ಯಕ್ಕೂ ಮಾರುಕಟ್ಟೆ ಒದಗಿಸುವುದು
  • ಕೃಷಿ ರಫ್ತು ಕೋಶದ ಸ್ಥಾಪನೆ, ಕಿರು ಆಹಾರ ಸಂಸ್ಕರಣೆ ಶೆಡ್​ಗಳ ನಿರ್ಮಾಣ
  • ಕೇರಳದ ಮನೆಗಳ ಚಾಕೋಲೇಟ್ ಮಾದರಿ ಮೆಕ್ಕೆಜೋಳದಿಂದ ಉತ್ಪನ್ನಗಳ ತಯಾರಿ
  • ಆಹಾರ ಸಂಸ್ಕರಣಾ ನೀತಿ ಸಿದ್ಧಪಡಿಸುವುದು
  • ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ರೂಪುರೇಷೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net