

ನವದೆಹಲಿ: ಬೋಯಿಂಗ್ ಸ್ಟಾರ್ಲೈನರ್ ಸ್ಪೇಸ್ ಕ್ಯಾಪ್ಸುಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಕಾರಣ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್)ದಲ್ಲಿರುವ ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಭೂಮಿಗೆ ಆಗಮಿಸುವುದು ವಿಳಂಬವಾಗಲಿದೆ ಎಂಬ ಸುದ್ದಿ ಈಗಾಗಲೇ ಎಲ್ಲರಿಗೂ ತಿಳಿದಿದೆ. ಇದೀಗ ಬಾಹ್ಯಾಕಾಶ ನಿಲ್ದಾಣದಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿರುವುದಾಗಿ ವರದಿಯಾಗಿದೆ.
ಬೋಯಿಂಗ್ ಸ್ಟಾರ್ಲೈನರ್ ಸ್ಪೇಸ್ ಕ್ಯಾಪ್ಸುಲ್ನಿಂದ ಸೋನಾರ್ ರೀತಿಯ ವಿಚಿತ್ರ ಹಾಗೂ ನಿಗೂಢ ಶಬ್ದ ಕೇಳುತ್ತಿದೆ ಎಂದು ಗಗನಯಾತ್ರಿ ಬಚ್ ವಿಲ್ಮೋರ್ ತಿಳಿಸಿರುವುದಾಗಿ ನಾಸಾ ವರದಿ ಮಾಡಿದೆ.
ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಬೋಯಿಂಗ್ ಸ್ಟಾರ್ಲೈನರ್ ನೌಕೆಯನ್ನು ಯಾವುದೇ ಸಿಬ್ಬಂದಿ ಇಲ್ಲದೆ ವಾಪಸ್ ಭೂಮಿಗೆ ಕರೆಸಿಕೊಳ್ಳಲು ಅನ್ಡಾಕ್ ಶೆಡ್ಯೂಲ್ ಮಾಡಿದ ದಿನದ ಬೆನ್ನಲ್ಲೇ ಈ ವಿಚಿತ್ರ ಘಟನೆ ನಡೆದಿದೆ. ತಾಂತ್ರಿಕ ದೋಷ ಕಾರಣ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲೇ ಸಿಲುಕಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಭೂಮಿಗೆ ಮರಳಬೇಕಿತ್ತು. ಆದರೆ, ಬೋಯಿಂಗ್ ಸ್ಟಾರ್ಲೈನರ್ ಕೈಕೊಟ್ಟ ಹಿನ್ನೆಲೆ ಇಬ್ಬರು ಗಗನಯಾತ್ರಿಗಳು ಭೂಮಿಗೆ ಬರುವುದು ವಿಳಂಬವಾಗಲಿದೆ. ಇತ್ತೀಚೆಗೆ ಅಮೆರಿಕದ ಹೌಸ್ಟನ್ನಲ್ಲಿರುವ ನಾಸಾದ ಮಿಷನ್ ಕಂಟ್ರೋಲ್ ಸಂಪರ್ಕಿಸಿ, ವಿಚಿತ್ರ ಶಬ್ದ ಕೇಳಿಬರುತ್ತಿರುವುದಾಗಿ ವಿಲ್ಮೋರ್ ವರದಿ ಮಾಡಿದ್ದಾರೆ.
ನಾಸಾ ಜತೆಗಿನ ಧ್ವನಿಮುದ್ರಿತ ಸಂಭಾಷಣೆಯಲ್ಲಿ ವಿಲ್ಮೋರ್ ಅವರು ಆ ವಿಚಿತ್ರ ಶಬ್ದವನ್ನು ಪುನರಾವರ್ತಿತ, ಜಲಾಂತರ್ಗಾಮಿ ಸೋನಾರ್ ಅನ್ನು ನೆನಪಿಸುವ ಅಥವಾ ಬಾಹ್ಯಾಕಾಶ ನೌಕೆಯ ಹೊರಗಿನಿಂದ ಟ್ಯಾಪಿಂಗ್ ಮಾಡಿದಂತಹ ಧ್ವನಿ ಎಂದು ವಿವರಿಸಿದ್ದಾರೆ. ಸ್ಟಾರ್‌ಲೈನರ್ ನೌಕೆಯ ಆಂತರಿಕ ಸ್ಪೀಕರ್‌ಗೆ ಮೈಕ್ರೊಫೋನ್ ಅನ್ನು ಹಿಡಿದಾಗ ಈ ವಿಲಕ್ಷಣವಾದ ಶಬ್ದ ಕೇಳಿದೆ. ನಾಸಾದ ಮಿಷನ್ ಕಂಟ್ರೋಲ್ ಈ ಧ್ವನಿಯನ್ನು ದೃಢಪಡಿಸಿದ್ದು, ಒಂದು ರೀತಿಯ ಸೋನಾರ್ ಶಬ್ದ ಎಂದು ಹೇಳಿದೆ. ಈ ಘಟನೆಯಿಂದ ಆತಂಕ ಇನ್ನು ಹೆಚ್ಚಾಗಿದೆ. ಇಬ್ಬರು ಗಗನಯಾತ್ರಿಗಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ಈಗಾಗಲೇ ಇಬ್ಬರು ಬಾಹ್ಯಾಕಾಶದಲ್ಲಿ ಸಿಲುಕಿ ಮೂರು ತಿಂಗಳು ಕಳೆದಿವೆ. ಇದರಿಂದ ಅವರ ಆರೋಗ್ಯದ ಕಾಳಜಿಯೂ ಪ್ರಶ್ನೆಯಾಗಿದೆ.
ಬೋಯಿಂಗ್ ಸ್ಟಾರ್ಲೈನರ್ಗೆ ಏನಾಯಿತು? ಥಸ್ಟರ್ ವಿಫಲ ಮತ್ತು ಹೀಲಿಯಂ ಸೋರಿಕೆಯಂತಹ ಸಮಸ್ಯೆಗಳನ್ನು ಒಳಗೊಂಡಂತೆ ಸದ್ಯಕ್ಕೆ ಬೋಯಿಂಗ್ ಸ್ಟಾರ್ಲೈನರ್ ಕ್ಯಾಪ್ಸುಲ್ನಲ್ಲಿ ಕಾಣಿಸಿಕೊಂಡಿರುವ ತೊಂದರೆಗಳನ್ನು ನಿವಾರಿಸಲು ಬೋಯಿಂಗ್ ನಿರಂತರವಾಗಿ ಪರಿಶೀಲನೆ ನಡೆಸುತ್ತಿದೆ. ಇತ್ತೀಚಿಗೆ ಬಂದ ಪರೀಕ್ಷೆಯ ಡೇಟಾ ಪ್ರಕಾರ ಕ್ಯಾಪ್ಸುಲ್ನಲ್ಲಿನ ಥ್ರಸ್ಟರ್‌ಗಳ ಮಿತಿಮೀರಿದ ಶಾಖವು ಟೆಫ್ಲಾನ್ ಸೀಲ್‌ಗಳ ತಿರುಚಿಗೆ ಕಾರಣವಾಗಿದೆ ಮತ್ತು ಪ್ರೊಪೆಲ್ಲಂಟ್ ಹರಿವನ್ನು ನಿರ್ಬಂಧಿಸಿದ್ದು, ಒತ್ತಡವನ್ನು ದುರ್ಬಲಗೊಳಿಸುತ್ತಿದೆ. ಹೀಗಾಗಿ ಸಿಬ್ಬಂದಿ ಕರೆತರಲು ಸ್ಟಾರ್ಲೈನರ್ ಕ್ಯಾಪ್ಸುಲ್ಸುರಕ್ಷಿತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಬೋಯಿಂಗ್ ಕ್ಯಾಪ್ಸುಲ್ ಅನ್ನು ಸಿಬ್ಬಂದಿಯಿಲ್ಲದೆ ವಾಪಸ್ ಭೂಮಿ ಕರೆತರಲು ನಾಸಾ ಮುಂದಾಗಿದೆ.
ಇನ್ನು ಈ ಘಟನೆ ಬೋಯಿಂಗ್‌ಗೆ ಹಿನ್ನಡೆಯಾಗಿದೆ. ನಿರ್ವಹಣೆಯ ಸಮಸ್ಯೆಗಳು ಮತ್ತು ಇಂಜಿನಿಯರಿಂಗ್ ಸಮಸ್ಯೆಗಳನ್ನು ಒಳಗೊಂಡಂತೆ ಸ್ಟಾರ್ಲೈನರ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸ್ಟಾರ್‌ಲೈನರ್ ಕ್ಯಾಪ್ಸುಲ್ ಅಭಿವೃದ್ಧಿ ಪಡಿಸಲು ಪ್ರಸ್ತುತ ಪರೀಕ್ಷಾ ಕಾರ್ಯಾಚರಣೆಗಾಗಿ 125 ಮಿಲಿಯನ್ ಡಾಲರ್ ಸೇರಿದಂತೆ ಬೋಯಿಂಗ್‌ಗೆ 2016 ರಿಂದ 1.6 ಶತಕೋಟಿ ಡಾಲರ್ ವೆಚ್ಚವಾಗಿದೆ.
ಇನ್ನು ವಿಲ್ಮೋರ್ ಮತ್ತು ವಿಲಿಯಮ್ಸ್‌ಗಾಗಿ ಮುಂಬರುವ ಕ್ರೂ ಡ್ರ್ಯಾಗನ್ ಉಡಾವಣೆಯಲ್ಲಿ ಎರಡು ಸ್ಥಾನಗಳನ್ನು ಖಾಲಿ ಬಿಡಲು ನಾಸಾ ಸ್ಪೇಸ್‌ಎಕ್ಸ್‌ನೊಂದಿಗೆ ಚರ್ಚಿಸಿದೆ. 2025ರ ಆರಂಭದಲ್ಲಿ ಗಗನಯಾತ್ರಿಗಳನ್ನು ಭೂಮಿಗೆ ಮರಳಿ ತರಲು 2024ರ ಸೆಪ್ಟೆಂಬರ್ನಲ್ಲಿ ಉಡಾವಣೆ ಮಾಡಲು ನಿಗದಿಪಡಿಸಲಾದ ಸ್ಪೇಸ್ಎಕ್ಸ್ನ ಕ್ರ್ಯೂ-9 ಮಿಷನ್ ಅನ್ನು ಬಳಸುವುದನ್ನು ಈ ಯೋಜನೆ ಒಳಗೊಂಡಿದೆ. (ಏಜೆನ್ಸೀಸ್)