4ನೇ ದಿನವೂ ಷೇರುಪೇಟೆ ಏರಿಕೆ

ವಿಜಯವಾಣಿ (8)
Published on

ಮುಂಬೈ: ಸತತ ನಾಲ್ಕನೇ ದಿನವೂ ಭಾರತೀಯ ಷೇರುಪೇಟೆ ಏರುಗತಿಯಲ್ಲಿದ್ದು ಗುರುವಾರ ಶೇಕಡ 1ರಷ್ಟು ಏರಿಕೆ ದಾಖಲಿಸಿದೆ. ದಿನದ ವಹಿವಾಟಿನ ಮಧ್ಯೆ 1007 ಅಂಕ ಏರಿ 76,456ಕ್ಕೆ ತಲುಪಿದ್ದ ಸೆನ್ಸೆಕ್ಸ್ ಕೊನೆಯಲ್ಲಿ 899 ಅಂಕ ಏರಿಕೆ ದಾಖಲಿಸಿ 76,348ಕ್ಕೆ ಸ್ಥಿರವಾಯಿತು.

ನಿಫ್ಟಿ 283 ಅಂಕ ಏರಿಕೆಯಾಗಿ 23,190ಕ್ಕೆ ತಲುಪಿತು. ಭಾರ್ತಿ ಏರ್​ಟೆಲ್ ಷೇರಿನ ಬೆಲೆ ಶೇ. 4.17ರಷ್ಟು ಭಾರಿ ಹೆಚ್ಚಳ ಕಂಡಿತು. ಟೈಟನ್, ಟಾಟಾ ಕನ್ಸಲ್ಟನ್ಸಿ, ಹಿಂದುಸ್ತಾನ್ ಯುನಿಲಿವರ್, ಇನ್​ಫೋಸಿಸ್, ನೆಸ್ಲೆ, ರಿಲಯನ್ಸ್ ಇಂಡಸ್ಟ್ರೀಸ್, ಮಹಿಂದ್ರಾ ಆಂಡ್ ಮಹಿಂದ್ರಾ, ಎಚ್​ಡಿಎಫ್​ಸಿ ಬ್ಯಾಂಕ್, ಟಾಟಾ ಮೋಟರ್ಸ್ ಷೇರುಗಳೂ ಲಾಭ ಮಾಡಿದವು. ಇಂಡಸ್​ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ನಷ್ಟಕ್ಕೀಡಾದವು.

ಅಮೆರಿಕದ ಫೆಡರಲ್ ರಿಸರ್ವ್​ನ ಪ್ರಸಕ್ತ ವರ್ಷದ ಬಡ್ಡಿ ದರ ನಿರ್ಧಾರದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆತಿದ್ದಲ್ಲದೆ ರಿಲಯನ್ಸ್ ಇಂಡಸ್ಟ್ರೀಸ್, ಭಾರ್ತಿ ಏರ್​ಟೆಲ್, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳ ಷೇರು ಖರೀದಿಗೆ ಹೂಡಿಕೆದಾರರು ಮುಗಿಬಿದ್ದಿದ್ದು ಏರಿಕೆಗೆ ಕಾರಣವಾಗಿದೆ. ಕಳೆದ ನಾಲ್ಕು ದಿನಗಳ ಏರುಗತಿಯಿಂದಾಗಿ ಹೂಡಿಕೆದಾರರ ಸಂಪತ್ತಿನ ಪ್ರಮಾಣ 17.43 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net