ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ ಷೇರುಪೇಟೆ; ಬ್ಯಾಂಕಿಂಗ್, ತೈಲ, ಆಟೋ ಷೇರಿಗೆ ಶುಕ್ರದೆಸೆ

Share Market
Published on

ಮುಂಬೈ: ಕೇಂದ್ರ ಸರ್ಕಾರಕ್ಕೆ 2.1 ಲಕ್ಷ ಕೋಟಿ ರೂ. ಲಾಭಾಂಶ ನೀಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಘೊಷಿಸಿದ ಬೆನ್ನಲ್ಲೇ ಷೇರುಮಾರುಕಟ್ಟೆಯಲ್ಲಿ ಗುರುವಾರ ಗೂಳಿಯ ನೆಗೆತ ಭಾರಿ ಸಂಚಲನ ಸೃಷ್ಟಿಸಿತು. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ಶೇ. 1.6ಕ್ಕಿಂತ ಹೆಚ್ಚು ಏರಿಕೆಯಾದವಲ್ಲದೆ, ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿ ದಾಖಲೆ ಬರೆದವು.

ಬ್ಯಾಂಕಿಂಗ್, ತೈಲ ಮತ್ತು ಆಟೊಮೊಬೈಲ್ ಷೇರುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದವು. ಜ. 29ರ ನಂತರ ಇಂದು ಷೇರುಪೇಟೆ ಒಂದೇ ದಿನದಲ್ಲಿ ಅತಿ ಹೆಚ್ಚು ಏರಿಕೆ ಕಂಡು 75 ಸಾವಿರ ಅಂಕಗಳ ಮಟ್ಟವನ್ನು ಮೀರಿ ಮುನ್ನಡೆಯಿತು. ದಿನದ ವಹಿವಾಟಿನ ಕೊನೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ) ಸೆನ್ಸೆಕ್ಸ್ 1,196.98 ಅಂಕ ಏರಿಕೆಯಾಗಿ (ಶೇ. 1.61 ಹೆಚ್ಚಳ) 75,418.04ರಲ್ಲಿ ಕೊನೆಗೊಂಡಿತು. ದಿನದ ಮಧ್ಯೆ ಅದು 1,278.85 ಅಂಕಗಳಷ್ಟು ಹೆಚ್ಚಳವಾಗಿ (ಶೇ. 1.72 ಏರಿಕೆ) 75,499.91ಕ್ಕೆ ತಲುಪಿತ್ತು. ಇದು ಈವರೆಗಿನ ವಹಿವಾಟಿನಲ್ಲೇ ಅತ್ಯಂತ ಗರಿಷ್ಠ ಅಂಕವಾಗಿದೆ.

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ನಿಫ್ಟಿ ದಿನದ ಮಧ್ಯದಲ್ಲಿ 23,000 ಅಂಕಕ್ಕೆ ಜಿಗಿದು ದಾಖಲೆ ನಿರ್ವಿುಸಿತು. ದಿನದ ಕೊನೆಯಲ್ಲಿ 369.85 ಅಂಕ ಏರಿಕೆಯಾಗಿ (ಶೇ. 1.64) 22,967.65ಕ್ಕೆ ನಿಂತಿತು. ಇಂಟ್ರಾ ಡೇ ವಹಿವಾಟಿನಲ್ಲಿ 395.8 ಅಂಕ ಏರಿ (ಶೇ. 1.75) 22,993ಕ್ಕೆ ತಲುಪಿ ದಾಖಲೆ ಬರೆಯಿತು.

ಏಷ್ಯಾದ ಇತರ ಮಾರುಕಟ್ಟೆಗಳ ಪೈಕಿ ಟೋಕಿಯೋ ಉತ್ತಮ ಪ್ರದರ್ಶನ ನೀಡಿದರೆ, ಸಿಯೋಲ್, ಶಾಂಘೈ, ಹಾಂಗ್​ಕಾಂಗ್​ನಲ್ಲಿ ಷೇರುಪೇಟೆ ವ್ಯವಹಾರ ನಿರಾಶಾದಾಯಕವಾಗಿತ್ತು. ವಾಲ್​ಸ್ಟ್ರೀಟ್ ಮಾರುಕಟ್ಟೆಯೂ ಋಣಾತ್ಮಕವಾಗಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್​ಐಐ) ಬುಧವಾರ 686.04 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಸ್ಟಾಕ್ ಎಕ್ಸ್​ಚೇಂಜ್ ದತ್ತಾಂಶ ತಿಳಿಸಿದೆ. ಬುಧವಾರ ಬಿಎಸ್​ಇ ಸೆನ್ಸೆಕ್ಸ್ 267.75 ಅಂಕ ಏರಿ (ಶೇ. 0.36) 74221.06ಕ್ಕೆ ನಿಂತಿತ್ತು. ಎನ್​ಎಸ್​ಇ ನಿಫ್ಟಿ 68.75 ಅಂಕ ಹೆಚ್ಚಳವಾಗಿ (ಶೇ. 0.31) 22,597.80ಕ್ಕೆ ನಿಂತಿತ್ತು.

ಲಾಭ ಪಡೆದ ಕಂಪನಿಗಳು: ಇಂದಿನ ವಹಿವಾಟಿನಲ್ಲಿ ಅತಿ ಹೆಚ್ಚು ಲಾಭ ಪಡೆದ ಕಂಪನಿಗಳಲ್ಲಿ ಮಹಿಂದ್ರಾ ಆಂಡ್ ಮಹಿಂದ್ರಾ, ಲಾರ್ಸೆನ್ ಆಂಡ್ ಟೂಬ್ರೊ, ಆಕ್ಸಿಸ್ ಬ್ಯಾಂಕ್, ಮಾರುತಿ, ಅಲ್ಟ್ರಾಟೆಕ್ ಸಿಮೆಂಟ್, ಇಂಡಸ್​ಇಂಡ್ ಬ್ಯಾಂಕ್, ಭಾರ್ತಿ ಏರ್​ಟೆಲ್, ಐಸಿಐಸಿಐ ಬ್ಯಾಂಕ್, ಟೈಟನ್, ಟಾಟಾ ಕನ್ಸಲ್ಟನ್ಸಿ ಸರ್ವಿಸಸ್, ರಿಲಯನ್ಸ್ ಇಂಡಸ್ಟ್ರಿ ಪ್ರಮುಖವಾಗಿವೆ. ಸನ್ ಫಾರ್ವ, ಪವರ್​ಗ್ರಿಡ್, ಎನ್​ಟಿಪಿಸಿ ಹಿಂದೆ ಬಿದ್ದ ಕಂಪನಿಗಳಲ್ಲಿ ಸೇರಿವೆ.

ಏರಿಕೆಗೆ ಕಾರಣವೇನು?: ಮಾ. 31ಕ್ಕೆ ಅಂತ್ಯವಾದ ಆರ್ಥಿಕ ವರ್ಷಕ್ಕೆ 2.1 ಲಕ್ಷ ಕೋಟಿ ರೂ. ಲಾಭಾಂಶವನ್ನು ತಾನು ಕೇಂದ್ರ ಸರ್ಕಾರಕ್ಕೆ ನೀಡುವುದಾಗಿ ಆರ್​ಬಿಐ ಬುಧವಾರ ಘೊಷಿಸಿದ್ದು ಷೇರುಪೇಟೆಯ ಏರಿಕೆಗೆ ಪ್ರಮುಖ ಕಾರಣ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಈ ಮೊತ್ತ ಕಳೆದ ಬಜೆಟ್​ನಲ್ಲಿ ಕೇಂದ್ರ ನಿರೀಕ್ಷಿಸಿದ್ದಕ್ಕಿಂತ ದುಪ್ಪಟ್ಟು. ವಿವಿಧ ಯೋಜನೆಗಳಿಗೆ ಹೆಚ್ಚು ಹಣ ವಿನಿಯೋಗಿಸಲು ಹೊಸ ಸರ್ಕಾರಕ್ಕೆ ಇದರಿಂದ ಸಹಾಯವಾಗಲಿದೆ.

ಮಾಲ್ಡೀವ್ಸ್​ನಲ್ಲೂ ಭಾರತದ ರುಪೇ ಸೇವೆ ಶೀಘ್ರ: ದ್ವಿಪಕ್ಷೀಯ ಸಂಬಂಧದಲ್ಲಿ ಉಂಟಾದ ತ್ವೇಷಮಯ ಪರಿಸ್ಥಿತಿಯಿಂದ ತೀವ್ರ ಮುಖಭಂಗಕ್ಕೆ ಒಳಗಾಗಿರುವ ಮಾಲ್ಡೀವ್ಸ್ ಕೊನೆಗೂ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದುವತ್ತ ಒಂದೊಂದೇ ಹೆಜ್ಜೆ ಮುಂದಿಡುತ್ತಿದೆ. ಇದರ ಭಾಗವಾಗಿ, ಸದ್ಯದಲ್ಲೇ ಭಾರತದ ರುಪೇ ಸೇವೆ ಮಾಲ್ಡೀವ್ಸ್​ನಲ್ಲಿ ಅನಾವರಣಗೊಳ್ಳಲಿದೆ. ‘ಭಾರತೀಯ ರೂಪಾಯಿ ಕರೆನ್ಸಿಯಲ್ಲೇ ವ್ಯವಹಾರ ನಡೆಸಲು ಇಲ್ಲಿನ ಉದ್ಯಮಿಗಳು ಆಸಕ್ತರಾಗಿದ್ದಾರೆ. ಇದರಿಂದ ಮಾಲ್ಡೀವ್ಸ್​ನ ರುಫಿಯಾ ಕರೆನ್ಸಿಯ ಬಲ ಹೆಚ್ಚಾಗಲಿದೆ. ಭಾರತದ ಅಧಿಕಾರಿಗಳ ಜತೆ ಈ ಸಂಬಂಧ ಚರ್ಚೆ ನಡೆಯುತ್ತಿದ್ದು, ಸದ್ಯದಲ್ಲೇ ಮಾಲ್ಡೀವ್ಸ್​ನಲ್ಲಿ ರುಪೇ ಅನಾವರಣದ ದಿನಾಂಕ ನಿಗದಿಯಾಗಲಿದೆ’ ಎಂದು ವ್ಯಾಪಾರ ಮತ್ತು ಆರ್ಥಿಕ ಅಭಿವೃದ್ಧಿ ಸಚಿವ ಮೊಹಮದ್ ಸಯೀದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರುಪೇ ಜಾಗತಿಕ ಕಾರ್ಡ್ ಪೇಮೆಂಟ್ ಜಾಲವಾಗಿದ್ದು, ಎಟಿಎಂ, ಪಿಒಎಸ್ ಉಪಕರಣ ಮತ್ತು ಇ-ಕಾಮರ್ಸ್ ವೆಬ್​ಸೈಟ್ ಎಲ್ಲದರಲ್ಲೂ ಸ್ವೀಕಾರಾರ್ಹವಾಗಿದೆ.

ವಿರುಷ್ಕಾಗೆ ನಾಲ್ಕು ಪಟ್ಟು ಲಾಭ: ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್​ನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ದಂಪತಿ ಹೂಡಿದ್ದ 2.5 ಕೋಟಿ ರೂ. ಹೂಡಿಕೆ ಇದೀಗ ನಾಲ್ಕು ಪಟ್ಟು ಹೆಚ್ಚಾಗಿ 10 ಕೋಟಿ ರೂ.ಗೆ ಏರಿದೆ. ಗುರುವಾರ ಮಾರುಕಟ್ಟೆ ಪ್ರವೇಶಿಸಿದ ಗೋ ಡಿಜಿಟ್ ಷೇರಿನ ಬೆಲೆ ರೂ. 300ಕ್ಕಿಂತ ಹೆಚ್ಚಾಯಿತು. 2020ರಲ್ಲಿ ಈ ಕಂಪನಿಯ 2,66,667 ಷೇರುಗಳನ್ನು ವಿರಾಟ್ ಕೊಹ್ಲಿ ತಲಾ ರೂ. 75ರ ದರದಲ್ಲಿ ಖರೀದಿಸಿದ್ದರು. ಅದೇ ರೀತಿ ಅನುಷ್ಕಾ ಕೂಡ 66,667 ಷೇರುಗಳನ್ನು ಖರೀದಿಸಿದ್ದರು.

ವಿಪ್ರೋ ಬದಲು ಅದಾನಿ ಸೇರ್ಪಡೆ?: 30 ಷೇರುಗಳ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ) ಸೆನ್ಸೆಕ್ಸ್​ಗೆ ಅದಾನಿ ಸಮೂಹ ಸಂಸ್ಥೆ ಸೇರ್ಪಡೆಯಾಗುತ್ತದೆ ಎಂಬ ಸುದ್ದಿಯ ಬೆನ್ನಲ್ಲೇ ಆ ಸಮೂಹದ ಕಂಪನಿಗಳ ಪೈಕಿ ಪ್ರಮುಖವಾದ ಅದಾನಿ ಎಂಟರ್​ಪ್ರೖೆಸಸ್​ನ ಷೇರುಗಳ ಮಾರಾಟ ಗುರುವಾರ ಶೇ.8ರಷ್ಟು ಏರಿಕೆ ಕಂಡಿತು. ಬಿಎಸ್​ಇ ತನ್ನ ಅರ್ಧವಾರ್ಷಿಕ ವಿಮರ್ಶೆಯನ್ನು ಶುಕ್ರವಾರ ಘೊಷಿಸುವ ಸಾಧ್ಯತೆ ಇದೆ. ಇಂಡಿಯಾ ಇನ್​ಫೋಲೈನ್ ಫೈನಾನ್ಸ್ ಲಿಮಿಟೆಡ್ ಪರ್ಯಾಯ ಸಂಶೋಧನೆಯ ವರದಿ ಪ್ರಕಾರ, ಸೆನ್ಸೆಕ್ಸ್​ಗೆ ಅದಾನಿ ಸಮೂಹವನ್ನು ಸೇರಿಸಿಕೊಂಡು ವಿಪ್ರೋವನ್ನು ಹೊರಗಿಡುವ ಸಾಧ್ಯತೆ ಇದೆ.

ಕಲ್ಲಿದ್ದಲು ಪೂರೈಕೆ ತಪ್ಪು ಮಾಡಿಲ್ಲ: ತಮಿಳುನಾಡು ವಿದ್ಯುತ್ ಕಂಪನಿಗೆ ಕಲ್ಲಿದ್ದಲು ಪೂರೈಕೆಯಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂಬುದಾಗಿ ಅದಾನಿ ಕಂಪನಿ ಹೇಳಿಕೆ ನೀಡಿ, ಹೂಡಿಕೆದಾರರ ವಿಶ್ವಾಸ ಮರಳಿ ಗಳಿಸುವಲ್ಲಿ ಯಶಸ್ವಿಯಾಗಿದ್ದರಿಂದ ಅದಾನಿ ಸಮೂಹದ ಕಂಪನಿಗಳು 11,300 ಕೋಟಿ ರೂ. ಲಾಭ ಮಾಡಿದವು. ಇದರ ಪರಿಣಾಮವಾಗಿ ಅದಾನಿ ಸಮೂಹದ ಮಾರುಕಟ್ಟೆ ಬಂಡವಾಳ ಪ್ರಮಾಣ ಬುಧವಾರ 200 ಶತಕೋಟಿ ಅಮೆರಿಕನ್ ಡಾಲರ್ (16.9 ಲಕ್ಷ ಕೋಟಿ ರೂ.) ಮಟ್ಟವನ್ನು ಮರಳಿ ಗಳಿಸಿತು. ವಿದ್ಯುತ್ ಕಂಪನಿಗೆ ಕಳಪೆ ಗುಣಮಟ್ಟದ ಕಲ್ಲಿದ್ದಲನ್ನು ಅದಾನಿ ಕಂಪನಿ ಪೂರೈಸಿದ್ದು ಎಂದು ಆಂಗ್ಲ ಪತ್ರಿಕೆಯೊಂದು ಇತ್ತೀಚೆಗೆ ವರದಿ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.

ಚಿನ್ನದ ದರ ಇಳಿಮುಖ: ಜಾಗತಿಕ ಮಟ್ಟದಲ್ಲಿ ಬೆಲೆ ಇಳಿಕೆಯಾದ ಪರಿಣಾಮ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಗುರುವಾರ ಚಿನ್ನದ ದರ 10 ಗ್ರಾಂಗೆ 1,050 ರೂ. ಕಡಿಮೆಯಾಗಿ, 73,550 ರೂ.ಗೆ ತಲುಪಿತು. ಬೆಳ್ಳಿಯ ಬೆಲೆ ಕೂಡ ಕೆಜಿಗೆ 2500 ರೂ.ಗಳಷ್ಟು ಇಳಿದು 92,600 ರೂ.ಗೆ ತಲುಪಿತು.

ಎಂಡಿಎಚ್, ಎವರೆಸ್ಟ್​ನಲ್ಲಿ ಕ್ಯಾನ್ಸರ್​ಕಾರಕ ಅಂಶಗಳಿಲ್ಲ: ಎವರೆಸ್ಟ್, ಎಂಡಿಎಚ್ ಮಸಾಲೆ ಉತ್ಪನ್ನಗಳ ಸ್ಯಾಂಪಲ್​ಗಳಲ್ಲಿ ಕ್ಯಾನ್ಸರ್​ಕಾರಕ ಇಥಿಲೀನ್ ಆಕ್ಸೈಡ್​ನ ಅಂಶಗಳಿಲ್ಲ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್​ಎಸ್​ಎಸ್​ಎಐ) ತಿಳಿಸಿದೆ. ಎರಡೂ ಕಂಪನಿಗಳ ಉತ್ಪನ್ನಗಳ 34 ಸ್ಯಾಂಪಲ್​ಗಳನ್ನು ಕೂಲಂಕಷವಾಗಿ ಪರೀಕ್ಷೆಗೆ ಒಳಪಡಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಅವು ಸೇವನೆಗೆ ಯೋಗ್ಯವಾಗಿವೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net