ಇನ್ನೂ ಶುರುವಾಗಿಲ್ಲ ಅಬಕಾರಿ ನೌಕರರ ವರ್ಗಾವಣೆ: ಇಲಾಖೆಯ ವಿಳಂಬ ಧೋರಣೆಗೆ ಕೆಲವರು ಆತಂಕ- excise employees not transfer

ಅಬಕಾರಿ ಇಲಾಖೆ
ಅಬಕಾರಿ ಇಲಾಖೆ
Published on
ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಗಳು ಮುಕ್ತಾಯ ಹಂತಕ್ಕೆ ಬಂದಿದೆ. ಆದರೆ, ಸರ್ಕಾರದ ಬೊಕ್ಕಸಕ್ಕೆ ಅಧಿಕ ಆದಾಯ ತರುವ ಅಬಕಾರಿ ಇಲಾಖೆಯಲ್ಲಿ ಪ್ರಸಕ್ತ ಸಾಲಿನ ನೌಕರರ ವರ್ಗಾವಣೆ ಪ್ರಕ್ರಿಯೆ ಅಥವಾ ಚಟುವಟಿಕೆಗಳು ಇನ್ನೂ ಶುರುವಾಗಿಲ್ಲ. ಇದರಿಂದಾಗಿ ವರ್ಗಾವಣೆ ನಿರೀಕ್ಷೆಯಲ್ಲಿರುವ ಅಧಿಕಾರಿಗಳು/ ನೌಕರರು ಆತಂಕಗೊಂಡಿದ್ದಾರೆ.
ಕಳೆದ ವರ್ಷ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಸಂದರ್ಭದಲ್ಲಿ ಇಲಾಖೆಯಲ್ಲಿ ಗ್ರೂಪ್ ‘ಸಿ’ ವೃಂದದ 151 ಅಬಕಾರಿ ನಿರೀಕ್ಷಕರು, 114 ಉಪ ನಿರೀಕ್ಷಕರು, 7 ಮುಖ್ಯ ಪೇದೆ ಮತ್ತು 415 ಪೇದೆ ಸೇರಿ ಒಟ್ಟು 687 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸೇವಾವಧಿ ಹಿರಿತನ ಆಧಾರದ ಮೇರೆಗೆ ಕೌನ್ಸೆಲಿಂಗ್ ಮೂಲಕ ವರ್ಗಾಯಿಸಲಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆಯ ಪ್ರಕ್ರಿಯೆ ಪ್ರಾರಂಭವಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕೌನ್ಸಿಲಿಂಗ್ ಮೂಲಕ ಪಾರದರ್ಶಕವಾಗಿ ವರ್ಗಾವಣೆ ಮಾಡುವುದರಿಂದ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಆಸ್ಪದ ಇರುವುದಿಲ್ಲ. ಆದರೆ, ನೌಕರರ ಸೇವಾವಧಿ ಹಿರಿತನ ಪಟ್ಟಿಯನ್ನು ಇಲಾಖೆ ಈವರೆಗೆ ಪ್ರಕಟಿಸಿಲ್ಲ. ಹಾಗಾಗಿ, ಕೌನ್ಸೆಲಿಂಗ್ ವ್ಯವಸ್ಥೆಯನ್ನು ಹಳ್ಳಹಿಡಿಸಲು ಕೆಲ ಬಲಾಢ್ಯ ಅಧಿಕಾರಿಗಳು ಒಳಗೊಳಗೆ ಕಸರತ್ತು ನಡೆಸುತ್ತಿರುವ ಅನುಮಾನ ಶುರುವಾಗಿದೆ. ಜತೆಗೆ, ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳನ್ನು ಮತ್ತು ನೌಕರರನ್ನು ಮೂಲೆಗುಂಪು ಮಾಡುವ ಉದ್ದೇಶ ಇದರ ಹಿಂದೆ ಇದೆ ಅಡಗಿದೆ ಎಂದು ನೌಕರರ ವಲಯದಲ್ಲಿ ಚರ್ಚೆಯಾಗುತ್ತಿದೆ.
ಅಬಕಾರಿ ನೌಕರರು ಅಳಲು:
ಹೊಸ ಶೈಕ್ಷಣಿಕ ವರ್ಷದ ಶಾಲಾ-ಕಾಲೇಜುಗಳು ಈಗಾಗಲೇ ಪ್ರಾರಂಭವಾಗಿವೆ. ವರ್ಗಾವಣೆ ನಿರೀಕ್ಷೆಯಲ್ಲಿರುವ ನೌಕರರು ತಮ್ಮ ಮಕ್ಕಳ ಮುಂದಿನ ವಿದ್ಯಾಭ್ಯಾಸ ಹಾಗೂ ಪ್ರವೇಶಾತಿ ಬಗ್ಗೆ ತೀವ್ರ ಚಿಂತಿತರಾಗಿದ್ದಾರೆ. ಒಂದು ವೇಳೆ ಮುಂಬರುವ ದಿನಗಳಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆದರೆ, ಹೊಸ ಸ್ಥಳಗಳಲ್ಲಿ ತಮ್ಮ ಮಕ್ಕಳಿಗೆ ಶಾಲಾ-ಕಾಲೇಜು ಪ್ರವೇಶ ಕಲ್ಪಿಸುವುದು, ಬಾಡಿಗೆ ಮನೆ ಹುಡುಕುವುದು ತೊಂದರೆಯಾಗಲಿದೆ.ಇಲಾಖೆಯ ವಿಳಂಬ ಧೋರಣೆಯಿಂದ ನೌಕರರು ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದು, ಸರ್ಕಾರ ಮತ್ತು ಉನ್ನತ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಕೌನ್ಸಿಲಿಂಗ್ ಮೂಲಕ ಪಾರದರ್ಶಕ ವರ್ಗಾವಣೆ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ.
ಗ್ರೂಪ್ ‘ಬಿ’ವೃಂದವರು ವಗಾವಣೆಯಾಗಿಲ್ಲ:
ಕಳೆದ ವರ್ಷ ಇಲಾಖೆಯಲ್ಲಿ ಗ್ರೂಪ್ ‘ಸಿ’ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು/ನೌಕರರನ್ನು ಸೇವಾ ಹಿರಿತನ ಆದಾರದಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿತ್ತು. ಇದರಿಂದಾಗಿ ಸಾವಿರಾರು ಅಧಿಕಾರಿಗಳಿಗೆ ಅನುಕೂಲವಾಗುವ ಜತೆಗೆ ವರ್ಗಾವಣೆಗೆ ಕೋಟ್ಯಂತರ ರೂ.ಹಣ ನೀಡುವುದು ತಪ್ಪಿತ್ತು. ಕಳೆದ ಮಾರ್ಚ್‌ನಲ್ಲಿ ನಡೆದ ಬಜೆಟ್‌ನಲ್ಲಿ ಗ್ರೂಪ್ ‘ಬಿ’ ವೃಂದದ ಅಬಕಾರಿ ಉಪ ಅಧೀಕ್ಷಕರು ಮತ್ತು ಅಧೀಕ್ಷಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವ ಬಗ್ಗೆ ಘೋಷಿಸಲಾಗಿತ್ತು. ಅದರಂತೆ, ಈ ಬಾರಿಯ ಸಾರ್ವತ್ರಿಕ ವರ್ಗಾವಣೆ ವೇಳೆ ಅವರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಬೇಕಿತ್ತು. ಆದರೆ, ಈ ಅಧಿಕಾರಿಗಳ ಪ್ರಕ್ರಿಯೆಯನ್ನೂ ಇಲಾಖೆ ಶುರು ಮಾಡಿಲ್ಲ.
ವರ್ಷದಿಂದ ಕೆಲವರಿಗೆ ಪೋಸ್ಟಿಂಗ್ ಸಿಕ್ಕಿಲ್ಲ:
ನ್ಯಾಯಾಂಗ ವ್ಯಾಜ್ಯಗಳ ಪರಿಣಾಮದಿಂದ ಕಳೆದ ವರ್ಷ ಆನ್‌ಲೈನ್ ಮೂಲಕ ವರ್ಗಾವಣೆಗೊಂಡಿದ್ದ ಕೆಲ ಅಬಕಾರಿ ನಿರೀಕ್ಷಕರಿಗೆ ವರ್ಷದಿಂದ ಪೋಸ್ಟಿಂಗ್ ಸಿಕ್ಕಿಲ್ಲ. ಇದರಿಂದಾಗಿ ಹುದ್ದೆಯೂ ಇಲ್ಲದೆ ಮತ್ತು ವೇತನವೂ ಸಿಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಇಲಾಖೆಯ ಉನ್ನತ ಅಧಿಕಾರಿಗಳು ಸಮಸ್ಯೆಯನ್ನು ತಕ್ಷಣ ಬಗೆಹರಿಸುವ ಕೆಲಸ ಮಾಡಬೇಕೆಂದು ನೊಂದ ಅಬಕಾರಿ ನಿರೀಕ್ಷಕರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net